ಕಾರವಾರ: ಬೇಕರಿಯ ಸಿಹಿ ತಿನಿಸು ರಸ್ತೆಗೆಸೆದ ಕಾಂಗ್ರೆಸ್ ಕಾರ್ಯಕರ್ತ

7
ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ: ಶಿರಸಿಯಲ್ಲಿ ರಸ್ತೆಯಲ್ಲೇ ಚಹಾ ಮಾಡಿ ಕುಡಿದ ಪ್ರತಿಭಟನಾಕಾರರು

ಕಾರವಾರ: ಬೇಕರಿಯ ಸಿಹಿ ತಿನಿಸು ರಸ್ತೆಗೆಸೆದ ಕಾಂಗ್ರೆಸ್ ಕಾರ್ಯಕರ್ತ

Published:
Updated:
Deccan Herald

ಕಾರವಾರ: ಅಂಕೋಲಾ ಪಟ್ಟಣದ ಅಂಬಾರಕೊಡ್ಲದಲ್ಲಿ ಬೆಳಿಗ್ಗೆ ತೆರೆದಿದ್ದ ಪೂಜಾ ಸ್ವೀಟ್ಸ್ ಮತ್ತು ಬೇಕರಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಬಾಗಿಲು ಮುಚ್ಚಿಸಿದ್ದಾರೆ.

ಬೇಕರಿಯ ಬಾಗಿಲು ಮುಚ್ಚಿ ಬಂದ್‌ಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಹೇಳಿದರು. ಆದರೆ, ಅದಕ್ಕೆ ಬೇಕರಿ ಮಾಲೀಕರು ಒಪ್ಪದ ಕಾರಣ ಆಕ್ರೋಶಗೊಂಡ ಕಾರ್ಯಕರ್ತನೊಬ್ಬ ಸುಮಾರು ಮೂರು ಕೆ.ಜಿ.ಗಳಷ್ಟು ಸಿಹಿ ತಿನಿಸನ್ನು ರಸ್ತೆಗೆ ಎಸೆದಿದ್ದಾರೆ. ಇದರಿಂದ ಬೇಕರಿ ಮಾಲೀಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ರಸ್ತೆಯಲ್ಲಿ ಅಡುಗೆ: ಕಾಂಗ್ರೆಸ್ ಜಿಲ್ಲಾ ಸಮಿತಿಯು ಶಿರಸಿಯ ನಡು ರಸ್ತೆಯಲ್ಲಿ ಅಡುಗೆ ಮಾಡಿ ಪ್ರತಿಭಟಿಸಿತು. ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು, ರಸ್ತೆ ಮಧ್ಯೆ ಸಿಲಿಂಡರ್ ಇಟ್ಟು ಚಹಾ ಮಾಡಿ ಕುಡಿದರು. ತರಕಾರಿ ತಂದು ಅಡುಗೆ ಪ್ರಾರಂಭಿಸಿದರು. ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ನಗರದಲ್ಲಿ ಬಸ್, ಆಟೊರಿಕ್ಷಾ ಸಂಚಾರ ಎಂದಿನಂತೆ ಇದೆ. ಟೆಂಪೊ‌ ಸಂಚಾರ ಸ್ಥಗಿತಗೊಂಡಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ಪೇಟೆಯಲ್ಲಿ ಕೆಲವು ಅಂಗಡಿಗಳ ಬಾಗಿಲು ತೆರೆಯಲಾಗಿದೆ.

ಕಾರವಾರದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು, ಹೋಟೆಲ್ ಮುಚ್ಚಿವೆ. ಬಸ್, ಆಟೊರಿಕ್ಷಾ, ಗ್ರಾಮೀಣ ಭಾಗಗಳಿಗೆ ಹೋಗುವ ಮಿನಿ ಟೆಂಪೋಗಳ ಸಂಚಾರವಿಲ್ಲ. ಸರಕು ಸಾಗಣೆ ವಾಹನಗಳು ರಸ್ತೆ ಬದಿ ನಿಂತಿವೆ. 

ತಾಲ್ಲೂಕು ಕೇಂದ್ರಗಳಲ್ಲಿ ಬಂದ್‌ಗೆ ಬೆಳಿಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಟ್ಕಳದ ಮಾರಿಕಟ್ಟೆ, ಹಳೆ ಬಸ್ ನಿಲ್ದಾಣದ ಸುತ್ತಮುತ್ತ ಮಾತ್ರ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಾಗಿಲು ಮುಚ್ಚಿವೆ. ಬಸ್, ಆಟೊರಿಕ್ಷಾ ಸಂಚಾರ ಎಂದಿನಂತೇ ಇದೆ.

ಮುಂಡಗೋಡದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು ಟೆಂಪೊ, ರಿಕ್ಷಾಗಳು ಬೆರಳೆಣಿಕೆಯಷ್ಟು ಸಂಚರಿಸುತ್ತಿವೆ. ಅಂಗಡಿ ಮುಂಗಟ್ಟುಗಳು ಎಂದಿನಂತೆ ವಹಿವಾಟು ನಡೆಸಿವೆ. ವಾರದ ಸಂತೆಗೆ ವ್ಯಾಪಾರಸ್ಥರು ಬಂದಿದ್ದು, ಸಂತೆಗೆ ಗ್ರಾಮೀಣ ಭಾಗದಿಂದ ಬರುವ ಜನರಿಗೆ ಬಸ್‌ಗಳಿಲ್ಲದೆ ತೊಂದರೆಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಿದ್ದಾರೆ.

 ಯಲ್ಲಾಪುರದಲ್ಲಿ ಭಾಗಶಃ ಅಂಗಡಿ ಮುಗ್ಗಟ್ಟುಗಳು ಮುಚ್ಚಿವೆ. ಬಸ್ ಸಂಚಾರ ಸ್ಥಗಿತಗೊಂಡಿದೆ. ರಿಕ್ಷಾ ಹಾಗೂ ಟ್ಯಾಕ್ಸಿ ಸಂಘದವರು ಬಂದ್ ಬೆಂಬಲಿಸಿ ವಾಹನಗಳನ್ನು ರಸ್ತೆಗಿಳಿಸಲಿಲ್ಲ. ಗಣೇಶ ಚೌತಿ ಹಬ್ಬ ಬಂದಿರುವ ಕಾರಣ ಒತ್ತಾಯ ಪೂರ್ವಕ ಬಂದ್ ಆಚರಿಸಲಾಗುವುದಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.

ಸಿದ್ದಾಪುರದಲ್ಲಿ ಕೂಡ ಭಾಗಶಃ ಅಂಗಡಿಗಳು ಮುಚ್ಚಿದ್ದವು. ಬಸ್, ವಾಹನಗಳ ಸಂಚಾರವಿಲ್ಲ. ಹೀಗಾಗಿ ಪಟ್ಟಣದಲ್ಲಿ ಜನರ ಸಂಚಾರವೂ ಕಡಿಮೆಯಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !