ಗುರುವಾರ , ಜೂಲೈ 2, 2020
28 °C
ಒಂದೇ ದಿನ 144 ಮಂದಿಗೆ ಸೋಂಕು * ಮೃತರ ಸಂಖ್ಯೆ 49ಕ್ಕೆ ಏರಿಕೆ

ಕೋವಿಡ್‌–19 | ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3 ಸಾವಿರದತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನ್ಯರಾಜ್ಯಗಳಿಂದ ತವರೂರಿಗೆ ವಾಪಸ್ ಆದವರಲ್ಲಿ 90 ಮಂದಿ ಸೇರಿದಂತೆ ಶನಿವಾರ ಒಂದೇ ದಿನ 144 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,925ಕ್ಕೆ ತಲುಪಿದೆ. 

ಕೇವಲ ಒಂದು ವಾರದಲ್ಲಿ 866 ಪ್ರಕರಣಗಳು ವರದಿಯಾಗಿದ್ದು, ಬಹುತೇಕರು ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ ಕೂಡ 83 ಮಂದಿ ಅಲ್ಲಿಗೆ ಪ್ರಯಾಣ ಮಾಡಿದ ಇತಿಹಾಸವನ್ನು ಹೊಂದಿದ್ದಾರೆ. ಇದರಿಂದಾಗಿ ಈವರೆಗೆ ಸೋಂಕಿತರಾದವರಲ್ಲಿ 1,211 ಮಂದಿ ಮಹಾರಾಷ್ಟ್ರದ ನಂಟನ್ನು ಹೊಂದಿದ್ದಾರೆ.

ಶನಿವಾರ ಒಂದೇ ದಿನ 15,728 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷಿಸಲಾಗಿದೆ. ಈವರೆಗೆ ಒಂದು ದಿನದಲ್ಲಿ ಪರೀಕ್ಷೆ ಮಾಡಿದ ಗರಿಷ್ಠ ಮಾದರಿಗಳು ಇವಾಗಿವೆ. ಅದೇ ರೀತಿ, ಕಲಬುರ್ಗಿಯಲ್ಲಿ 43 ಮಂದಿ ಸೇರಿದಂತೆ ಒಟ್ಟು 103 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 

ಮೃತರ ಸಂಖ್ಯೆ 49ಕ್ಕೆ: ಬೀದರ್‌ನಲ್ಲಿ 47 ವರ್ಷದ ಮಹಿಳೆ ಸೋಂಕಿಗೆ ಮೃತಪಟ್ಟಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕಿಗೆ ಸಾವಿಗೀಡಾದವರ ಸಂಖ್ಯೆ 49ಕ್ಕೆ ಏರಿದೆ.

ಇಂದು ‘ಕರ್ಫ್ಯೂ’ ಇಲ್ಲ
ಕೊರೊನಾ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ಪ್ರತಿ ಭಾನುವಾರ ‘ಕರ್ಫ್ಯೂ’ (ಸಂಪೂರ್ಣ ಲಾಕ್‌ಡೌನ್‌) ವಿಧಿಸುವುದಾಗಿ ಈ ಹಿಂದೆ ಘೋಷಿಸಿದ್ದ ರಾಜ್ಯ ಸರ್ಕಾರ, ಇದೀಗ ಅದರಿಂದ ಹಿಂದೆ ಸರಿದಿದೆ.

ಈ ಕುರಿತು ಶನಿವಾರ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ‘ಭಾನುವಾರ (ಮೇ 31) ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಕರ್ಫ್ಯೂ ತೆರವುಗೊಳಿಸಲಾಗಿದೆ. ಆದರೆ, ಪ್ರತಿ ದಿನದಂತೆ ರಾತ್ರಿ 7ರಿಂದ ಮರುದಿನ ಬೆಳಿಗ್ಗೆ 7 ಗಂಟೆವರೆಗಿನ ಕರ್ಫ್ಯೂ ಜಾರಿಯಲ್ಲಿ ಇರಲಿದೆ’ ಎಂದು ತಿಳಿಸಿದೆ.

ಸಕ್ರಿಯ ಪ್ರಕರಣ ಇಳಿಕೆ
ದೇಶದಲ್ಲಿ ಕೋವಿಡ್‌–19 ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಮೊದಲ ಬಾರಿಗೆ ಶನಿವಾರ ಇಳಿಕೆ ಕಂಡುಬಂದಿದೆ. 11,000ಕ್ಕೂ ಹೆಚ್ಚು ಮಂದಿ ಸೋಂಕಿತರು ಗುಣಮುಖರಾಗಿದ್ದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆಯು ಶುಕ್ರವಾರದ ಸಂಖ್ಯೆಗಿಂತ ಕಡಿಮೆಯಾಗಿದೆ.

ಆದರೆ ಹೊಸ ಸೋಂಕಿತು ಮತ್ತು ಮೃತರ ಸಂಖ್ಯೆಯು ಶನಿವಾರ ಹೊಸ ದಾಖಲೆಯನ್ನು ನಿರ್ಮಿಸಿವೆ. ಶನಿವಾರ ಒಂದೇ ದಿನ ದೇಶದಲ್ಲಿ ಕೋವಿಡ್‌–19ನಿಂದಾಗಿ 265 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದು ಒಂದುದಿನದ ಗರಿಷ್ಠ ದಾಖಲೆಯಾಗಿದೆ. ಶನಿವಾರ ಹೊಸದಾಗಿ 7,964ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದು ಇದು ಸಹ ಒಂದೇದಿನದ ಗರಿಷ್ಠ ಪ್ರಮಾಣವಾಗಿದೆ.

ಒಟ್ಟು 11,264 ಮಂದಿ ಸೋಂಕಿತರು ಗುಣಮುಖರಾಗಿ ಶನಿವಾರ ಮನೆಗೆ ಮರಳಿದ್ದಾರೆ. ಶುಕ್ರವಾರ ಸಕ್ರಿಯ ಸೋಂಕಿತರ ಸಂಖ್ಯೆಯು 89,987 ಇದ್ದರೆ ಶನಿವಾರ ಅದು 86,422ಕ್ಕೆ ಇಳಿದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಸಾರ್ವಜನಿಕರ ಬೇಡಿಕೆ ಹಾಗೂ ರಾಜ್ಯದ ಜನರ ಹಿತದೃಷ್ಟಿ
ಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕರ್ಫ್ಯೂ ತೆರವುಗೊಳಿಸಿರುವುದರಿಂದ ದೈನಂದಿನ ಚಟುವಟಿಕೆ ಎಂದಿನಂತೆ ಇರಲಿದೆ’ ಎಂದಿದ್ದಾರೆ.

ಸಂಪೂರ್ಣ ಲಾಕ್‌ಡೌನ್‌ ಇಲ್ಲದೇ ಇರುವುದರಿಂದ ಭಾನುವಾರ ಯಥಾಸ್ಥಿತಿಯಂತೆ ಬಸ್‌ಗಳು ಓಡಾಡಲಿವೆ. ಆಟೊ, ಟ್ಯಾಕ್ಸಿ ಸೇವೆಗಳೂ ಲಭ್ಯವಾಗಲಿವೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು