ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ನಾಡಿಮಿಡಿತ ಅರಿಯಲು ‘ಕೈ’ ಸಮೀಕ್ಷೆ

ಗುಜರಾತ್‌ ಮೂಲದ ‘ವಿಶ್ವಾಸಾರ್ಹ’ ಸಂಸ್ಥೆಗೆ ಎಐಸಿಸಿಯಿಂದ ಹೊಣೆ
Last Updated 19 ಮೇ 2019, 5:40 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ, ರಾಜ್ಯದ ಪ್ರತಿ ಕ್ಷೇತ್ರಗಳ ವಸ್ತುಸ್ಥಿತಿ, ಮತದಾರರ ಒಲವು– ನಿಲುವು, ನಾಡಿಮಿಡಿತ ಅರಿಯುವ ಉದ್ದೇಶದಿಂದ ಕಾಂಗ್ರೆಸ್‌ ಸಮೀಕ್ಷೆಯ ಮೊರೆ ಹೋಗಿದೆ.

ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ಪರಿಣಾಮ ಬೀಳುವ ಅಂಶಗಳು, ರಾಜಕೀಯ ಪಕ್ಷಗಳ ಸ್ಥಿತಿ, ಹಾಲಿ ಸಂಸದರ ಸಾಧನೆ, ಐದು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದ ಸರ್ಕಾರಗಳ ಸಾಧನೆ, ಪರಿಣಾಮ, ಯಾರು ಸೂಕ್ತ ಅಭ್ಯರ್ಥಿ ಮುಂತಾದ ಅಂಶಗಳ ಮೇಲೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಕೆಪಿಸಿಸಿಯ ಸಂಶೋಧನಾ ಘಟಕ ಈಗಾಗಲೇ ಪ್ರತಿ ಕ್ಷೇತ್ರಗಳ ಅಂಕಿಅಂಶಗಳನ್ನು ಸಂಗ್ರಹಿಸಿ ವರದಿಯೊಂದನ್ನು ಸಿದ್ಧಪಡಿಸಿದೆ. ಈ ಬೆನ್ನಲ್ಲೆ, ಎಐಸಿಸಿ ಸೂಚನೆಯಂತೆ ಗುಜರಾತ್‌ ಮೂಲದ ಖಾಸಗಿ ಸಂಸ್ಥೆ ಸಮೀಕ್ಷೆ ಕೈಗೊಂಡಿದೆ. ಈ ಸಂಸ್ಥೆಗೆ ಮುಂಬೈ ಮತ್ತು ದೆಹಲಿಯಲ್ಲೂ ಕಚೇರಿಗಳಿದ್ದು, ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ಜಗನ್‌ ಮೋಹನ್‌ ರೆಡ್ಡಿ ಕೂಡಾ ಈ ಸಂಸ್ಥೆಯ ಮೂಲಕವೇ ಸಮೀಕ್ಷೆ ನಡೆಸುತ್ತಿದ್ದಾರೆ. ಈ ಸಂಸ್ಥೆ ಹೆಚ್ಚು ವಿಶ್ವಾಸಾರ್ಹತೆ ಹೊಂದಿದೆ ಎನ್ನಲಾಗಿದೆ.

‘2013ರ ಚುನಾವಣೆಯ ಸಂದರ್ಭದಲ್ಲಿ ಹಿರಿಯ ನಾಯಕ ಮಧುಸೂಧನ್‌ ಮಿಸ್ತ್ರಿಯವರು ಈ ಸಂಸ್ಥೆಯ ಮೂಲಕ ಮೊದಲ ಬಾರಿಗೆ ರಾಜ್ಯದಲ್ಲಿ ಸಮೀಕ್ಷೆ ನಡೆಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲೂ ಇದೇ ಸಂಸ್ಥೆ ಪಕ್ಷಕ್ಕಾಗಿ ಸಮೀಕ್ಷೆ ನಡೆಸಿತ್ತು. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಗೂ ಮೊದಲು ಸಮೀಕ್ಷೆ ನಡೆಸಿದ್ದ ಈ ಸಂಸ್ಥೆ, ರಾಜ್ಯದಲ್ಲಿ ಕಾಂಗ್ರೆಸ್‌ 80ರಿಂದ 100 ಸ್ಥಾನ ಗಳಿಸಲಿದೆ ಎಂದು ಅಂದಾಜಿಸಿತ್ತು. ಸಮೀಕ್ಷೆ ಹೆಚ್ಚು ನಿಖರವಾಗಿರುತ್ತದೆ’ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಈಗಾಗಲೇ ಸಮೀಕ್ಷೆ ಪೂರ್ಣಗೊಂಡಿದ್ದು, ಮಾರ್ಚ್‌ ಮೊದಲ ವಾರದಲ್ಲಿ ಎಐಸಿಸಿಗೆ ವರದಿ ಸಲ್ಲಿಕೆಯಾಗಲಿದೆ. ಬಳಿಕ, ಮಾರ್ಚ್‌ 1ರಿಂದ 25 ಮಧ್ಯದ ರಾಜಕೀಯ ಸ್ಥಿತಿಗತಿಗಳ ಕುರಿತು ಮತ್ತೊಂದು ಬಾರಿ ಈ ಸಂಸ್ಥೆ ಸಮೀಕ್ಷೆ ಕೈಗೊಳ್ಳಲಿದೆ.

ಗುಪ್ತಚರ ಮೂಲಗಳು ಮತ್ತು ಜಿಲ್ಲಾ ಘಟಕಗಳು ನೀಡುವ ಆಂತರಿಕ ವರದಿಯ ಆಧಾರದಲ್ಲಿ ಲೋಕಸಭೆ ಚುನಾ
ವಣೆಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್‌ ನಾಯಕರು ಸಿದ್ಧಪಡಿಸಲಿದ್ದಾರೆ. ಈ ಪಟ್ಟಿ ಮತ್ತು ಸಮೀಕ್ಷೆಯಲ್ಲಿರುವ ಅಂಶಗಳನ್ನು ಮಾನದಂಡವಾಗಿ ಪರಿಗಣಿಸಿ, ಯಾರಿಗೆ ಟಿಕೆಟ್‌ ನೀಡಬೇಕೆಂದು ವರಿಷ್ಠರು ತೀರ್ಮಾನಿಸಲಿದ್ದಾರೆ. ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ ಮೊದಲ ವಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದೂ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT