ಮಂಗಳವಾರ, ಏಪ್ರಿಲ್ 7, 2020
19 °C
ವಿದೇಶ ಪ್ರಯಾಣ ಇತಿಹಾಸ ಹೊಂದಿರದ ವ್ಯಕ್ತಿಗೆ ರೋಗ

ಸಮುದಾಯಕ್ಕೆ ಹರಡಿತೇ ಸೋಂಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದೇಶ ಪ್ರಯಾಣ ಮಾಡದ ಹಾಗೂ ಸೋಂಕಿತರೊಂದಿಗೆ  ಸಂಪರ್ಕ ಹೊಂದಿರದ 35 ವರ್ಷದ ವ್ಯಕ್ತಿಯಲ್ಲಿ (ರೋಗಿ 52) ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಈ ಸೋಂಕು ಮೂರನೇ ಹಂತ ಪ್ರವೇಶಿಸಿ, ಸಮುದಾಯಕ್ಕೆ ಹರಡಲು ಪ್ರಾರಂಭಿಸಿತೇ ಎಂಬ ಆತಂಕ ರಾಜ್ಯದಲ್ಲಿ ಶುರುವಾಗಿದೆ.

ಸದ್ಯ, ಎರಡನೇ ಹಂತದಲ್ಲಿರುವ ಈ ಸೋಂಕು ವಿದೇಶ ಪ್ರಯಾಣ ಮಾಡಿ ಬಂದವರು, ಅವರ ಕುಟುಂಬದ ಸದಸ್ಯರು ಹಾಗೂ ನೇರವಾಗಿ ಸಂಪರ್ಕ ಹೊಂದಿದ್ದವರಿಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ. ಮೈಸೂರು ಜಿಲ್ಲೆಯ 35 ವರ್ಷದ ವ್ಯಕ್ತಿ ಇದಕ್ಕೆ ಹೊರತಾಗಿದ್ದಾರೆ. ನಂಜನಗೂಡಿನ ಔಷಧ ಉತ್ಪಾದನಾ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಅವರು, ಹಲವು ವೈದ್ಯಕೀಯ ತಜ್ಞರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ ಎನ್ನುವುದು ಪರಿಶೀಲನೆಯಲ್ಲಿ ಗೊತ್ತಾಗಿದೆ. ಸಂಪರ್ಕಕ್ಕೆ ಬಂದ ಏಳು ಮಂದಿಯನ್ನು ಮನೆಯಲ್ಲಿ ನಿಗಾ ಇರಿಸಲಾಗಿದೆ. 

ಈ ಬಗ್ಗೆ ಇಲಾಖೆಯ ಆಯುಕ್ತ ಪಂಕಜ್‌ಕುಮಾರ್ ಪಾಂಡೆ ಪ್ರತಿಕ್ರಿಯಿಸಿ, ‘ಸೋಂಕು ಸಮುದಾಯಕ್ಕೆ ಹರಡಿಲ್ಲ. ಮೈಸೂರಿನಲ್ಲಿ ಈ ಮೊದಲು ಎರಡು ಪ್ರಕರಣಗಳು ವರದಿಯಾಗಿವೆ. 35 ವರ್ಷದ ವ್ಯಕ್ತಿಗೆ ಸೋಂಕು ಹರಡಿದ ಮೂಲದ ಬಗ್ಗೆ ಪತ್ತೆ ಕಾರ್ಯ ನಡೆದಿದೆ’ ಎಂದು ತಿಳಿಸಿದ್ದಾರೆ.

ಫ್ರಾನ್ಸ್‌ನಿಂದ ಮಾ.1ಕ್ಕೆ ಭಾರತಕ್ಕೆ ಬಂದಿದ್ದ ಆಂಧ್ರಪ್ರದೇಶದ ಅನಂತಪುರದ 64 ವರ್ಷದ ವ್ಯಕ್ತಿ, ಹಿಮಾಚಲ ಪ್ರದೇಶದ ಮೂಲಕ ಮಾ.21ಕ್ಕೆ ಬೆಂಗಳೂರಿಗೆ ಬಂದಿದ್ದರು. ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನ 25ನೇ ರೋಗಿಯ ಮನೆಯ ಸೆಕ್ಯೂರಿಟಿ ಗಾರ್ಡ್‌ ಕೂಡ ಸೋಂಕಿಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸಹಾಯವಾಣಿ ಸಂಪರ್ಕಿಸಲು ಮನವಿ: 36ನೇ ರೋಗಿ ಮಾ.17ರಂದು ಮಂಗಳೂರು ಎಕ್ಸ್‌ಪ್ರೆಸ್ ರೈಲಿನ ಎಸ್‌.3 ಕೋಚ್‌ನಲ್ಲಿ ಮುಂಬೈನಿಂದ ಭಟ್ಕಳಕ್ಕೆ ಪ್ರಯಾಣಿಸಿದ್ದರು. ಈ ರೈಲಿನಲ್ಲಿ ಪ್ರಯಾಣಿಸಿದ ಸಹ ಪ್ರಯಾಣಿಕರು ಸಹಾಯವಾಣಿ ಸಂಖ್ಯೆ 104 ಅಥವಾ 080 46848600, 080 66692000ಕ್ಕೆ ಸಂಪರ್ಕಿಸಲು ಆರೋಗ್ಯ ಇಲಾಖೆ ಮನವಿ ಮಾಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು