ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19: ಕಟ್ಟುನಿಟ್ಟಿನ ಸೀಲ್‌ಡೌನ್

ರಾಜ್ಯದಾದ್ಯಂತ ಸೋಂಕು ಪ್ರಮಾಣ ಹೆಚ್ಚಾಗಿರುವ ಪ್ರದೇಶ ಪೂರ್ಣ ಬಂದ್‌
Last Updated 22 ಜೂನ್ 2020, 19:36 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿರುವ ಪ್ರದೇಶಗಳನ್ನು ಇದೇ 30ರವರೆಗೆ ಸಂಪೂರ್ಣ ಸೀಲ್‌ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆ.

ಕ್ವಾರಂಟೈನ್‌ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಲು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.

ಸೋಂಕು ಹರಡುವಿಕೆ ತಡೆಯಲು ಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೋಮವಾರ ಸಚಿವರು ಹಾಗೂ ಅಧಿಕಾರಿಗಳ ಸಭೆಯನ್ನು ನಡೆಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, ‘ಸೀಲ್‌ಡೌನ್‌ ಈವರೆಗೆ ಸೋಂಕಿತರ ಮನೆಗಳಿಗಷ್ಟೇ ಸೀಮಿತವಾಗಿತ್ತು. ಇನ್ನು ಮುಂದೆ ಇಡೀ ರಸ್ತೆಗೆ ಮತ್ತು ಅಕ್ಕಪಕ್ಕದ ರಸ್ತೆಗಳಿಗೂ ಅನ್ವಯವಾಗಲಿದೆ. ಬೀದರ್, ಕಲಬುರ್ಗಿ ಸಹಿತ ಕೊರೊನಾ ಸೋಂಕು ಅಧಿಕ ಪ್ರಮಾಣದಲ್ಲಿ ಕಂಡುಬಂದಿರುವ ಕಡೆಗಳಲ್ಲಿ ಸಹ ಇದು ಜಾರಿಗೆ ಬರಲಿದೆ’ ಎಂದು ತಿಳಿಸಿದರು.

ಆಸ್ಪತ್ರೆ ಕೊರತೆ ನಿವಾರಣೆ

‘ವಿಕ್ಟೋರಿಯಾ ಸಹಿತ ಕೆಲವು ಆಸ್ಪತ್ರೆಗಳಲ್ಲಿ ಬೆಡ್‌ಗಳು ಭರ್ತಿಯಾಗಿರುವುದರಿಂದ ಮಂಗಳವಾರದಿಂದಲೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುವುದು. ಯಾವ ಆಸ್ಪತ್ರೆಗಳಲ್ಲಿ ಎಷ್ಟು ಬೆಡ್‌ಗಳು ಲಭ್ಯ ಇವೆ ಎಂಬ ಮಾಹಿತಿಯನ್ನು ವಾರ್‌ರೂಂನಲ್ಲೇ ನೀಡುವ ವ್ಯವಸ್ಥೆ ಇರುತ್ತದೆ, ಜತೆಗೆ ಸೋಂಕಿತರ ಮೊಬೈಲ್‌ಗೆ ಸಂದೇಶವೂ ಬರಲಿದೆ. ಇನ್ನು ಮುಂದೆ ಸೋಂಕಿತರಿಗೆ ತಕ್ಷಣ ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು’ ಎಂದು ಹೇಳಿದರು.

ಸೇನಾನಿಗಳಿಗೆ ಪ್ರತ್ಯೇಕ ಪರೀಕ್ಷೆ, ಚಿಕಿತ್ಸೆ

‍‍‘ಪೊಲೀಸರು, ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದರೆ ಕಷ್ಟ. ಅವರು ತ್ವರಿತವಾಗಿ ಗುಣಮುಖರಾಗಿ ಮತ್ತೆ ಕೆಲಸಕ್ಕೆ ಹಾಜರಾಗಬೇಕು. ಹೀಗಾಗಿ ಅವರಿಗೆ ಪ್ರತ್ಯೇಕ ಪರೀಕ್ಷೆ, ಚಿಕಿತ್ಸೆ ಕೊಡಿಸಲು ನಿರ್ಧರಿಸಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರು ನಗರದಲ್ಲಿ 59 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಸದ್ಯ 49 ಸಕ್ರಿಯ ಪ್ರಕರಣಗಳಿವೆ. ರಾಜ್ಯದ ಇತರೆಡೆ 93 ಪೊಲೀಸರಿಗೆ ಸೋಂಕು ತಗುಲಿದ್ದು, 36 ಸಕ್ರಿಯ ಪ್ರಕರಣಗಳಿವೆ. ಪೊಲೀಸರಿಗೆ ಅಗತ್ಯ ಸೌಲಭ್ಯ ನೀಡದ ಕಾರಣ ಅವರಿಗೆ ಸೋಂಕು ತಗುಲುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರ’ ಎಂದರು.

ಆಗಸ್ಟ್‌ನಲ್ಲಿ 25 ಸಾವಿರಕ್ಕೆ ಏರಿಕೆ

‘ರಾಜ್ಯದಲ್ಲಿ ಆಗಸ್ಟ್‌ 15ರ ವೇಳೆಗೆ ಕೋವಿಡ್‌ ಪ್ರಕರಣಗಳ ಸಂಖ್ಯೆ 20 ಸಾವಿರದಿಂದ 25 ಸಾವಿರದಷ್ಟು ಆಗುವ ನಿರೀಕ್ಷೆ ಇದೆ’ ಎಂದು ಕರ್ನಾಟಕ ಕೋವಿಡ್‌ 19 ವಾರ್‌ ರೂಂ ಉಸ್ತುವಾರಿ ಮುನೀಶ್ ಮೌದ್ಗಿಲ್‌ ಹೇಳಿದ್ದಾರೆ.

‘15–20 ದಿನಗಳಲ್ಲಿ ಎಷ್ಟು ಹೆಚ್ಚಲಿದೆ ಎಂದು ಹೇಳಬಹುದು. ಅದರಾಚೆಗಿನ ಅವಧಿಯಲ್ಲಿ ಎಷ್ಟರಮಟ್ಟಿಗೆ ಏರಿಕೆಯಾಗಲಿದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಅದು ಜನರ ವರ್ತನೆ ಮತ್ತು ಸರ್ಕಾರ ತೆಗೆದುಕೊಳ್ಳುವ ಕ್ರಮವನ್ನು ಅವಲಂಬಿಸಿದೆ. ಜುಲೈ ವೇಳೆಗೆ 10 ಸಾವಿರ ಆಗಬಹುದು ಎಂದು ಈ ಹಿಂದೆಯೇ ಹೇಳಿದ್ದೆ’ ಎಂದೂ ತಿಳಿಸಿದ್ದಾರೆ.

‘ಪ್ರಕರಣಗಳ ಸಂಖ್ಯೆ ನಿತ್ಯ ಶೇ 3ರಷ್ಟು ಏರಿಕೆಯಾದರೆ 17 ಸಾವಿರಕ್ಕೆ ತಲುಪಬಹುದು. ಅದೇ ಶೇ 4ರಷ್ಟು ಏರಿಕೆಯಾದರೆ ಮುಂದಿನ 50ರಿಂದ 60 ದಿನಗಳಲ್ಲಿ ಈ ಸಂಖ್ಯೆ 25 ಸಾವಿರ ಆಗಬಹುದು’ ಎಂದೂ ಹೇಳಿದ್ದಾರೆ.

ಸೋಂಕಿತರ ಫೋಟೊ ತೆಗೆದರೆ ಕಾನೂನು ಕ್ರಮ

ಕೋವಿಡ್ ಸೋಂಕಿತರ ಫೋಟೊ ತೆಗೆಯುವುದು ಮತ್ತು ಅದನ್ನು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್‌ ಎಚ್ಚರಿಕೆ ನೀಡಿದ್ದಾರೆ.

‘ಜನರ ಈ ರೀತಿಯ ವರ್ತನೆ ರೋಗಿಯ ಕುರಿತು ಸುತ್ತಮುತ್ತಲಿನ ಜನರಲ್ಲಿ ಭಯ ಹುಟ್ಟಿಸುತ್ತದೆ. ನೈತಿಕ ಸ್ಥೈರ್ಯ ಕುಗ್ಗಿಸುತ್ತಿದೆ. ಅಲ್ಲದೆ, ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುತ್ತದೆ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

‘ಸೋಂಕಿತರ ಅನುಮತಿ ಇಲ್ಲದೆ ಫೋಟೊ ಮತ್ತು ವಿಡಿಯೊ ತೆಗೆಯಬಾರದು. ಇದು ಕ್ರಿಮಿನಲ್ ಅಪರಾಧದ ವ್ಯಾಪ್ತಿಗೆ ಬರುತ್ತದೆ. ಫೋಟೊ ತೆಗೆಯುವುದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಎಲ್ಲ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ.

ಸಚಿವ ಸುಧಾಕರ್ ತಂದೆಗೂ ಕೋವಿಡ್‌

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರ ತಂದೆ ಪಿ.ಎನ್‌.ಕೇಶವ ರೆಡ್ಡಿ ಅವರಿಗೆ ಕೋವಿಡ್–19 ದೃಢಪಟ್ಟಿದೆ.

‘ನನ್ನ ತಂದೆಯವರ ಕೋವಿಡ್‌ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಕುಟುಂಬದ ಇತರ ಸದಸ್ಯರ ವರದಿಗಾಗಿ ಆತಂಕದಿಂದ ಕಾಯುತ್ತಿದ್ದೇನೆ. ನನ್ನ ತಂದೆಯವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ’ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT