ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

206 ಹೆದ್ದಾರಿ ಚತುಷ್ಪಥ ನಿರ್ಮಾಣ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ

Last Updated 15 ಡಿಸೆಂಬರ್ 2018, 8:44 IST
ಅಕ್ಷರ ಗಾತ್ರ

ತುಮಕೂರು: ರಾಷ್ಟ್ರೀಯ ಹೆದ್ದಾರಿ 206 ಚತುಷ್ಪಥ ನಿರ್ಮಾಣ ಕಾಮಗಾರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಡಿಸೆಂಬರ್‌ 16 ರಂದು ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದುಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಷ್ಟ್ರೀಯ ಹೆದ್ದಾರಿ 206 ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ, ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೆದ್ದಾರಿ. ಇಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಹೀಗಾಗಿ ಚತುಷ್ಪಥ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಮೇಲೆ ಸತತ ಒತ್ತಡ ಹಾಕಿದ ಪರಿಣಾಮ ಕಾಮಗಾರಿ ಮಂಜೂರಾಗಿದೆ. ಈ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಶಿವಮೊಗ್ಗ ಜಿಲ್ಲೆಯವರೆಗೂ ನಡೆಯಲಿದೆ’ ಎಂದರು.

ಈ ಹೆದ್ದಾರಿ ಒಂದು ರೀತಿಯಲ್ಲಿ ನಮ್ಮ ಜಿಲ್ಲೆಗೆ ಬೆನ್ನು ಮೂಳೆ ಇದ್ದ ಹಾಗಿದೆ. ಭವಿಷ್ಯದಲ್ಲಿ ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗಲಿದೆ ಎಂದರು.

ಕಾಮಗಾರಿ ಮೊತ್ತ: ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 97 ಕಿ.ಮೀ ಚತುಷ್ಪಥ ನಿರ್ಮಾಣ ಆಗಲಿದೆ. 97 ಕಿ.ಮೀ ಕಾಮಗಾರಿಗೆ ನಿಗದಿಪಡಿಸಿದ ಮೊತ್ತ ₹ 2032 ಕೋಟಿ, ₹ 700 ಕೋಟಿ ಭೂ ಸ್ವಾಧೀನ ಪರಿಹಾರ ನೀಡಲಾಗುತ್ತಿದೆ. ಒಟ್ಟಾರೆ ₹ 2700 ಕೋಟಿ ಮೊತ್ತವನ್ನು ನಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವೆಚ್ಚ ಮಾಡುತ್ತಿದೆ ಎಂದು ವಿವರಿಸಿದರು.

ಭೂ ಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಕೆಲ ರೈತರ ಆಕ್ಷೇಪಗಳಿದ್ದು, ಭಾನುವಾರ ಶಂಕು ಸ್ಥಾಪನೆ ಬಳಿಕ ಉಪಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಹೆದ್ದಾರಿ ಪ್ರಾಧಿಕಾರದ ಮೇಲೆ ಸತತ ಒತ್ತಡ ಹೇರಿ ರೈತರಿಗೆ ಹೆಚ್ಚಿನ ಪರಿಹಾರ ದೊರಕಿಸಿ ಕೊಡುವ ಪ್ರಯತ್ನ ಮಾಡಿದ್ದೇನೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT