ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ ದುಬಾರಿ ಸಾಫ್ಟ್‌ವೇರ್‌

ಭಾನುವಾರ, ಮೇ 26, 2019
22 °C
ಮಾರುಕಟ್ಟೆ ಬೆಲೆಗಿಂತ 9 ಪಟ್ಟು ಅಧಿಕ ವೆಚ್ಚ–ಪ್ರಾಂಶುಪಾಲರಿಂದಲೇ ವಿರೋಧ

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ ದುಬಾರಿ ಸಾಫ್ಟ್‌ವೇರ್‌

Published:
Updated:

ಬೆಂಗಳೂರು: ತನ್ನ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಸೂಕ್ತ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ, ದುಬಾರಿ ಸಾಫ್ಟ್‌ವೇರ್‌ ಖರೀದಿಸುವ ವಿಚಾರದಲ್ಲಿ ಇದೀಗ ವಿವಾದಕ್ಕೆ ಸಿಲುಕಿದೆ.

ಮಲ್ಟಿಮೀಡಿಯಾ ಮತ್ತು ಎಂಟರ್‌ಪ್ರೈಸ್‌ ಲೈಬ್ರರಿ, ಡೆವಲಪರ್‌ ಲೈಬ್ರರಿ, ವೈರ್‌ಲೆಸ್‌ ಲೈಬ್ರರಿಯಂತಹ ನಿಸ್ತಂತು ತಂತ್ರಜ್ಞಾನದ ಸಿಮುಲೇಟರ್‌ ಆಗಿ ಬಳಸುವ ಸಾಫ್ಟ್‌ವೇರ್‌ ಮುಕ್ತ ಮಾರುಕಟ್ಟೆಯಲ್ಲಿ ₹6.88 ಲಕ್ಷಕ್ಕೆ ದೊರಕುತ್ತಿದ್ದರೆ, ಸರ್ಕಾರ ಇದನ್ನು ₹ 52 ಲಕ್ಷಕ್ಕೆ ಖರೀದಿಸಲು ಮುಂದಾಗಿದೆ. ರಾಜ್ಯದ 11 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಈ ಸಾಫ್ಟ್‌ವೇರ್‌ಗಾಗಿ ₹ 5.5 ಕೋಟಿ ವ್ಯಯಿಸಲು ಮುಂದಾಗಿದೆ.

ತಾಂತ್ರಿಕ ಶಿಕ್ಷಣ ಇಲಾಖೆ ಈಗಾಗಲೇ ಕಾಲೇಜುಗಳ ಪ್ರಾಂಶುಪಾಲರಿಗೆ ಸಂದೇಶ ಕಳುಹಿಸಿ, ಸಾಫ್ಟ್‌ವೇರ್‌ ಬಗ್ಗೆ ತಮ್ಮ ಅನಿಸಿಕೆ ತಿಳಿಸಲು ಸೂಚಿಸಿದೆ. ಅದರ ಆಧಾರದಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಲಾಗಿದೆ.

ವಿಶೇಷವೆಂದರೆ, ಆರು ವರ್ಷಗಳ ಹಿಂದೆ ನಗರದ ಸರ್ಕಾರಿ ಕಾಲೇಜು ಎಸ್‌ಕೆಎಸ್‌ಜೆಟಿಐ ಇದೇ ಸಾಫ್ಟ್‌ವೇರ್‌ ಅನ್ನು ಕೇವಲ ₹ 6.88 ಲಕ್ಷ ವ್ಯಯಿಸಿ ಖರೀದಿಸಿತ್ತು. ಈಗಲೂ ಅದನ್ನು ಬಳಸುತ್ತಿದೆ. ಕಡಿಮೆ ವೆಚ್ಚದ ಸಾಫ್ಟ್‌ವೇರ್‌ ಇರುವಾಗ ದುಬಾರಿ ಸಾಫ್ಟ್‌ವೇರ್‌ ಖರೀದಿಯ ಔಚಿತ್ಯ ಏನು ಎಂದು ಹಲವು ಪ್ರಾಂಶುಪಾಲರು ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ.

‘ನಮ್ಮ ಕಾಲೇಜಿನ ಮೂಲಸೌಕರ್ಯ ವೃದ್ಧಿಗೆ ಹಣ ನೀಡುವಂತೆ ನಾವು ಕೋರುತ್ತಿದ್ದೇವೆ. ಆದರೆ ಅದನ್ನು ಕಡೆಗಣಿಸಲಾಗಿದೆ. ಇದೀಗ ನಾವು ದುಬಾರಿ ಸಾಫ್ಟ್‌ವೇರ್‌ ಖರೀದಿಸಬೇಕಿದೆ. ಇದೇ ಹಣವನ್ನು ನಮಗೆ ನೀಡಿದ್ದೇ ಆದರೆ ಮೂಲಸೌಲಭ್ಯ ಸುಧಾರಿಸಬಹುದು’ ಎಂದು ಹೆಸರು ಹೇಳಲು ಇಚ್ಛಿಸದ ಪ್ರಾಚಾರ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಿದ್ಧಪಡಿಸಿರುವ ಪಠ್ಯದಲ್ಲಿ ಸಹ ಇಂತಹದ್ದೇ ಸಾಫ್ಟ್‌ವೇರ್‌ ಖರೀದಿಸಬೇಕೆಂದು ಹೇಳಿಲ್ಲ. 

ಸಚಿವರ ಹೇಳಿಕೆ: ಈ ಬಗ್ಗೆ ಸ್ಪಷ್ಟನೆ ನೀಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ‘ಚುನಾವಣಾ ನೀತಿ ಸಂಹಿತೆ ಕೊನಗೊಂಡ ಬಳಿಕ ಈ ವಿಷಯದ ಬಗ್ಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯ ನನ್ನ ಬಳಿಗೆ ಈ ಪ್ರಸ್ತಾಪ ಬಂದಿಲ್ಲ, ಇತರ ರಾಜ್ಯಗಳಲ್ಲಿ ಎಂತಹ ಸಾಫ್ಟ್‌ವೇರ್‌ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !