ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರಿಗೆ ಅಗೌರವ ತೋರಿದರೆ ಅಮಾನತು: ಅಧಿಸೂಚನೆ ಸೃಷ್ಟಿಸಿದ ವಿವಾದ

Last Updated 30 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯಪಾಲರಿಗೆ ಅಗೌರವ ತೋರಿಸಿದರೆ ಅಂತಹ ಸದಸ್ಯರನ್ನು ಅಮಾನತುಗೊಳಿಸಬಹುದು ಎಂದು ವಿಧಾನಪರಿಷತ್‌ ಕಾರ್ಯದರ್ಶಿ ಹೊರಡಿಸಿರುವ ಅಧಿಸೂಚನೆ ವಿವಾದಕ್ಕೆ ಕಾರಣವಾಗಿದೆ.

ಕೇರಳ ರಾಜ್ಯದ ವಿಧಾನಮಂಡಲ ಅಧಿವೇಶನ ಸಂದರ್ಭ ಅಲ್ಲಿ ರಾಜ್ಯಪಾಲರಿಗೆ ಘೇರಾವ್‌ ಮಾಡಿ, ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ವಿಧಾನಪರಿಷತ್‌ ಕಾರ್ಯದರ್ಶಿ ಹೊರಡಿಸಿರುವ ಅಧಿಸೂಚನೆ ಚರ್ಚೆಗೆ ಒಳಗಾಗಿದೆ.

‘ವಿಧಾನಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮಾವಳಿ 26 ರ ರೀತ್ಯ ರಾಜ್ಯಪಾಲರು ಬರುವಾಗ, ಹೊರಡುವಾಗ ಅಥವಾ ಅವರ ಭಾಷಣದ ಅವಧಿಯಲ್ಲಿ ಸದಸ್ಯರು ಎದ್ದು ನಿಂತು ಭಾಷಣ ಮಾಡುವಂತಿಲ್ಲ, ಕ್ರಿಯಾಲೋಪ ಎತ್ತಿ ಅಡ್ಡಿಪಡಿಸುವಂತಿಲ್ಲ. ಆ ರೀತಿ ಮಾಡಿದರೆ ನಿಯಮ ಉಲ್ಲಂಘನೆ ಮತ್ತು ರಾಜ್ಯಪಾಲರಿಗೆ ತೋರಿದ ಅಗೌರವವೆಂದು ಸದನದಲ್ಲಿ ಮಂಡಿಸಬಹುದಾದ ಪ್ರಸ್ತಾವದ ಮೇರೆಗೆ ಅಧಿವೇಶನ ಗೊತ್ತುಪಡಿಸಿದ ಅವಧಿಗೆ ಅಥವಾ ಉಳಿದ ಅವಧಿಗೆ ಅಮಾನತ್ತುಗೊಳಿಸಬಹುದು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆದರೆ, ವಿಧಾನಸಭಾ ಕಾರ್ಯದರ್ಶಿ ಹೊರಡಿಸಿರುವ ಅಧಿಸೂಚನೆಯಲ್ಲಿ ಎಚ್ಚರಿಕೆಯ ಯಾವುದೇ ಅಂಶಗಳು ಇಲ್ಲ. ‘ವಿಧಾನಸಭೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದರಿಂದ ವಿಧಾನಸಭೆ ಸಚಿವಾಲಯವೇ ಅಧಿಸೂಚನೆ ಹೊರಡಿಸುತ್ತದೆ. ನಮ್ಮಲ್ಲಿ ಯಾವಾಗಲೂ ಇಂತಹ ಅಧಿಸೂಚನೆಯನ್ನು ಹೊರಡಿಸುವುದಿಲ್ಲ. ವಿಧಾನಪರಿಷತ್‌ ಯಾಕೆ ಈ ರೀತಿ ಅಧಿಸೂಚನೆ ಹೊರಡಿಸಿದೆ ಗೊತ್ತಿಲ್ಲ’ ಎಂದು ವಿಧಾನಸಭೆ ಸಚಿವಾಲಯದ ಮೂಲಗಳು ಹೇಳಿವೆ.

ಹಳೇ ಅಧಿಸೂಚನೆ ಮುಂದುವರಿಕೆ: ‘ಇದು ಹೊಸತಾಗಿ ಮಾಡಿರುವ ಅಧಿಸೂಚನೆಯಲ್ಲ. 2017 ರಲ್ಲಿ ಅಧಿಸೂಚನೆಯ ಕರಡು ರೂಪಿಸಲಾಗಿತ್ತು. ಪ್ರತಿ ಬಾರಿಯೂ ಅದನ್ನೇ ಹೊರಡಿಸಲಾಗುತ್ತಿದೆ. ಇದರಲ್ಲಿ ಯಾವುದೇ ವಿಶೇಷವಿಲ್ಲ. ರಾಜ್ಯಪಾಲರಿಗೆ ವೃಥಾ ಅಡ್ಡಿ ಮಾಡಿ ಅಗೌರವ ತೋರಬಾರದು ಎಂಬ ಕಾರಣಕ್ಕೆ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಾವಳಿ ನಿಯಮ 26 ರ ಪ್ರಕಾರವೇ ಹೊರಡಿಸಲಾಗಿದೆ’ ಎಂದು ವಿಧಾನಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿದ್ದರಾಮಯ್ಯ ಗರಂ

ಈ ಅಧಿಸೂಚನೆಗೆ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರಣರೆಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

‘ಇದರಿಂದ ಶಾಸಕರ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ. ಎರಡೂ ಸದನಗಳು ನಿಯಮಾವಳಿ ಪ್ರಕಾರವೇ ನಡೆಯಬೇಕು. ಸದಸ್ಯರ ಹಕ್ಕು ಮೊಟಕು ಮಾಡಲು ಬಿಡುವುದಿಲ್ಲ. ಸದನದಲ್ಲಿ ನಾನು ಮಾತನಾಡುತ್ತೇನೆ ಎಂದರೆ ಅದು ನನ್ನ ಧ್ವನಿಯಲ್ಲ ಜನರ ಧ್ವನಿಯಾಗಿರುತ್ತದೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ಇದೊಂದು ಹಿಟ್ಲರ್ ಧೋರಣೆ’ ಎಂದು ಹರಿಹಾಯ್ದಿದ್ದಾರೆ.

***

ವಿಧಾನಪರಿಷತ್ತಿನಿಂದ ಪ್ರತಿ ಬಾರಿಯೂ ಇದೇ ರೀತಿ ಅಧಿಸೂಚನೆ ಹೊರಡಿಸಲಾಗುತ್ತದೆ. ಇದು ಹೊಸತೇನು ಅಲ್ಲ, ರಾಜ್ಯಪಾಲರಿಗೆ ಗೌರವ ಕೊಡಬೇಕೆಂಬುದು ಆಶಯ
- ಕೆ.ಆರ್‌.ಮಹಾಲಕ್ಮ್ಷಿ, ಕಾರ್ಯದರ್ಶಿ, ವಿಧಾನಪರಿಷತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT