ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ’

ಧಾರಾವಾಡ ಲೋಕಸಭಾ ಕ್ಷೇತ್ರ: ವಿಳಂಬಕ್ಕೆ ವಿನಯ ಕುಲಕರ್ಣಿ ಬೇಸರ
Last Updated 28 ಮಾರ್ಚ್ 2019, 20:11 IST
ಅಕ್ಷರ ಗಾತ್ರ

ಧಾರವಾಡ: ಧಾರವಾಡ ಕ್ಷೇತ್ರದಲ್ಲಿ ಪಕ್ಷದಿಂದ ಟಿಕೆಟ್‌ ಸಿಗದೇ ಹೋದರೆ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವನ್ನು ಕಾಂಗ್ರೆಸ್‌ ಮುಖಂಡ ವಿನಯ ಕುಲಕರ್ಣಿ ನೀಡಿದ್ದಾರೆ. ‌

‘ಕ್ಷೇತ್ರದ ಹಿತದೃಷ್ಟಿಯಿಂದ, ‘ಕುತಂತ್ರಿ’ ಪ್ರಹ್ಲಾದ ಜೋಶಿಯನ್ನು ಸೋಲಿಸಲು ಪಕ್ಷ ಟಿಕೆಟ್‌ ನೀಡಿದರೆ ಸರಿ; ಇಲ್ಲವಾದಲ್ಲಿ ಸ್ವತಂತ್ರ ಸ್ಪರ್ಧೆ ಖಚಿತ’ ಎಂದಿರುವ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ವಿರುದ್ಧವೂ ಹರಿಹಾಯ್ದಿದ್ದಾರೆ.

ಸಿದ್ಧರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದ ಮತ್ತು ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿನಯ ಕುಲಕರ್ಣಿ ಈ ಬಾರಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರ ಹೆಸರೇ ಬಹುತೇಕ ಅಂತಿಮ ಎಂದೆನ್ನುವ ಹೊತ್ತಿನಲ್ಲೇ ಮಾಜಿ ಸಂಸದ ಐ.ಜಿ. ಸನದಿ ಅವರ ಹೆಸರು ಕೇಳಿಬರುತ್ತಿರುವುದು ಮತ್ತು ಈವರೆಗೂ ಟಿಕೆಟ್ ಘೋಷಣೆಯಾಗದೇ ಇರುವುದಕ್ಕೆ ಅವರು ಭ್ರಮನಿರಸನಗೊಂಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಧಾರವಾಡ ಕ್ಷೇತ್ರದಲ್ಲಿ ಪ್ರಬಲ ಲಿಂಗಾಯತ ಮುಖಂಡ ಯಾರು ಎಂದು ಹೈಕಮಾಂಡ್ ಕೇಳಿದರೆ, ಕೆಪಿಸಿಸಿ ಅಧ್ಯಕ್ಷರು ಸದಾನಂದ ಡಂಗನವರ ಅವರ ಹೆಸರನ್ನು ಕಳುಹಿಸಿದ್ದಾರೆ’ ಎಂದರು.

ಸದ್ಯ ದೆಹಲಿಯಲ್ಲೇ ಬೀಡುಬಿಟ್ಟಿರುವ ವಿನಯ ಬೆಂಬಲಕ್ಕೆ ಕ್ಷೇತ್ರದ ಜೆಡಿಎಸ್ ಮುಖಂಡರೂ ತೆರಳಿದ್ದಾರೆ. ಎಂ.ಬಿ.ಪಾಟೀಲ ಅವರೂ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸುತ್ತಿರುವ ಕುರಿತು ಮೂಲಗಳು ಹೇಳಿವೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಈವರೆಗೂ ಕಾಂಗ್ರೆಸ್ ತನ್ನ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಗುರುರಾಜ ಹುಣಸಿಮರದ, ‘ವಿನಯ ಅವರಿಗೆ ಟಿಕೆಟ್ ಬಹುತೇಕ ಖಚಿತವಾಗಲಿದೆ. ಅವರು ಟಿಕೆಟ್ ಅಂತಿಮಗೊಳ್ಳದ ಕಾರಣ ಬೇಸರದಿಂದ ಹಾಗೆ ಮಾತನಾಡಿರಬಹುದು’ ಎಂದರು.

ಈ ನಡುವೆ, ವಿನಯ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಹರಿಯ ಬಿಟ್ಟಿದ್ದಾರೆ. ‘ಕಾಂಗ್ರೆಸ್ ಮುಖಂಡರಾದ ಆರ್‌.ವಿ.ದೇಶಪಾಂಡೆ ಮತ್ತು ದಿನೇಶ ಗುಂಡೂರಾವ್ ಅವರೊಂದಿಗೆ ಪ್ರಹ್ಲಾದ ಜೋಶಿ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಜಾತಿಬಾಂಧವರು ಒಂದಾಗಿ ಪ್ರಬಲ ಸ್ಪರ್ಧಿ ವಿನಯ ಕುಲಕರ್ಣಿಗೆ ಟಿಕೆಟ್‌ ತಪ್ಪಿಸಲು ಹುನ್ನಾರ ನಡೆಸಿದ್ದಾರೆ. ಈ ಬಾರಿ ಜೋಶಿ ಸೋಲಿಸಲುಲಿಂಗಾಯತರೊಂದಿಗೆ ಕುರುಬರು, ದಲಿತರು, ಮರಾಠರು, ಮುಸಲ್ಮಾನರು ಒಟ್ಟಾಗಿ ವಿನಯ ಕುಲಕರ್ಣಿ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ವಿನಯ ಸ್ಪರ್ಧೆ ಖಚಿತ’ ಎಂದಿದ್ದಾರೆ.

‘ಪ್ರಹ್ಲಾದ ಜೋಶಿ ಈಗಾಗಲೇ ತಮ್ಮದೇ ಪಕ್ಷದ ರಾಜೇಂದ್ರ ಗೋಖಲೆ, ರಂಗಾ ಬದ್ದಿ ಮುಂತಾದವರನ್ನು ತುಳಿದು ಸಂಸದರಾಗಿದ್ದಾರೆ. ಇಂಥ ವ್ಯಕ್ತಿಯನ್ನು ಮನೆಗೆ ಕಳುಹಿಸಲು ಎಲ್ಲಾ ವರ್ಗದವರೂ ಒಂದಾಗಿದ್ದಾರೆ. ಒಂದೊಮ್ಮೆ ವಿನಯ ಅವರಿಗೆ ಕಾಂಗ್ರೆಸ್‌ ಕೈ ಕೊಟ್ಟರೂ, ಕ್ಷೇತ್ರದ ಜನ ಅವರ ಕೈ ಹಿಡಿಯಲಿದ್ದಾರೆ’ ಎಂದು ಕಾಂಗ್ರೆಸ್‌ ಕಾರ್ಯಕರ್ತ ವಿನಾಯಕ ತಾಂಬೇಕರ್ ಹಾಕಿರುವ ಪೋಸ್ಟ್ ವ್ಯಾಪಕವಾಗಿ ಹರಿದಾಡುತ್ತಿದ್ದು, ಚರ್ಚೆಗೆ ಕಾರಣವಾಗಿದೆ.

* ನಾನು ನಡೆಸಿದ ಹೋರಾಟ ಇವರಿಗೆ ಗೊತ್ತಿಲ್ಲವೇ? ಹಾಗಿದ್ದರೆ ಪಕ್ಷಕ್ಕೆ ನನ್ನ ಅಗತ್ಯವಾದರೂ ಏನಿದೆ? ಕ್ಷೇತ್ರದ ಜನತೆ ಬಯಸಿದಲ್ಲಿ ಕಣಕ್ಕಿಳಿಯುವುದು ನಿಶ್ಚಿತ

- ವಿನಯ ಕುಲಕರ್ಣಿ, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT