ಸಚಿವ ಸ್ಥಾನ: ಜಾತಿ, ಪ್ರಾದೇಶಿಕತೆಗೆ ‘ಕೈ’ ಮಣೆ?

7
ಆರು ಸಚಿವ ಸ್ಥಾನಗಳ ಮೇಲೆ 20ಕ್ಕೂ ಹೆಚ್ಚು ಆಕಾಂಕ್ಷಿಗಳ ಕಣ್ಣು

ಸಚಿವ ಸ್ಥಾನ: ಜಾತಿ, ಪ್ರಾದೇಶಿಕತೆಗೆ ‘ಕೈ’ ಮಣೆ?

Published:
Updated:

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಸಮನ್ವಯ ಸಮಿತಿ ಹಸಿರು ನಿಶಾನೆ ತೋರಿಸಿದ ಬೆನ್ನಲ್ಲೆ, ಸಚಿವಾಕಾಂಕ್ಷಿಗಳ ಲಾಬಿ ಚುರುಕು ಪಡೆದಿದೆ.

ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆ ಸಂಪುಟ ವಿಸ್ತರಣೆ ದಿನ ನಿಗದಿಯಾಗಲಿದೆ. ಕೈ ಪಾಳಯಕ್ಕೆ ಹಂಚಿಕೆಯಾಗಿ ಖಾಲಿ ಇರುವ ಆರು ಸಚಿವ ಸ್ಥಾನಗಳಿಗೆ 20ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಆಯ್ಕೆ ವಿಷಯವು ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಪ್ರಾದೇಶಿಕ ಮತ್ತು ಜಾತಿವಾರು ಲೆಕ್ಕಾಚಾರದಲ್ಲಿ ಸಚಿವ ಸ್ಥಾನ ನೀಡಲು ಪಕ್ಷದ ಆಂತರಿಕ ವಲಯದಲ್ಲಿ ಈಗಾಗಲೇ ಚರ್ಚೆ ನಡೆದಿದೆ. ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಅನುಕೂಲವಾಗುವಂತೆ ಅಂತಿಮ ನಿರ್ಧಾರಕ್ಕೆ ಬರಲು ಪಕ್ಷ ಮುಂದಾಗಿದೆ.

ಎಂ.ಬಿ. ಪಾಟೀಲ (ಲಿಂಗಾಯತ), ರಾಮಲಿಂಗಾರೆಡ್ಡಿ (ರೆಡ್ಡಿ–ಒಕ್ಕಲಿಗ), ಸಿ.ಎಸ್‌. ಶಿವಳ್ಳಿ (ಕುರುಬ), ಈ. ತುಕಾರಾಂ (ಎಸ್‌ಟಿ) ಹೆಸರು ಸಚಿವ ಸ್ಥಾನದ ಸಂಭವನೀಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಬಿ.ಕೆ. ಸಂಗಮೇಶ್ವರ, ಎಂ.ಟಿ.ಬಿ. ನಾಗರಾಜ್, ಬಿ.ಸಿ. ಪಾಟೀಲ ಹೆಸರೂ ಓಡಾಡುತ್ತಿವೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಸರ್ಕಾರ ರಚನೆಯ ವೇಳೆ ಸಂಪುಟ ಸೇರಲು ಅವಕಾಶ ಸಿಕ್ಕಿಲ್ಲ ಎಂದು ಬಂಡಾಯದ ಬಾವುಟ ಹಾರಿಸಿದ್ದ ಹಿರಿಯ ಶಾಸಕರಾದ ಎಂ.ಬಿ. ಪಾಟೀಲ ಮತ್ತು ಎಚ್‌.ಕೆ. ಪಾಟೀಲರ ಅಸಮಾಧಾನವನ್ನು ವರಿಷ್ಠರು ಶಮನಗೊಳಿಸಿದ್ದರು. ಈ ‘ಪಾಟೀಲ’ದ್ವಯರು ಸಂಪುಟ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.

ಜೊತೆಗೆ, ಮತ್ತೊಬ್ಬ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಕೂಡಾ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಒಕ್ಕಲಿಗ ಕೋಟಾದಲ್ಲಿ ಎಂ. ಕೃಷ್ಣಪ್ಪ ಕೂಡಾ ಆಕಾಂಕ್ಷಿಯಾಗಿದ್ದಾರೆ. 2-3 ಬಾರಿ ಶಾಸಕರಾಗಿ ಆಯ್ಕೆಯಾದರೂ ಅವಕಾಶ ಸಿಗದ ಕಾರಣಕ್ಕೆ ಮುನಿಸಿಕೊಂಡವರೂ ಮತ್ತೊಮ್ಮೆ ಒತ್ತಡ ತಂತ್ರಕ್ಕೆ ಮುಂದಾಗಿದ್ದಾರೆ. ಈ ಪೈಕಿ, ಡಾ. ಸುಧಾಕರ್‌, ಎಂ.ಟಿ.ಬಿ. ನಾಗರಾಜ್‌, ಎಸ್‌.ಟಿ. ಸೋಮಶೇಖರ್‌ ಮುಂಚೂಣಿಯಲ್ಲಿದ್ದಾರೆ.

ಬಿ.ಸಿ. ಪಾಟೀಲ, ಪ್ರತಾಪ್ ಗೌಡ ಪಾಟೀಲ, ರೂಪಾ ಶಶಿಧರ್, ಲಕ್ಷ್ಮೀ ಹೆಬ್ಬಾಳಕರ, ವಿ.ಎಸ್. ಉಗ್ರಪ್ಪ ಕೂಡ ಸಚಿವ ಸ್ಥಾನದ ಕನಸು ಕಾಣುತ್ತಿದ್ದಾರೆ.

ಹಿರಿಯರಿಗೆ ಅವಕಾಶ ಬೇಡ ಎಂಬ ತೀರ್ಮಾನಕ್ಕೆ ಬಂದರೆ 2–3 ಬಾರಿ ಶಾಸಕರಾದವರಿಗೆ ಅದೃಷ್ಟ ಒಲಿಯುವುದು ಖಚಿತ. 20 ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಬಗ್ಗೆ ತೀರ್ಮಾನಕ್ಕೆ ಬರಲಾಗಿದ್ದು ಆ ಪೈಕಿ, 12 ಶಾಸಕರ ಹೆಸರೂ ಕೂಡ ಅಂತಿಮಗೊಂಡಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !