ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಲಾಕ್‌ಡೌನ್ ವಿಫಲವಾದರೆ ಕಠಿಣ ನಿಯಮ: ಬಸವರಾಜ ಬೊಮ್ಮಾಯಿ

ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಬೇಕು: ಮೂವರು ಸಚಿವರಿಂದ ಸಲಹೆ
Last Updated 7 ಮೇ 2020, 11:19 IST
ಅಕ್ಷರ ಗಾತ್ರ

ಬೆಂಗಳೂರು:ಕೋವಿಡ್‌–19 ಲಾಕ್‌ಡೌನ್‌ 3ನೇ ಹಂತ ಯಶಸ್ವಿಗೊಳಿಸುವ ಜವಾಬ್ದಾರಿ ಸಾರ್ವಜನಿಕರದು. ಒಂದು ವೇಳೆ ಇದು ಯಶಸ್ವಿ ಆಗದೇ ಇದ್ದರೆ ಮುಂದೆ ಕಠಿಣ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳಿಗಾಗಿ ಲಾಕ್‌ಡೌನ್‌ನಲ್ಲಿ ಕೆಲವು ಸಡಿಲಿಕೆ ಮಾಡಲಾಗಿದೆ. ಇದರ ಅರ್ಥ ಕೊರೊನಾ ವೈರಸ್‌ ಸಂಪೂರ್ಣ ತೊಲಗಿದೆ ಎಂದಲ್ಲ. ಕೊರೊನಾ ಇನ್ನೂ ಇದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂತರ ಪಾಲನೆ, ಮಾಸ್ಕ್‌ ಧರಿಸುವುದು ಸೇರಿ ಇತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸಹಕರಿಸಬೇಕು. ಇಲ್ಲವಾದರೆ, ಪರಿಸ್ಥಿತಿ ಗಂಭೀರವಾಗಲಿದೆ. ಆಗ ಇನ್ನಷ್ಟು ಕಠಿಣ ನಿಯಮ ಜಾರಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ಲಾಕ್‌ಡೌನ್‌ ಸಡಿಲಿಕೆ ಆರ್ಥಿಕ ಚಟುವಟಿಕೆಗಳಿಗಾಗಿಯೇ ಹೊರತು ಸ್ವಚ್ಛಾಚಾರಕ್ಕೆ ಎಂದು ಭಾವಿಸಬಾರದು. ಸ್ವಯಂ ನಿಯಂತ್ರಣ ವಿಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮನಸ್ಥಿತಿ ಬದಲಿಸಿಕೊಳ್ಳಿ

ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರಿಂದ ಕೊರೊನಾ ಹೋಗಿದೆ ಎಂದು ಕೆಲವರು ಭಾವಿಸಿದ್ದಾರೆ. ಅದು ತಪ್ಪು. ಕೊರೊನಾ ಹೋಗಿಲ್ಲ, ಮನಸ್ಥಿತಿ ಬದಲಿಸಿಕೊಂಡು 1 ಮತ್ತು 2 ನೇ ಲಾಕ್‌ಡೌನ್‌ನಲ್ಲಿದ್ದ ಕಟ್ಟು ನಿಟ್ಟಿನ ನಿಯಮ ಪಾಲನೆ 3 ನೇ ಹಂತದ ಲಾಕ್‌ಡೌನ್‌ನಲ್ಲೂ ಪಾಲಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ವ್ಯಕ್ತಿಗತ ಸ್ವಚ್ಚತೆಯ ಜತೆಗೆ, ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದರೆ ಹಸಿರು ವಲಯ ಕೆಂಪು ವಲಯವಾಗಿ ಮಾರ್ಪಾಡಾಗುವ ಅಪಾಯವಿದೆ ಎಂದೂ ಅವರು ಎಚ್ಚರಿಸಿದರು.

ನಾಳೆ, ನಾಡಿದ್ದು ಇನ್ನೆರಡು ರೈಲುಗಳು

ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ತೆರಳುವುದಕ್ಕೆ ಯಾರೂ ಅಡ್ಡಿ ಮಾಡಿಲ್ಲ. ರೈಲು ನಿಲ್ಲಿಸಲಿಲ್ಲ. ಈ ಸಂಬಂಧ ಕಾಂಗ್ರೆಸ್‌ನವರು ಅಪ ಪ್ರಚಾರ ಮಾಡುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಿಲ್ಲಿಸಬೇಕು ಎಂದು ಬಸವರಾಜ್‌ ಬೊಮ್ಮಾಯಿ ಹೇಳಿದರು.

ಬಿಹಾರ, ಒಡಿಶಾ, ಪಶ್ಚಿಮಬಂಗಾಳದವರು ಕಾರ್ಮಿಕರನ್ನು ಕಳಿಸಬೇಡಿ ಎನ್ನುತ್ತಿದ್ದಾರೆ. ಅವರು ಒಪ್ಪಿಗೆ ಕೊಟ್ಟರೆ ಮಾತ್ರ ರೈಲಿನಲ್ಲಿ ಕಳಿಸಬಹುದು. ಇಲ್ಲವಾದರೆ ಇಲ್ಲ. ಇಲ್ಲಿಂದ ಹೋಗುವ ಸಾವಿರಗಟ್ಟಲೆ ಕಾರ್ಮಿಕರಿಗೆ ಕ್ವಾರೈಂಟೈನ್‌ ವ್ಯವಸ್ಥೆ ಮತ್ತು ಆರೋಗ್ಯ ವ್ಯವಸ್ಥೆಯನ್ನು ಅವರು ಮಾಡಿಕೊಳ್ಳಬೇಕು. ಅದಕ್ಕಾಗಿ ಅವರು ಕಳಿಸಬೇಡಿ ಎನ್ನುತ್ತಿದ್ದಾರೆ ಎಂದು ವಿವರಿಸಿದರು.

ಹೀಗಾಗಿ ನಾವು ಕಾರ್ಮಿಕರನ್ನಾಗಲಿ, ರೈಲನ್ನಾಗಲಿ ತಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಶುಕ್ರವಾರ ಮತ್ತು ಶನಿವಾರ ಎರಡು ರೈಲುಗಳು ಹೋಗುತ್ತವೆ ಎಂದು ಬಸವರಾಜ್‌ ತಿಳಿಸಿದರು.

ಅನ್ಯ ರಾಜ್ಯಗಳು ಒಪ್ಪಿಗೆ ಕೊಟ್ಟರಷ್ಟೇ ರೈಲು: ಬೊಮ್ಮಾಯಿ

ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಲು ಯಾರೂ ತಡೆ ಒಡ್ಡಿಲ್ಲ. ರೈಲುಗಳನ್ನು ತಡೆ ಹಿಡಿದಿಲ್ಲ. ಕೆಲವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವ ಬಸವರಾಜ್‌ ಬೊಮ್ಮಾಯಿ ಕಿಡಿ ಕಾರಿದರು.

ನಾವು ಇಲ್ಲಿಂದ ಬೇರೆ ರಾಜ್ಯಗಳಿಗೆ ಕಾರ್ಮಿಕರನ್ನು ಕಳಿಸುವುದಕ್ಕೆ ಮೊದಲು ಆ ರಾಜ್ಯಗಳ ಒಪ್ಪಿಗೆ ಪಡೆಯಬೇಕು. ಬಿಹಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಕಾರ್ಮಿಕರನ್ನು ಕಳುಹಿಸಬೇಡಿ ಎಂದು ಹೇಳಿರುವ ಕಾರಣ ರೈಲುಗಳನ್ನು ಬಿಟ್ಟಿಲ್ಲ ಎಂದು ತಿಳಿಸಿದರು.

ಅವರು ಒಪ್ಪಿಗೆ ಕೊಟ್ಟರೆ ಮಾತ್ರ ರೈಲಿನಲ್ಲಿ ಕಳಿಸಬಹುದು. ಇಲ್ಲವಾದರೆ ಇಲ್ಲ. ಇಲ್ಲಿಂದ ಹೋಗುವ ಸಾವಿರಗಟ್ಟಲೆ ಕಾರ್ಮಿಕರಿಗೆ ಕ್ವಾರೈಂಟೈನ್‌, ಆರೋಗ್ಯ ತಪಾಸಣೆ ಸೇರಿದಂತೆ ಹಲವು ರೀತಿಯ ವ್ಯವಸ್ಥೆಗಳನ್ನು ಆ ರಾಜ್ಯಗಳವರು ಮಾಡಿಕೊಳ್ಳಬೇಕು. ಅದಕ್ಕಾಗಿ ಅವರು ಕಳಿಸಬೇಡಿ ಎನ್ನುತ್ತಿದ್ದಾರೆ ಎಂದು ವಿವರಿಸಿದರು.

ಕಾಂಗ್ರೆಸ್‌ನವರು ಸರಿಯಾದ ಮಾಹಿತಿ ತಿಳಿದುಕೊಳ್ಳದೇ ಮೊಸರಿನಲ್ಲಿ ಕಲ್ಲು ಹುಡುಕು ಕೆಲಸ ಮಾಡುವುದು ಬೇಡ.ಶುಕ್ರವಾರ ಮತ್ತು ಶನಿವಾರ ಎರಡು ರೈಲುಗಳು ಹೋಗುತ್ತವೆ ಎಂದು ಬಸವರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT