ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಕ್ಷ ಬಹುಮತ ಪಡೆದರೆ ನಾನೇ ಪ್ರಧಾನಿ’

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲ. ಯಾವುದೇ ಕಾರಣಕ್ಕೂ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

ಬಿಜೆಪಿಯೇತರ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಸುಳಿವಿನ ಬಗ್ಗೆ ಮಾತನಾಡಿದ ರಾಹುಲ್‌, ಬಿಜೆಪಿಯೇತರ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡರೆ ಬಿಜೆಪಿಯನ್ನು ಸೋಲಿಸುವುದು ಕಷ್ಟವಲ್ಲ ಎಂದು ಅಭಿಪ್ರಾಯಪಟ್ಟ ಅವರು, 2019ರ ಚುನಾವಣೆ ಕಾಂಗ್ರೆಸ್ ಪಾಲಿಗಷ್ಟೆ ಅಲ್ಲ, ದೇಶದ ಪಾಲಿಗೂ ಮಹತ್ವದ್ದು ಎಂದರು.

ತಾಜ್‌ ವೆಸ್ಟ್‌ ಅಂಡ್‌ ಹೋಟೆಲ್‌ನಲ್ಲಿ ಮಂಗಳವಾರ ‘ಸಮೃದ್ಧ ಭಾರತ’ ಫೌಂಡೇಶನ್ ಉದ್ಘಾಟಿಸಿ, ಸಂವಾದದಲ್ಲಿ ಮಾತನಾಡಿದ ರಾಹುಲ್‌, ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

‘ನೀವು ಪ್ರಧಾನಿ ಆಕಾಂಕ್ಷಿಯೇ’ ಎಂಬ ಪ್ರಶ್ನೆಗೆ, ’ಅದು ಸಂಖ್ಯಾಬಲದ ಮೇಲೆ ತೀರ್ಮಾನವಾಗುತ್ತದೆ. ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ’ ಎಂದು ಹೇಳುವ ಮೂಲಕ ಹೌದದೆಂದು ಒಪ್ಪಿಕೊಂಡರು.

‘ಎಲ್ಲ ಪಕ್ಷಗಳು ಬಿಜೆಪಿ ವಿರುದ್ಧ ಇವೆ. ಈಗ ನಡೆಯುತ್ತಿರುವುದು ರಾಜಕೀಯ ಯುದ್ಧವಲ್ಲ. ಸೈದ್ಧಾಂತಿಕ ಯುದ್ಧ. ಎಲ್ಲರನ್ನು ಒಟ್ಟಾಗಿ ಸೇರಿಸಲು ಸಾಧ್ಯವಿರುವುದು ಕಾಂಗ್ರೆಸ್‌ಗೆ ಮಾತ್ರ. ಉತ್ತರ ಪ್ರದೇಶವನ್ನೇ ತೆಗೆದುಕೊಂಡರೆ ಅಲ್ಲಿರುವ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದರೆ ಬಿಜೆಪಿ ಐದು ಸ್ಥಾನವನ್ನೂ ಗಳಿಸಲು ಸಾಧ್ಯವಾಗದು. ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕದಲ್ಲೂ ಅದೇ ಸ್ಥಿತಿ ಇದೆ’ ಎಂದರು.

‘ಶರದ್ ಯಾದವ್ ಕಾಂಗ್ರೆಸ್ ವಿರುದ್ಧ ರಾಜಕೀಯ ಮಾಡಿಕೊಂಡು ಬಂದವರು. ಈಗ ಅವರಿಗೂ ವಾಸ್ತವ ಗೊತ್ತಾಗಿದೆ. ಕಾಂಗ್ರೆಸ್ ಒಂದೇ ದೇಶ ಮುನ್ನಡೆಸಲು ಸಾಧ್ಯ ಎಂದು ಅವರೂ ಹೇಳುತ್ತಿದ್ದಾರೆ’ ಎಂದರು.

‘ರಾಜೀವ್ ಗಾಂಧಿ 400ಕ್ಕೂ ಹೆಚ್ಚು ಸ್ಥಾನ ಗಳಿಸಿ ಅಧಿಕಾರದಲ್ಲಿದ್ದರೂ ವಿರೋಧ ಪಕ್ಷಗಳೆಲ್ಲಾ ಒಗ್ಗಟ್ಟಾದಾಗ ಗೆಲ್ಲಲು ವಿಫಲರಾದರು. ಈಗ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ಮೋದಿ ಸರ್ಕಾರ ವ್ಯವಸ್ಥೆಯನ್ನೇ ತಮಗೆ ಬೇಕಾದಂತೆ ಬದಲಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಮಾರಕ. ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರ ಯೋಜನಾ ಆಯೋಗದ ಹೆಸರನ್ನೇ ಬದಲಿಸಿದೆ. ಚುನಾವಣಾ ಆಯೋಗ ಸೇರಿದಂತೆ ಎಲ್ಲ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿದೆ’ ಎಂದರು.

‘ಬಿಜೆಪಿಯವರು ಗಾಂಧಿ, ನೆಹರು, ಅಂಬೇಡ್ಕರ್ ಅವರನ್ನು ದ್ವೇಷಿಸುತ್ತಾರೆ. ಬಸವಣ್ಣ, ಸರ್ದಾರ್ ಪಟೇಲ್, ಭಗತ್ ಸಿಂಗ್ ಹೆಸರಲ್ಲಿ ಗಾಂಧಿ, ಅಂಬೇಡ್ಕರ್, ನೆಹರು ಅವರನ್ನು ತೆಗಳುವ ಕೆಲಸ ಆರ್‌ಎಸ್‌ಎಸ್ ಮಾಡುತ್ತಿದೆ. ಬಿಜೆಪಿಯಲ್ಲಿ ಮೋದಿ ಮತ್ತು ಅಮಿತ್ ಶಾ ಹೇಳಿದ್ದನ್ನು ಯಾರೂ ಪ್ರಶ್ನಿಸುವಂತಿಲ್ಲ’ ಎಂದರು.

ಮುಖ್ಯಮಂತ್ರಿ ಸ್ಥಾನಗಳಲ್ಲಿ ಮಹಿಳೆಯರು: ಮಹಿಳೆಯರ ಅಭಿವೃದ್ಧಿ, ಸಬಲೀಕರಣದ ಕುರಿತು ಕಮಲಾ ಹಂಪನಾ ಕನ್ನಡದಲ್ಲಿ ಕೇಳಿದ ಪ್ರಶ್ನೆಗೆ, ‘ಮುಂದಿನ ಹತ್ತು ವರ್ಷಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಪೈಕಿ ಕನಿಷ್ಠ ಅರ್ಧದಷ್ಟು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ಮಹಿಳೆಯರಾಗಿರಬೇಕು. ಇದು ರಾತ್ರೋ ರಾತ್ರಿ ಆಗುವುದಿಲ್ಲ. ಈ ನಿಟ್ಟಿನಲ್ಲಿ ಹೋರಾಟ ನಡೆಯಬೇಕು. ಅದಕ್ಕೆ ಅವಕಾಶವೂ ಸೃಷ್ಟಿಯಾಗಬೇಕು. ಕರ್ನಾಟಕ ಚುನಾವಣೆಯಲ್ಲಿ ಕೇವಲ 15 ಸ್ಥಾನಗಳನ್ನು ಮಹಿಳೆಯರಿಗೆ ನೀಡಿರುವ ಬಗ್ಗೆ ಅತೃಪ್ತಿ ಇದೆ. ಆದರೆ, ಬಿಜೆಪಿಗಿಂತ ಮೂರು ಪಟ್ಟು ಹೆಚ್ಚು ಸ್ಥಾನ ಮಹಿಳೆಯರಿಗೆ ಪಕ್ಷ ಟಿಕೆಟ್ ನೀಡಿದೆ ಎನ್ನುವುದೇ ತೃಪ್ತಿ’ ಎಂದರು.

‘ಸರ್, ಜೀ ಸಂಬೋಧನೆ ಬೇಡ’

‘ಸರ್ ಎಂಬ ಸಂಬೋಧನೆ ಬೇಡ. ಜೀ ಎಂಬ ಗೌರವ ಸೂಚಕವೂ ಬೇಡ. ರಾಹುಲ್ ಎಂದು ಆತ್ಮೀಯವಾಗಿ ಕರೆಯಿರಿ’ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಪ್ರೇಕ್ಷಕರ ಮನಗೆದ್ದರು.

ವಕೀಲ ಶ್ಯಾಮ್ ಸುಂದರ್, ಸರ್ ರಾಹುಲ್ ಗಾಂಧಿ ಎಂದು ಪ್ರಶ್ನೆ ಕೇಳಲು ಮುಂದಾದಾಗ, ‘ನನ್ನನ್ನು ಸರ್ ಎಂದು ಕರೆಯಬೇಡಿ. ರಾಹುಲ್ ಎನ್ನಿ ಸಾಕು’ ಎಂದರು. ಆಗ ಶ್ಯಾಮ್ ಸುಂದರ್, ರಾಹುಲ್ ಜೀ ಎಂದು ಕರೆದು ಮಾತು ಮುಂದುವರೆಸಿದರು. ಆಗ ರಾಹುಲ್‌, ‘ಜೀ ಎಂಬ ಗೌರವವೂ ಅನಗತ್ಯ. ಪ್ರೀತಿಯಿಂದ ರಾಹುಲ್ ಎನ್ನಿ ಸಾಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT