ಶನಿವಾರ, ಜುಲೈ 31, 2021
28 °C
ರಾಜ್ಯದಲ್ಲಿ ಒಂದೇ ದಿನ 453 ಮಂದಿಗೆ ಸೋಂಕು ದೃಢ

ಕರ್ನಾಟಕ: 9 ಸಾವಿರ ಗಡಿ ದಾಟಿದ ಕೋವಿಡ್-19 ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ನಗರದ 196 ಸೇರಿದಂತೆ ರಾಜ್ಯದಲ್ಲಿ ಭಾನುವಾರ ಒಂದೇ ದಿನ 453 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸೋಂಕಿತರ ಸಂಖ್ಯೆ 9 ಸಾವಿರದ ಗಡಿ (9,150) ದಾಟಿದೆ. 

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ ಮೂರು ಮಂದಿ ಹಾಗೂ ಬೀದರ್‌ನಲ್ಲಿ ಇಬ್ಬರು ಮೃತಪಟ್ಟಿದ್ದು, ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 137ಕ್ಕೆ ಏರಿಕೆಯಾಗಿದೆ. ಕೇವಲ 48 ಗಂಟೆಗಳಲ್ಲಿ 869 ಮಂದಿ ಕೋವಿಡ್ ಪೀಡಿತರಾಗಿದ್ದಾರೆ.

ಇಳಿಕೆ ಮಾಡಲಾಗಿದ್ದ ಕೋವಿಡ್ ಪರೀಕ್ಷೆಯ ಸಂಖ್ಯೆಯನ್ನು ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತ್ತೆ ಹೆಚ್ಚಿಸಲಾಗಿದೆ. ಭಾನುವಾರ ಒಂದೇ ದಿನ 12,872 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹೊಸ ಪ್ರಕರಣಗಳಲ್ಲಿ 69 ಮಂದಿ ಅನ್ಯ ರಾಜ್ಯಗಳಿಂದ ಬಂದವರಾಗಿದ್ದಾರೆ. ಬೀದರ್‌ನಲ್ಲಿ 58 ಸೇರಿದಂತೆ 225 ಮಂದಿ ಚೇತರಿಸಿ ಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 

ಬೆಂಗಳೂರಿನಲ್ಲಿ 196, ಬಳ್ಳಾರಿಯಲ್ಲಿ 40, ಕಲಬುರ್ಗಿಯಲ್ಲಿ 39, ವಿಜಯಪುರದಲ್ಲಿ 39, ಮೈಸೂರಿನಲ್ಲಿ 18, ಗದಗದಲ್ಲಿ 18, ಧಾರವಾಡದಲ್ಲಿ 15, ಬಾಗಲಕೋಟೆಯಲ್ಲಿ 14, ಬೀದರ್‌ನಲ್ಲಿ 13, ದಾವಣಗೆರೆಯಲ್ಲಿ 8, ಕೋಲಾರದಲ್ಲಿ 8, ಉತ್ತರ ಕನ್ನಡದಲ್ಲಿ 8, ದಕ್ಷಿಣ ಕನ್ನಡದಲ್ಲಿ 7, ಮಂಡ್ಯದಲ್ಲಿ 5, ಹಾಸನದಲ್ಲಿ 5, ತುಮಕೂರಿನಲ್ಲಿ 4, ಯಾದಗಿರಿಯಲ್ಲಿ 3, ಚಿಕ್ಕಬಳ್ಳಾಪುರದಲ್ಲಿ 3, ಹಾವೇರಿಯಲ್ಲಿ 3, ರಾಯಚೂರಿನಲ್ಲಿ 2, ಶಿವಮೊಗ್ಗದಲ್ಲಿ 2, ರಾಮನಗರದಲ್ಲಿ 2 ಹಾಗೂ ಚಿಕ್ಕಮಗಳೂರಿನಲ್ಲಿ ಒಂದು ಪ್ರಕರಣ ಹೊಸದಾಗಿ ವರದಿಯಾಗಿವೆ. 

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ 53 ವರ್ಷದ ಮಹಿಳೆ, 62 ವರ್ಷದ ಪುರುಷ ಹಾಗೂ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನಲ್ಲಿ ಮೃತರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.

ಬೀದರ್‌ನಲ್ಲಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 70 ವರ್ಷದ ವೃದ್ಧ ಹಾಗೂ 46 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. 

ಆಸ್ಪತ್ರೆಗಳಲ್ಲಿ ಹಾಸಿಗೆ ಭರ್ತಿ

ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 796ಕ್ಕೆ ತಲುಪಿದ್ದು, ಕೋವಿಡ್‌ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗಿವೆ.

ಸೋಂಕಿತರಿಗೆ ಚಿಕಿತ್ಸೆಗಾಗಿ ವಿಕ್ಟೋರಿಯಾದಲ್ಲಿ 500 ಹಾಸಿಗೆಗಳು ಹಾಗೂ ಬೌರಿಂಗ್ ಆಸ್ಪತ್ರೆಯಲ್ಲಿ 240 ಹಾಸಿಗೆಗಳು ಲಭ್ಯವಿದ್ದು ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ ಇರುವವರನ್ನು ದಾಖಲಿಸಿಕೊಳ್ಳಲಾಗಿದೆ. ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ 104 ಹಾಸಿಗೆಗಳೂ ಭರ್ತಿಯಾಗಿವೆ. ಕೋವಿಡ್ ಆಸ್ಪತ್ರೆಗಳ ಐಸಿಯು ಹಾಸಿಗೆಗಳು ಸಹ ಭರ್ತಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು