ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಕರ್ನಾಟಕದ 12 ಮಂದಿ ಫಿಲಿಪ್ಪೀನ್ಸ್‌ನಲ್ಲಿ ಬಾಕಿ, ಸಹಾಯಕ್ಕೆ ಮೊರೆ

ಸಂಕಷ್ಟದಲ್ಲಿ ಭಾರತದ 400 ವಿದ್ಯಾರ್ಥಿಗಳು
Last Updated 19 ಮಾರ್ಚ್ 2020, 4:34 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಭೀತಿಯಿಂದ ಭಾರತಕ್ಕೆ ಬರಲಾರದೇ ಕರ್ನಾಟಕದ 12 ವಿದ್ಯಾರ್ಥಿಗಳು ಫಿಲಿಪ್ಪೀನ್ಸ್‌ನಲ್ಲಿ ಬಾಕಿಯಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ನಿಟ್ಟೂರು ಗ್ರಾಮದ ಬಿ.ಜಿ. ರವೀಂದ್ರ ಮತ್ತು ಎಚ್‌.ಎನ್‌. ಲತಾಮಣಿ ಅವರ ಮಗ ಪ್ರತೀಕ್‌ ಆರ್‌. ಬಿದರಿ, ಚಿತ್ರದುರ್ಗ ಜಿಲ್ಲೆಯ ನಿಶ್ಷಿತ್‌, ಚಂದನಾ, ನಿಕಿತಾ, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ರಕ್ಷತ್‌, ಬೆಂಗಳೂರಿನ ಜಿತೇಂದ್ರ ಮತ್ತು ಮಂಥನ್‌, ಹಾವೇರಿಯ ನಿತೇಶ್‌, ಗದಗ ನಿವಾಸಿ ಮನೋಜ್‌, ಬೆಳಗಾವಿಯ ಆದಿತ್ಯ, ಬೆಂಗಳೂರಿನ ಮೇಘನಾ, ಶಿವಮೊಗ್ಗದ ಅನುಶ್ರೀ ಬಾಕಿಯಾದವರು.

ಲಾಸ್‌ ಪಿನಾಸ್‌ ಸಿಟಿಯ ಮನಿಲಾದಲ್ಲಿರುವ ಯುನಿವರ್ಸಿಟಿ ಆಫ್‌ ಪರ್‌ಪೆಚ್ಯುವಲ್‌ ಹೆಲ್ಪ್‌ ಸಿಸ್ಟಂ ಡೆಲ್ಟಾದಲ್ಲಿ (ಯುಪಿಎಚ್‌ಎಸ್‌ಡಿ) ಎಂಬಿಬಿಎಸ್‌ ಕಲಿಯಲೆಂದು ಎರಡು ತಿಂಗಳ ಹಿಂದೆಯಷ್ಟೇ ಫಿಲಿಪ್ಪೀನ್ಸ್‌ಗೆ ತೆರಳಿದ್ದರು. ಈ ತಂಡದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಒಂದು ಫ್ಲಾಟ್‌ನಲ್ಲಿ, 8 ಮಂದಿ ವಿದ್ಯಾರ್ಥಿಗಳು ಮತ್ತೆರಡು ಫ್ಲಾಟ್‌ಗಳಲ್ಲಿ ಅಲ್ಲಿ ಉಳಿದುಕೊಂಡಿದ್ದರು. ಈಗ ಫ್ಲಾಟ್‌ನಿಂದ ಹೊರಗೆ ಬಾರದಂತೆ ನಿರ್ಬಂಧ ಹೇರಲಾಗಿದೆ.

ಕೊರೊನಾ ಸೋಂಕಿನ ಭೀತಿಯಿಂದಾಗಿ ಅಲ್ಲಿನ ಸರ್ಕಾರವು ಶಾಲಾ ಕಾಲೇಜುಗಳಿಗೆ ಒಂದೂವರೆ ತಿಂಗಳು ರಜೆ ಸಾರಿದೆ. ಹಾಗಾಗಿ ಬೇರೆ ಬೇರೆ ದೇಶಗಳಿಂದ ಬಂದ ವಿದ್ಯಾರ್ಥಿಗಳು ಅವರವರ ದೇಶಕ್ಕೆ ಮರಳುತ್ತಿದ್ದರು. ಈ ತಂಡ ಸೋಮವಾರ ಭಾರತಕ್ಕೆ ಬರಲು ವಿಮಾನದಲ್ಲಿ ಟಿಕೆಟ್‌ ಬುಕ್‌ ಮಾಡಿತ್ತು. ಆದರೆ ಇದ್ದಕ್ಕಿದ್ದಂತೆ ವಿಮಾನ ಹಾರಾಟವನ್ನೇ ರದ್ದು ಮಾಡಿದ್ದರಿಂದ ಈ ವಿದ್ಯಾರ್ಥಿಗಳು ಗೃಹ ಬಂಧನದಲ್ಲಿ ಇರುವಂತಾಗಿದೆ.

‘ದ್ವಿಪರಾಷ್ಟ್ರ ಫಿಲಿಪ್ಪೀನ್ಸ್‌ನಿಂದ ಭಾರತಕ್ಕೆ ನೇರ ವಿಮಾನ ಇಲ್ಲದ ಕಾರಣ ಮಲೇಶಿಯಾ ಅಥವಾ ಶ್ರೀಲಂಕಾಕ್ಕೆ ಬಂದು ಅಲ್ಲಿಂದ ಭಾರತಕ್ಕೆ ಬರಬೇಕು. ಫಿಲಿಪೈನ್ಸ್‌ನಿಂದ ಭಾರತದ ಇನ್ನೊಂದು ತಂಡ ಒಂದು ದಿನ ಮೊದಲೇ ಹೊರಟಿದ್ದು, ಅದು ಮಲೇಶಿಯಾದಲ್ಲಿ ಬಾಕಿಯಾಗಿದೆಯಂತೆ’ ಎಂದು ‍ಪ್ರತೀಕ್‌ ಅವರ ಮಾವ ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಫಿಲಿಪ್ಪೀನ್ಸ್‌ನಲ್ಲಿ ಅಡ್ಡಾಡುವವರಲ್ಲಿ ಶೇ 80ರಷ್ಟು ಮಂದಿ ಚೀನಾದವರೇ ಹೆಚ್ಚು. ಹಾಗಾಗಿ ಅಲ್ಲಿಯೂ ಕೊರೊನಾ ಸೋಂಕು ಬಹಳ ಮಂದಿಗೆ ಹರಡಿದೆ. ಕರ್ನಾಟಕದಿಂದ ಹೋದವರು ಆರೋಗ್ಯದಿಂದ ಇದ್ದಾರಂತೆ. ಆದರೆ ಮನೆ ಬಿಟ್ಟು ಹೊರ ಬರಲಾಗುತ್ತಿಲ್ಲ. ಅದೇ ನಮಗೆ ಚಿಂತೆ ಮೂಡಿಸಿದೆ’ ಎಂದು ಆವರು ಆತಂಕ ವ್ಯಕ್ತಪಡಿಸಿದರು.

ಫಿಲಿಪ್ಪೀನ್ಸ್‌ನಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಅಲ್ಲಿನ ಸರ್ಕಾರ ಮತ್ತು ಭಾರತ ಸರ್ಕಾರ ಕೈಜೋಡಿಸಿ ಕರ್ನಾಟಕದ ಈ 12 ಮಂದಿ ಸೇರಿದಂತೆ ಎಲ್ಲ 400 ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆಸಿಕೊಳ್ಳಬೇಕು ಎಂಬುದು ಅವರ ಒತ್ತಾಯವಾಗಿದೆ.

ವಿಡಿಯೊದಲ್ಲಿ ಸಂಕಷ್ಟ ತೋಡಿಕೊಂಡ ವಿದ್ಯಾರ್ಥಿನಿಯರು

ಫಿಲಿಪ್ಪೀನ್ಸ್‌ನಲ್ಲಿ ಬಾಕಿಯಾಗಿರುವ ಕರ್ನಾಟಕದ ನಾಲ್ವರು ವಿದ್ಯಾರ್ಥಿನಿಯರು ತಮ್ಮ ಸಂಕಷ್ಟವನ್ನು ವಿಡಿಯೊ ಮಾಡಿ ಸಂಬಂಧಿಕರಿಗೆ, ಸ್ನೇಹಿತರಿಗೆ ಕಳುಹಿಸಿದ್ದಾರೆ.

ಫಿಲಿಪ್ಪೀನ್ಸ್‌ನಲ್ಲಿ 187 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅದರಲ್ಲಿ ನಾಲ್ವರು ಗುಣಮುಖರಾಗಿದ್ದಾರೆ. 49 ಮಂದಿ ಮೃತಪಟ್ಟಿದ್ದಾರೆ ಎಂದು ವಿಡಿಯೊ ಮೂಲಕ ಮಾಹಿತಿ ನೀಡಿದ್ದಾರೆ.

‘ಭಾರತದ ವಿದ್ಯಾರ್ಥಿಗಳು 72 ಗಂಟೆಗಳ ಒಳಗೆ ಅವರ ದೇಶಕ್ಕೆ ಹೋಗಬೇಕು ಎಂದು ಸರ್ಕಾರ ಆದೇಶ ಮಾಡಿತ್ತು. ಅದಕ್ಕಾಗಿ ಫ್ಲೈಟ್‌ ಬುಕ್‌ ಮಾಡಿದ್ದೀವಿ. ಆನಂತರ ಮೂರು ಗಂಟೆಗಳ ಒಳಗೆ ಹೋಗದಿದ್ದರೆ ವಿಮಾನ ಕಳುಹಿಸಲು ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ತಿಳಿಸಿದೆ. ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ’ ಎಂದು ವಿವರಿಸಿದ್ದಾರೆ.

‘ಭಾರತದ ವಿವಿಧ ಭಾಗದ 400 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಲ್ಲಿದ್ದಾರೆ. ಇಲ್ಲಿ ಚಿಕಿತ್ಸಾ ವೆಚ್ಚ ತುಂಬಾ ಅಧಿಕ. ಭಾರತ ಸರ್ಕಾರ ನಮ್ಮನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಬೇಕು. ಸರ್ಕಾರದ ಎಲ್ಲ ನಿಯಮಗಳನ್ನು ನಾವು ಪಾಲಿಸುತ್ತೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT