ಭಾನುವಾರ, ಮಾರ್ಚ್ 29, 2020
19 °C
ಸೋಂಕಿತರನ್ನು ಸಾಗಿಸುವ ಆಂಬುಲೆನ್ಸ್‌ ಸಿಬ್ಬಂದಿ, ತಪಾಸಣೆ ಮಾಡುವ ವೈದ್ಯಕೀಯ ಸಿಬ್ಬಂದಿಗೆ ಭದ್ರತೆ

1,200 ‘ಕೊರೊನಾ ಸುರಕ್ಷಾ ಕವಚ’ ರೆಡಿ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವ ಹಾಗೂ ಚಿಕಿತ್ಸೆ ನೀಡುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಾಗಿ ಜಿಲ್ಲೆಗೆ 1,200 ‘ಕೊರೊನಾ ಸುರಕ್ಷಾ ಕವಚದ ಕಿಟ್‌’ಗಳನ್ನು ತರಿಸಿಕೊಳ್ಳಲಾಗಿದೆ.

ಇದರಲ್ಲಿ ಅರ್ಧಷ್ಟು ಇಎಸ್‌ಐಸಿ ಆಸ್ಪತ್ರೆ ಹಾಗೂ ಇನ್ನರ್ಧ ಜಿಮ್ಸ್‌ಗೆ ಹಂಚಿಕೆ ಮಾಡಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸ್ಟಾಕ್‌ ಸ್ಟೋರ್‌ನಲ್ಲಿ ಈ ಸುರಕ್ಷತಾ ‘ಸಮವಸ್ತ್ರ‘ಗಳನ್ನು ಇಡಲಾಗಿದ್ದು, ಅದಕ್ಕೆ ಭದ್ರತೆಯನ್ನೂ ಇಲಾಖೆ ಒದಗಿಸಿದೆ.

ಜಿಲ್ಲೆಯಲ್ಲಿ ಕೊರೊನಾ ಶಂಕಿತರು ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಶಂಕಿತರ ಕಫದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸುವುದು ನಿರಂತರ ನಡೆದೇ ಇದೆ. ತೀರ ಇತ್ತೀಚಿನವರೆಗೂ ಶಂಕಿತರ ಅವಶ್ಯಕತೆಗೆ ತಕ್ಕಷ್ಟು ಮಾತ್ರ ಸುರಕ್ಷಾ ಕವಚಗಳನ್ನು ತರಿಸಿಕೊಳ್ಳಲಾಗಿತ್ತು. ಆದರೆ, ನಾಲ್ಕು ದಿನಗಳಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಏಕಾಏಕಿ ಸಾವಿರಕ್ಕೂ ಹೆಚ್ಚು ಕಿಟ್‌ಗಳನ್ನು ಪೂರೈಕೆ ಮಾಡಿದೆ.

ಏನೇನಿದೆ ಕಿಟ್‌ನಲ್ಲಿ?: ತಿಳಿ ನೀಲಿ ಬಣ್ಣದ ದಪ್ಪ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟ ಈ ಸುರಕ್ಷಾ ಕವಚಗಳು ಕೊರೊನಾ ವೈರಾಣು ದೇಹಕ್ಕೆ ಅಂಟಿಕೊಳ್ಳದಂತೆ ನಿರ್ಬಂಧಿಸುತ್ತವೆ. ಅಡಿಯಿಂದ ಮುಡಿಯವರೆಗೂ ಇಡೀ ದೇಹದ ಒಂದು ಕೂದಲು ಕೂಡ ಹೊರಗೆ ಚಾಚಿಕೊಳ್ಳದ ರೀತಿ ಪೂರ್ಣವಾಗಿ ಮುಚ್ಚಿಹಾಕುತ್ತದೆ.

ತಲೆಯನ್ನು ಬಿಗಿದು ಸುತ್ತಿಕೊಳ್ಳುವಂಥ ಕ್ಯಾಪ್‌, ಕಣ್ಣಿಗೆ ಗಾಗಲ್‌, ಮೊಣಕೈ– ಮುಂಗೈ ಬಳಿ ಎಲಾಸ್ಟಿಕ್‌ ಲಾಕ್‌, ಮುಂಗೈಗೆ ಕೈಗವಸು, ಬಾಯಿ–ಮೂಗು– ಕಿವಿ ಮುಚ್ಚಿಕೊಳ್ಳುವಂತ ಮಾಸ್ಕ್‌, ಮುಖದ ಅರ್ಧ ಭಾಗ ಮಾತ್ರ ಕಾಣುವಂತೆ ಮುಚ್ಚುವ ಪಾರದರ್ಶಕ ಸ್ಕ್ಟೀನ್‌, ಕತ್ತು– ಹೊಟ್ಟೆ– ಬೆನ್ನು– ಎದೆ– ತೊಡೆ, ಕಾಲು ಮುಂತಾದ ಭಾಗಗಳನ್ನು ಪೂರ್ಣವಾಗಿ ಮುಚ್ಚುವ ನಿಲುವಂಗಿ ಮಾದರಿಯ ಕೋಟ್‌, ಕಾಲುಗಳಿಗೆ ಒಳಗೆ ಸಾಕ್ಸ್‌; ಅದರ ಮೇಲೆ ಗಮ್‌ ಬೂಟಿನ ಆಕಾರದ ಗಟ್ಟಿಯಾದ ಪ್ಲಾಸ್ಟಿಕ್‌ ಕವರ್‌... ಇತ್ಯಾದಿ ಒಂದು ಕವಚದಲ್ಲಿ ಇರುತ್ತದೆ. ವಿಶೇಷವಾಗಿ ಈ ಕವಚ ಕೇವಲ ಎರಡು ತುಂಡುಗಳನ್ನು ಮಾತ್ರ ಹೊಂದಿದೆ. ಉಳಿದೆಲ್ಲವೂ ಪ್ಯಾಕ್‌ ಆಗಿಯೇ ಇರುತ್ತದೆ.

ಇನ್ನಷ್ಟು ಅವಶ್ಯ: ಸದ್ಯ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರು ಇಬ್ಬರು (ಮೃತಪಟ್ಟ ವ್ಯಕ್ತಿಯನ್ನೂ ಹೊರತುಪಡಿಸಿ) ಇದ್ದಾರೆ. ಸೋಮವಾರದ ಹೊತ್ತಿಗೆ ಒಟ್ಟು 36 ಶಂಕಿತರ ಮಾದರಿಗಳನ್ನು ಸಂಗ್ರಹಿಸಿಲಾಗಿದೆ. ಇದರಲ್ಲಿ 24 ನೆಗೆಟಿವ್‌ ಬಂದಿದ್ದು, ಉಳಿದವರ ವರದಿ ಬರಬೇಕು. ಜತೆಗೆ, ಪಾಸಿಟಿವ್‌ ಇರುವ ವ್ಯಕ್ತಿಗಳೊಂದಿಗೆ ನೇರ ಸಂಪರ್ಕಕ್ಕೆ ಬಂದವರ ಸಂಖ್ಯೆ 99ಕ್ಕೆ ಏರಿದೆ. ಈ ಸಂಖ್ಯೆಗಳನ್ನು ನೋಡಿದರೆ ಸದ್ಯ ಸಂದಾಯ ಮಾಡಲಾದ 1,200 ಕವಚದ ಕಿಟ್‌ಗಳು ಸಾಲುತ್ತವೆಯೇ ಎಂಬುದೇ ವೈದ್ಯಕೀಯ ಸಿಬ್ಬಂದಿಯನ್ನು ಕಾಡುತ್ತಿರುವ ಪ್ರಶ್ನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು