ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ರಾಜ್ಯದ ಮೊದಲ ಅತ್ಯಾಧುನಿಕ ತೆಂಗು ಸಂಸ್ಕರಣಾ ಘಟಕ

ಸಹಕಾರ ಸಂಘ ಸ್ಥಾಪಿತ ಘಟಕ ಉದ್ಘಾಟನೆಗೆ ಸಜ್ಜು
Last Updated 15 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ತೆಂಗು ಬೆಳೆಗಾರರ ಸಹಕಾರ ಸಂಘ ಸ್ಥಾಪಿಸಿರುವ ಅತ್ಯಾಧುನಿಕತೆಂಗು ಸಂಸ್ಕರಣಾ ಘಟಕವು ಉದ್ಘಾಟನೆಗೆ ಸಜ್ಜಾಗಿದೆ.ಸಹಕಾರ ಸಂಘವೊಂದು ಸ್ಥಾಪಿಸಿರುವ ರಾಜ್ಯದ ಮೊದಲ ಸಂಸ್ಕರಣಾ ಘಟಕ ಇದಾಗಿದೆ.

ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣಾ ಮತ್ತು ಮಾರಾಟ ಸಹಕಾರ ಸಂಘವು ಈ ಘಟಕದ ರೂವಾರಿ.

ಸರ್ಕಾರದ ನೆರವಿನೊಂದಿಗೆ ₹7.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರೈತರಿಂದ ತೆಂಗನ್ನು ನೇರವಾಗಿ ಖರೀದಿಸಿ, ತೆಂಗಿನ ಉತ್ಪನ್ನವಾದತೆಂಗಿನ ತಿರುಳು (ಪುಡಿ) ತಯಾರಿಸಿ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡುವ ಯೋಜನೆಯನ್ನು ಸಹಕಾರ ಸಂಘ ಹಾಕಿಕೊಂಡಿದೆ.

ನಂಜುಂಡಸ್ವಾಮಿ ಮಾರ್ಗದರ್ಶನ: ನೀರಾ ಚಳವಳಿಯ ಕಾಲದಲ್ಲಿ ರೈತ ನಾಯಕ ಎಂ.ಡಿ.ನಂಜುಂಡಸ್ವಾಮಿ ಮಾರ್ಗದರ್ಶನದಲ್ಲಿ ಈ ಸಂಘ ಆರಂಭಿಸಲಾಗಿತ್ತು. ತಾಲ್ಲೂಕಿನ ತೆಂಗು ಬೆಳೆಗಾರರು ತೆಂಗಿನ ಕಾಯಿಗೆ ಬೆಲೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಪರಿಸ್ಥಿತಿಯಲ್ಲಿ ನೆರವಾಗಲು 2002ರ ಜ. 28ರಂದು ಸಹಕಾರ ಸಂಘವನ್ನು ಹುಟ್ಟುಹಾಕಲಾಗಿತ್ತು. ಆರಂಭದಲ್ಲಿ 405 ಸದಸ್ಯರು ಹೆಸರು ನೋಂದಾಯಿಸಿಕೊಂಡಿದ್ದರು. ಈಗ 1,120ಕ್ಕೂ ಹೆಚ್ಚು ಸದಸ್ಯರು ಸಂಘದಲ್ಲಿದ್ದಾರೆ.

ಘಟಕದ ಬಗ್ಗೆ: ಚಾಮರಾಜನಗರ ತಾಲ್ಲೂಕಿನ ಮುಣಚನಹಳ್ಳಿಯಲ್ಲಿರುವ (ಕಾಳನಹುಂಡಿ ರಸ್ತೆ) ಸಂಘಕ್ಕೆ ಸೇರಿದ ಜಾಗದಲ್ಲಿ ಸುಸಜ್ಜಿತ ಸಂಸ್ಕರಣಾ ಘಟಕ ತಲೆ ಎತ್ತಿದೆ. ಈಗಾಗಲೇ ಪ್ರಾಯೋಗಿಕವಾಗಿ ಘಟಕ ಕಾರ್ಯನಿರ್ವಹಿಸಿದ್ದು, 11 ಟನ್‌ ತೆಂಗಿನ ಪುಡಿ ತಯಾರಿಸಿದೆ. ಅಧಿಕೃತ ಉದ್ಘಾಟನೆಯಷ್ಟೇ ಬಾಕಿ ಇದೆ.

8 ಗಂಟೆಯ ಅವಧಿಗೆ 50 ಸಾವಿರ ತೆಂಗಿನಕಾಯಿಗಳನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಸದ್ಯ ಘಟಕದಲ್ಲಿ ತೆಂಗಿನಪುಡಿ ತಯಾರಿಕೆಗೆ ಮಾತ್ರ ಗಮನ ನೀಡಲಾಗುತ್ತಿದೆ.

ಉಪ ಉತ್ಪನ್ನಗಳ ಮಾರಾಟ: ತೆಂಗಿನಕಾಯಿಯನ್ನು ಸಂಸ್ಕರಿಸುವಾಗ ಅಲ್ಲಿ ಕರಟ, ತೆಂಗಿನ ಕಾಯಿಯ ಮೇ‌ಲು ಸಿಪ್ಪೆ (ಚಿಪ್ಸ್‌) ಉಪ ಉತ್ಪನ್ನಗಳಾಗಿ ಸಿಗುತ್ತವೆ. ಇವುಗಳನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸಬಹುದಾಗಿದ್ದು, ಮಾರಾಟ ಮಾಡಲು ಸಂಘ ವ್ಯವಸ್ಥೆ ಮಾಡಿದೆ. ಚಿಪ್ಸ್‌ ಅನ್ನು ಒಣಗಿಸಲು ಡ್ರೈಯರ್‌ ಸೌಲಭ್ಯವೂ ಇಲ್ಲಿದೆ.

ಉದ್ಯೋಗ: ಸಂಸ್ಕರಣವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದರೆ 200ರಿಂದ 250 ಜನರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ ಎಂದು ಸಂಘದ ಅಧ್ಯಕ್ಷ, ರೈತ ಮುಖಂಡ ಮಹೇಶ್‌ ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.

ಕನಿಷ್ಠ 100 ಕೆಲಸಗಾರರು ಘಟಕದಲ್ಲೇ ಪ್ರತಿ ದಿನ ಕಾರ್ಯ ನಿರ್ವಹಿಸಲಿದ್ದಾರೆ. ಉಳಿದಂತೆ ತೆಂಗಿನಕಾಯಿ ಕೊಯ್ಲು, ಸಾಗಣೆ ಸೇರಿದಂತೆ ಇನ್ನಿತರ ಕೆಲಸಗಳಿಗಾಗಿ ಇನ್ನೂ 150 ಮಂದಿಗೆ ಉದ್ಯೋಗ ಸಿಗಲಿದೆ ಎಂದು ಹೇಳಿದರು.

ಸದಸ್ಯರಿಂದಲೇ ಖರೀದಿ: ಘಟಕ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಿದ ಮೇಲೆ ಪ್ರತಿದಿನ ಕನಿಷ್ಠ 50 ಸಾವಿರ ಕಾಯಿಗಳು ಬೇಕಾಗುತ್ತವೆ. ಸಂಘದ ಸದಸ್ಯರಿಂದಲೇ ಕಾಯಿಗಳನ್ನು ಖರೀದಿಸಲು ಸಂಘ ನಿರ್ಧರಿಸಿದೆ. ನಂತರ ಉಳಿದ ಬೆಳೆಗಾರರಿಂದಲೂ ಖರೀದಿಸಲಿದೆ.

ಘಟಕದಲ್ಲಿ ತಯಾರಿಸಿದ ತೆಂಗಿನ ‌ಪುಡಿಯನ್ನು ಅರ್ಧ ಕೆ.ಜಿ, ಒಂದು ಕೆ.ಜಿ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡುವ ಯೋಜನೆಯನ್ನು ಅದು ಹಾಕಿಕೊಂಡಿದೆ. 25 ಕೆ.ಜಿ ಚೀಲವನ್ನೂ ಮಾರಾಟ ಮಾಡಲಿದೆ.

**
ಮುಂದಿನ ತಿಂಗಳು ಉದ್ಘಾಟನೆ?

ಈ ವರ್ಷಾರಂಭದಲ್ಲೇ ಘಟಕ ಸಿದ್ಧವಾಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆಗೆ ಬರುವುದಾಗಿ ಒಪ್ಪಿಕೊಂಡಿದ್ದರು. ಕಾರಣಾಂತರಗಳಿಂದ ಮುಂದಕ್ಕೆ ಹೋಗಿತ್ತು. ನಂತರ ಚುನಾವಣೆ ಬಂದಿದ್ದರಿಂದ ಚಾಲನೆ ಸಿಕ್ಕಿರಲಿಲ್ಲ. ಇದೇ 20ರಂದು ಘಟಕದ ಉದ್ಘಾಟನೆ ಮಾಡಲು ಬರುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಪ್ಪಿದ್ದರು. ಕೊನೆ ಗಳಿಗೆಯಲ್ಲಿ ಅದೂ ರದ್ದಾಗಿದೆ.

‘ಘಟಕ ಬೇಗ ಕಾರ್ಯಾರಂಭ ಮಾಡಿದಷ್ಟೂ ರೈತರಿಗೆ ಪ್ರಯೋಜನವಾಗಲಿದೆ. ಮುಖ್ಯಮಂತ್ರಿಯನ್ನು ಕರೆದುಕೊಂಡು ಬರಲು ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡಬೇಕು’ ಎಂದು ಮಹೇಶ್‌ ಪ್ರಭು ಹೇಳಿದರು.

**

ಮೊದಲ ಹಂತದ ಯೋಜನೆ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ನೀರಾ ಘಟಕವನ್ನು ಸ್ಥಾಪಿಸುವ ಯೋಚನೆ ಇದೆ. ನೀರಾ ಉತ್ಪಾದನೆಗೆ ಸರ್ಕಾರ ಅನುಮತಿ ನೀಡಿದೆ
- ಮಹೇಶ್‌ ಪ್ರಭು, ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT