ಶುಕ್ರವಾರ, ನವೆಂಬರ್ 15, 2019
20 °C
ಸಿಸಿಬಿಯಲ್ಲಿ ಆಮೂಲಾಗ್ರ ಬದಲಾವಣೆ; ಮಹಿಳೆಯರ ಸುರಕ್ಷತೆಗೂ ಘಟಕ

ಉಗ್ರ ನಿಗ್ರಹಕ್ಕೆ ‘ಎಟಿಸಿ’

Published:
Updated:
Prajavani

ಬೆಂಗಳೂರು: ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಉಗ್ರಗಾಮಿ ಸಂಘಟನೆಯು ತನ್ನ ಜಾಲವನ್ನು ವಿಸ್ತರಿಸಿಕೊಳ್ಳಲು ಬೆಂಗಳೂರು ನಗರವನ್ನು ಬಳಸಿಕೊಳ್ಳುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಹಿರಂಗಪಡಿಸಿದ ಬೆನ್ನಲ್ಲೇ ನಗರಕ್ಕೆ ಪ್ರತ್ಯೇಕ ‘ಭಯೋತ್ಪಾದನೆ ನಿಗ್ರಹ ದಳ’ (ಎಟಿಸಿ) ರಚಿಸಲಾಗಿದೆ.

ಕೇಂದ್ರ ಅಪರಾಧ ದಳದ (ಸಿಸಿಬಿ) ಅಡಿಯಲ್ಲಿ ರಚನೆಯಾಗಲಿರುವ ಈ ದಳ, ನಗರದಲ್ಲಿನ ಉಗ್ರಗಾಮಿ ಚಟುವಟಿಕೆಯ ಮಾಹಿತಿ ಸಂಗ್ರಹ, ಉಗ್ರಗಾಮಿ ಸಂಬಂಧಿಸಿ ದುಷ್ಕೃತ್ಯಗಳ ತನಿಖೆ ಮತ್ತು ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣಗಳನ್ನು ನಿರ್ವಹಿಸಲಿದೆ.

ಉಗ್ರರ ಸುಳಿವು, ಸ್ಲೀಪರ್ ಸೆಲ್‌ಗಳ ಕಾರ್ಯಾಚರಣೆ, ಬಾಂಗ್ಲಾ ಉಗ್ರರ ನುಸುಳುವಿಕೆ, ಅಕ್ರಮ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಆಂತರಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ಎಲ್ಲ ಕಾರಣಗಳಿಗೆ, ಎಟಿಸಿ ರಚಿಸಲಾಗಿದ್ದು, ಸಿಸಿಬಿ ಡಿಸಿಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಅವರಿಗೆ ಈ ಘಟಕದ ಉಸ್ತುವಾರಿ ನೀಡಲಾಗಿದೆ.

ಅಲ್ಲದೆ, ಮಾದಕ ವಸ್ತುಗಳ ಅಕ್ರಮ ಜಾಲವನ್ನು ನಿಯಂತ್ರಿಸಲು ಮತ್ತು ಮಹಿಳೆಯರ ಸುರಕ್ಷತೆ ಮತ್ತು ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಸಿಸಿಬಿ ಅಡಿಯಲ್ಲೇ ಪ್ರತ್ಯೇಕ ಘಟಕಗಳನ್ನು ಆರಂಭಿಸಲಾಗಿದೆ. ಈ ಹೊಸ ವ್ಯವಸ್ಥೆಗಳ ನೇತೃತ್ವವನ್ನು ಕೆ.ಪಿ. ರವಿಕುಮಾರ್‌ ಅವರಿಗೆ ವಹಿಸಲಾಗಿದೆ.

‘ನಗರದಲ್ಲಿ ಮಹಿಳೆಯರ ರಕ್ಷಣೆ, ವಿದ್ಯಾರ್ಥಿ, ಯುವಜನರಿಗೆ ಸಾಮಾಜಿಕ ಪಿಡುಗಾಗಿ ಪರಿಣಮಿಸಿರುವ ಮಾದಕ ದ್ರವ್ಯ ಜಾಲವನ್ನು ನಿಯಂತ್ರಿಸಬೇಕಾಗಿದೆ. ಜೊತೆಗೆ ಸಂಚು ರೂಪಿಸಿ, ನೆಲೆ ಸ್ಥಾಪಿಸಲು ಹವಣಿಸುತ್ತಿರುವ ಉಗ್ರಗಾಮಿ ಸಂಘಟನೆಗಳ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಉದ್ದೇಶದಿಂದ ಸಿಸಿಬಿ ಘಟಕಗಳ ಕಾರ್ಯವ್ಯಾಪ್ತಿಯ ರಚನೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಲಾಗಿದೆ’ ಎಂದು ಸಿಸಿಬಿ ಜಂಟಿ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ ತಿಳಿಸಿದರು.

ಸಿಸಿಬಿಯಲ್ಲಿರುವ ಸಂಘಟಿತ ಅಪರಾಧ ದಳ, ರೌಡಿ ಚಟುವಟಿಕೆ ನಿಯಂತ್ರಣ ಮತ್ತು ಸಂಘಟಿತ ಅಪರಾಧಗಳ ತನಿಖೆ ನಡೆಸಲಿದೆ. ಮಾದಕ ವಸ್ತುಗಳ ನಿಗ್ರಹ ವಿಭಾಗವು ಡ್ರಗ್ಸ್‌ ಮಾರಾಟ ಅಕ್ರಮಗಳನ್ನು ನಿಯಂತ್ರಿಸಿದರೆ, ವಿಶೇಷ ವಿಚಾರಣಾ ದಳ ನ್ಯಾಯಾಲಯಗಳಿಂದ, ಹಿರಿಯ ಅಧಿಕಾರಿಗಳಿಂದ ವಹಿಸಲಾಗುವ ಉನ್ನತ ಮಟ್ಟದ ತನಿಖೆ, ವಿಚಾರಣೆಯ ಜವಾಬ್ದಾರಿಯನ್ನು ನಿರ್ವಹಿಸಲಿದೆ.

ಭಾರಿ ಪ್ರಮಾಣದ ವಂಚನೆ, ಆರ್ಥಿಕ ಅಪರಾಧಗಳು, ಮೋಸ ಮಾಡುವ ಕಂಪನಿಗಳ ಕುರಿತು ತನಿಖೆಯನ್ನು ಆರ್ಥಿಕ ಅಪರಾಧ ದಳ ಮಾಡಲಿದೆ. ಹೊಸತಾಗಿ ರಚನೆಯಾಗಿರುವ ಮಹಿಳಾ ಸುರಕ್ಷತಾ ದಳ, ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ತನಿಖೆ, ವೇಶ್ಯಾವಾಟಿಕೆ ನಿಯಂತ್ರಣ ಮತ್ತು ಮಾನವ ಕಳ್ಳ ಸಾಗಣೆಯ ವಿರುದ್ಧ ಕಾರ್ಯಾಚರಣೆ ನಡೆಸಲಿದೆ ಎಂದೂ ಅವರು ಹೇಳಿದರು.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಾರ್ಷಿಕ ಸಭೆಯಲ್ಲಿ, ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ರಚಿಸಲು ಉದ್ದೇಶಿಸಿರುವುದಾಗಿ ಹೇಳಿದ್ದರು. ಆದರೆ, ಇದೀಗ ಎಟಿಎಸ್‌ ಬದಲು. ಸದ್ಯ ಸಿಸಿಬಿ ಅಡಿಯಲ್ಲಿ ಎಟಿಸಿ ರಚನೆ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)