ಡಿಬಿಟಿ: ಆಧಾರ್‌ ಇದ್ದರಷ್ಟೇ ಹಣ ಪಾವತಿ

7
ಕೇಂದ್ರೀಕೃತ ತಂತ್ರಾಂಶದ ಮೂಲಕ ಫಲಾನುಭವಿಗಳಿಗೆ ಹಣ ವರ್ಗಾವಣೆ

ಡಿಬಿಟಿ: ಆಧಾರ್‌ ಇದ್ದರಷ್ಟೇ ಹಣ ಪಾವತಿ

Published:
Updated:

ಬೆಂಗಳೂರು: ವಿವಿಧ ಯೋಜನೆಗಳಲ್ಲಿ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರವು ನೇರ ನಗದು ವರ್ಗಾವಣೆಯಲ್ಲಿ (ಡಿಬಿಟಿ) ಕೇಂದ್ರೀಕೃತ ಹಣ ಪಾವತಿ ಯೋಜನೆ ಆರಂಭಿಸಿದೆ. ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡಿರುವವರಿಗೆ ಮಾತ್ರ ಈ ಪದ್ದತಿಯಲ್ಲಿ ಹಣ ವರ್ಗಾವಣೆ ಆಗಲಿದೆ.

ಪ್ರಸ್ತುತ ವಿವಿಧ ಇಲಾಖೆಗಳು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಸಬ್ಸಿಡಿ ಹಾಗೂ ಬೇರೆ ಸೌಲಭ್ಯಗಳನ್ನು ವರ್ಗಾವಣೆ ಮಾಡುತ್ತಿವೆ. ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಕಡ್ಡಾಯ ಆಗಿರಲಿಲ್ಲ.

ಇ–ಆಡಳಿತ ವಿಭಾಗವು ‘ಏಕೀಕೃತ ನೇರ ನಗದು ವರ್ಗಾವಣೆ ವೇದಿಕೆ’ (ಕೋರ್‌ ಡಿಬಿಟಿ ಪೋರ್ಟಲ್‌) ತಂತ್ರಾಂಶ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶವನ್ನು ಇಲಾಖೆಗಳು ಯೋಜನೆಗಳು ಹಾಗೂ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಬಳಸಬೇಕು. ಇನ್ನು ಮುಂದೆ ಡಿಬಿಟಿ ಪೋರ್ಟಲ್‌ನಲ್ಲಿ ತಯಾರಾದ ಬಿಲ್‌ಗಳನ್ನಷ್ಟೇ ಖಜಾನೆ ಸ್ವೀಕರಿಸಲಿದೆ ಎಂದು ಇದೇ 13ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ತಂತ್ರಾಂಶವು ಫಲಾನುಭವಿಯ ಆಧಾರ್‌ ವಿವರಗಳ ಸಂರಕ್ಷಿತ ಭಂಡಾರದಂತೆ ಕೆಲಸ ಮಾಡಲಿದೆ. ಇದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಬಿ) ನಿಯಮಗಳ ಅನುಸಾರ ಕೆಲಸ ಮಾಡುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ 2016ರ ನವೆಂಬರ್‌ನಿಂದ ಫಲಾನುಭವಿಗಳ ಖಾತೆಗೆ ಕಡ್ಡಾಯವಾಗಿ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಡಿಬಿಟಿ ಮೂಲಕ ₹ 17,471 ಕೋಟಿ ವರ್ಗಾಯಿಸಲಾಗಿದೆ. ‘ಕೆಲವು ವ್ಯಕ್ತಿಗಳು ನಾಲ್ಕೈದು ಬ್ಯಾಂಕ್‌ ಖಾತೆಗಳನ್ನು ಹೊಂದಿರುತ್ತಾರೆ. ಒಂದು ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಜೋಡಣೆ ಆಗಿರುತ್ತದೆ. ಅಂಥ ಖಾತೆಗೆ ಹಣ ಪಾವತಿಸಲಾಗುತ್ತದೆ’ ಎಂದು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಫಲಾನುಭವಿಯ ದತ್ತಾಂಶ ಹಾಗೂ ಆಧಾರ್‌ ಸಂಖ್ಯೆ ಪರಿಶೀಲನೆ ಮಾಡಿಯೇ ಹಣ ನೀಡಲಾಗುತ್ತದೆ. ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಜೋಡಣೆಯಾಗಿದ್ದರೆ ಮಾತ್ರ ಹಣ ವರ್ಗಾವಣೆ ಮಾಡಲಾಗುತ್ತದೆ’ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಇ–ಆಡಳಿತ) ರಾಜೀವ್‌ ಚಾವ್ಲಾ ತಿಳಿಸಿದರು.

‘ಇಲಾಖೆಗಳು ಒಂದು ವೇಳೆ ಫಲಾನುಭವಿಗಳ ಖಾತೆಗೆ ಹೆಚ್ಚುವರಿ ಹಣ ಪಾವತಿ ಮಾಡಿದ್ದರೂ ಈವರೆಗೆ ಗೊತ್ತಾಗುತ್ತಿರಲಿಲ್ಲ. ಹಣ ಸೋರಿಕೆ ಆಗುತ್ತಿತ್ತು. ಇದಕ್ಕೆ ಕಡಿವಾಣ ಬೀಳಲಿದೆ’ ಎಂದು ಅವರು ಹೇಳಿದರು.

‘ವ್ಯಕ್ತಿಯ ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಸಂಖ್ಯೆ ನಡುವೆ ಹೊಂದಾಣಿಕೆ ಆಗದಿದ್ದರೆ ಹಣ ಪಾವತಿ ಸ್ಥಗಿತಗೊಳಿಸಲಾಗುತ್ತದೆ. ಅರ್ಹ ವ್ಯಕ್ತಿಗೆ ಸರ್ಕಾರದ ಹಣ ತಲುಪಬೇಕು ಎಂಬುದು ನಮ್ಮ ಉದ್ದೇಶ’ ಎಂದು ಚಾವ್ಲಾ ತಿಳಿಸಿದರು.

‘ರೈತ ಬೆಳಕು’ ಯೋಜನೆಯಡಿ ಮಳೆ ಆಶ್ರಿತ ಬೆಳೆ ಬೆಳೆಯುವ ರೈತರ ಬ್ಯಾಂಕ್‌ ಖಾತೆಗಳಿಗೆ ಪ್ರತಿವರ್ಷ ತಲಾ ₹ 5,000 ನೇರ ವರ್ಗಾವಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ 2018ರ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಈ ಯೋಜನೆ ಅನುಷ್ಠಾನಕ್ಕೆ ಮೈತ್ರಿ ಸರ್ಕಾರ ಬಜೆಟ್‌ನಲ್ಲಿ ₹ 1,000 ಕೋಟಿ ಮೀಸಲಿಟ್ಟಿದೆ. ಈ ತಂತ್ರಾಂಶದ ಮೂಲಕ ಇದಕ್ಕೆ ಹಣ ಪಾವತಿ ಮಾಡಲಾಗುತ್ತದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯ ಆಧಾರ್‌ ಮಸೂದೆಗೆ 2018ರ ವಿಧಾನಮಂಡಲದ ಅಧಿವೇಶನದಲ್ಲಿ ಅನುಮೋದನೆ ಪಡೆಯಲಾಗಿದೆ. ರಾಜ್ಯದಲ್ಲಿ ಆಗಸ್ಟ್‌ 1ರಿಂದ ಈ ಕಾಯ್ದೆ ಜಾರಿಗೆ ಬಂದಿದೆ. ಆಧಾರ್‌ ಬಳಕೆಯಲ್ಲಿನ ಈಗಿನ ಲೋಪದೋಷಗಳನ್ನು ಸರಿಪಡಿಸಲು 13 ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಇತ್ತೀಚೆಗೆ ಆದೇಶ ಹೊರಡಿಸಿದ್ದರು.

‘ವಿವಿಧ ಇಲಾಖೆಗಳು ನಿಯಮಗಳಿಗೆ ವಿರುದ್ಧವಾಗಿ ಆಧಾರ್‌ ಸಂಖ್ಯೆ ಸಂಗ್ರಹಿಸಿ ಬಳಸುತ್ತಿವೆ. ಇದರಿಂದಾಗಿ ಸಾರ್ವಜನಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದೂ ಸೂಚಿಸಿದ್ದರು.

**

ಅಂಕಿ ಅಂಶಗಳು

₹ 17,471 ಕೋಟಿ: ರಾಜ್ಯದಲ್ಲಿ ಈವರೆಗೆ ನೇರ ನಗದು ವರ್ಗಾವಣೆ

160: ಡಿಬಿಟಿಗೆ ಒಳಪಟ್ಟ ಯೋಜನೆಗಳು

18: ಕೃಷಿ, ಸಹಕಾರ ಇಲಾಖೆ ಯೋಜನೆಗಳು

15: ಮೀನುಗಾರಿಕೆ ಹಾಗೂ ತೋಟಗಾರಿಕೆ ಇಲಾಖೆ ಯೋಜನೆಗಳು

14: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆಗಳು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !