ಮಂಗಳವಾರ, ಏಪ್ರಿಲ್ 7, 2020
19 °C
ಒಬ್ಬ ವಿದ್ಯಾರ್ಥಿಯ ವರದಿಗೆ ಕಾಯುತ್ತಿರುವ ವೈದ್ಯರು

ಉಡುಪಿ: ಇಬ್ಬರಿಗೆ ಕೊರೊನಾ ಸೋಂಕು ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಶಂಕಿತ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವ ಮೂವರು ವಿದ್ಯಾರ್ಥಿಗಳ ಪೈಕಿ ಇಬ್ಬರ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದು ಡಿಎಚ್‌ಒ ಸುಧೀರ್ ಚಂದ್ರ ಸೂಡ ತಿಳಿಸಿದರು.

ಮೂವರು ವಿದ್ಯಾರ್ಥಿಗಳ ಗಂಟಲಿನ ದ್ರವವನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಬ್ಬರ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಮತ್ತೊಬ್ಬ ವಿದ್ಯಾರ್ಥಿಯ ವರದಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಅಮೆರಿಕಾ, ಕುವೈತ್ ಹಾಗೂ ಮಲೇಷ್ಯಾದವರಾಗಿದ್ದು, ಮಣಿಪಾಲ ವಿವಿಯಲ್ಲಿ ಓದುತ್ತಿದ್ದಾರೆ. ಈಚೆಗೆ ರಜೆ ಮುಗಿಸಿಕೊಂಡು ಮಣಿಪಾಲಕ್ಕೆ ಬಂದಿದ್ದ ಸಂದರ್ಭ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು ಎಂದು ತಿಳಿಸಿದರು.

ಮತ್ತೊಮ್ಮೆ ಪರೀಕ್ಷೆಗೆ ರವಾನೆ

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಶಂಕಿತ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವ ಶಿವಮೊಗ್ಗದ ಸಾಗರ ತಾಲ್ಲೂಕಿನ ಮಹಿಳೆಯ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನು ಮತ್ತೊಮ್ಮೆ ಪರೀಕ್ಷೆಗೆ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಗುರುವಾರವಷ್ಟೆ ಪರೀಕ್ಷಾ ವರದಿಯಲ್ಲಿ ಕೊರೊನಾ ಸೋಂಕು ಇಲ್ಲ ಎಂಬ ಅಂಶ ಬಂದಿತ್ತು. ಮತ್ತೆ ರೋಗ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ ಪರೀಕ್ಷೆಗೆ ಕಳುಹಿಸಲಾಗಿದೆ.

ಮತ್ತೊಂದೆಡೆ ಉಡುಪಿಯ ಶಿರ್ವದ ವ್ಯಕ್ತಿಯೊಬ್ಬರು ಕೊರೊನಾ ಸೋಂಕು ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಪಾನ್‌ ಹಡಗಿನಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿ ಈಚೆಗೆ ಉಡುಪಿಗೆ ಬಂದಿದ್ದರು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದು, ವ್ಯಕ್ತಿಯ ಗಂಟಲು ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು