ಲಂಚ: ಗ್ರಾ.ಪಂ. ಮಾಜಿ ಅಧ್ಯಕ್ಷ, ಸದಸ್ಯನಿಗೆ ಜೈಲು ಶಿಕ್ಷೆ

ಮಂಗಳವಾರ, ಮಾರ್ಚ್ 26, 2019
26 °C
ಲಂಚ ಪಡೆಯುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು

ಲಂಚ: ಗ್ರಾ.ಪಂ. ಮಾಜಿ ಅಧ್ಯಕ್ಷ, ಸದಸ್ಯನಿಗೆ ಜೈಲು ಶಿಕ್ಷೆ

Published:
Updated:

ಬೆಂಗಳೂರು: ಶಿಫಾರಸು ಪತ್ರ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದ ದೇವನಹಳ್ಳಿ ತಾಲ್ಲೂಕಿನ ಎಲಿಯೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ವೆಂಕಟಾಚಲ ಹಾಗೂ ಮಾಜಿ ಸದಸ್ಯ ಆಂಜನಪ್ಪ ಎಂಬುವರಿಗೆ 4 ವರ್ಷಗಳ ಜೈಲು ಶಿಕ್ಷೆ ಹಾಗೂ ₹60 ಸಾವಿರ ದಂಡ ವಿಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 9ನೇ ಹೆಚ್ಚುವರಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಪೊಲೀಸ್ ಕಚೇರಿಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಜೆ.ವಿ.ವಿಜಯಾನಂದ ನಡೆಸಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಮಹಾಲಕ್ಷ್ಮಿ ಅವರು ವಾದಿಸಿದ್ದರು.

ಪ್ರಕರಣದ ವಿವರ: ದೂರುದಾರರಾದ ವಿ.ನಾಗರತ್ನ, ದೊಡ್ಡಬಳ್ಳಾಪುರ ತಾಲ್ಲೂಕಿನ ಅಂಗನವಾಡಿ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದರು. 2010ರಲ್ಲಿ ಅವರ ಪತಿ ಮೃತಪಟ್ಟಿದ್ದರು. ಅದರಿಂದ ನೊಂದಿದ್ದ ಅವರು, ಪೋಷಕರ ಮನೆ ಇದ್ದ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿದ್ದ ಅಂಗನವಾಡಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಮುಂದಾಗಿದ್ದರು.

ವರ್ಗಾವಣೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ 2010ರ ಜುಲೈ 23ರಂದು ಅರ್ಜಿ ಸಲ್ಲಿಸಿದ್ದರು. ಮಕ್ಕಳ ಕಲ್ಯಾಣ ಆಯೋಗಕ್ಕೂ ಅರ್ಜಿ ಹಾಕಿದ್ದರು. ಎರಡೂ ಕಡೆಯು, ಅಂಗನವಾಡಿ ಇರುವ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಿಂದ ಶಿಫಾರಸು ಪತ್ರ ತರುವಂತೆ ಹೇಳಿದ್ದರು.

ಅವಾಗಲೇ ಅವರು, ಎಲಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ವೆಂಕಟಾಚಲ ಹಾಗೂ ಸದಸ್ಯರಾಗಿದ್ದ ಆಂಜನಪ್ಪ ಅವರನ್ನು ಸಂಪ‍ರ್ಕಿಸಿದ್ದರು. ‘ಶಿಫಾರಸು ಪತ್ರ ನೀಡಬೇಕಾದರೆ ₹60 ಸಾವಿರ ಲಂಚ ನೀಡಬೇಕು’ ಎಂದು ಅವರಿಬ್ಬರು ಬೇಡಿಕೆ ಇಟ್ಟಿದ್ದರು. ಅದರಿಂದ ಬೇಸತ್ತು, ವೆಂಕಟಾಚಲ ಹಾಗೂ ಆಂಜನಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ಜುಲೈ 30ರಂದು ದೂರು ನೀಡಿದ್ದರು.

ನಾಗರತ್ನ ಅವರು ₹25 ಸಾವಿರ ನಗದು ಹಾಗೂ ₹35 ಸಾವಿರ ಮೊತ್ತದ ಚೆಕ್‌ ಅನ್ನು ಲಂಚದ ರೂಪದಲ್ಲಿ ವೆಂಕಟಾಚಲ ಹಾಗೂ ಆಂಜನಪ್ಪ ಅವರಿಗೆ ನೀಡುವಾಗಲೇ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಇಬ್ಬರನ್ನೂ ಬಂಧಿಸಿದ್ದರು. ಪುರಾವೆಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !