ಮಂಗಳವಾರ, ಆಗಸ್ಟ್ 3, 2021
22 °C

ಕೋವಿಡ್‌ ಪರೀಕ್ಷೆ ವರದಿ ವಿಳಂಬ ಏಕೆ: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ನ್ಯಾಯಾಧೀಶರೊಬ್ಬರ ತಂದೆಗೆ ಕೊರೊನಾ ಸೋಂಕು ಇದೆ ಎಂಬ ಕಾರಣಕ್ಕೆ ನ್ಯಾಯಾಧೀಶರ ವಸತಿ ಸಮುಚ್ಚಯದ 14 ನ್ಯಾಯಾಧೀಶರು ಕ್ವಾರೆಂಟೈನ್‌ಗೆ ಒಳಗಾಗಿದ್ದಾರೆ. ಇವರೆಲ್ಲಾ ಜುಲೈ 4ರಂದೇ ಪರೀಕ್ಷೆ ಮಾಡಿಸಿಕೊಂಡಿದ್ದರೂ ಇನ್ನೂ ಏಕೆ ವರದಿ ಬಂದಿಲ್ಲ' ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.

ಕೊರೊನಾ ಸಂಕಷ್ಟಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಪೀಠ 'ಜನಸಾಮಾನ್ಯರು ಪರೀಕ್ಷೆ ಮಾಡಿಸಿದರೆ ವರದಿ ಬರಲು ಎಷ್ಟು ಸಮಯ ಬೇಕು' ಎಂದು ಕೇಳಿದೆ.

ವಿಚಾರಣೆ ವೇಳೆ ಸರ್ಕಾರಿ ವಕೀಲರ ವಿವರಣೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ಕೊರೊನಾ ಪರೀಕ್ಷಾ ವರದಿ‌ ನೀಡಲು ವಿಳಂಬ ಮಾಡುತ್ತಿರುವುದರಿಂದ ಸೋಂಕು ಮತ್ತಷ್ಟು ಹರಡುವ ಸಾಧ್ಯತೆ ಇದೆ' ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

'ವರದಿ ತಡವಾಗಿ ಕೈಸೇರಿದರೆ ಮತ್ತು ಒಂದು ವೇಳೆ ಪಾಸಿಟಿವ್ ಎಂದು ಪತ್ತೆಯಾದರೆ, ಅಷ್ಟರಲ್ಲಿ ಸೋಂಕಿತ ವ್ಯಕ್ತಿ ಸುತ್ತಾಡಿದ ಸ್ಥಳಗಳಲ್ಲಿ ಹಾಗೂ ಅವರ ಸಂಪರ್ಕಕ್ಕೆ ಬಂದವರಿಗೂ ಕೊರೊನಾ ಹರಡಿರುತ್ತದೆ.‌ ಇದನ್ನು ಹೇಗೆ ನಿಯಂತ್ರಿಸಲಾಗುತ್ತದೆ' ಎಂದು ನ್ಯಾಯಪೀಠ ಪ್ರಶ್ನಿಸಿದೆ.

'ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಅನುಸರಿಸುವ ವ್ಯವಸ್ಥೆ ಏನು, ಆಸ್ಪತ್ರೆಗಳಲ್ಲಿರುವ ಖಾಲಿ ಹಾಸಿಗೆಗಳು ಮತ್ತು ಕೊರೋನಾಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಬಗ್ಗೆ ಸಾರ್ವಜನಿಕರು ತಿಳಿಯಲು ಯಾವುದಾದರೂ ಕೇಂದ್ರೀಕೃತ ವ್ಯವಸ್ಥೆ ಇದೆಯೇ' ಎಂದೂ ನ್ಯಾಯಪೀಠ ಪ್ರಶ್ನಿಸಿದೆ.

ವಿಚಾರಣೆಯನ್ನು ಇದೇ 13ಕ್ಕೆ ಮಂದೂಡಲಾಗಿದೆ.

ತನಿಖೆಗೆ ತಾಕೀತು: 'ರೋಗಿಯೊಬ್ಬರು ಒಂಬತ್ತು ಆಸ್ಪತ್ರೆಗಳಿಗೆ ಅಲೆದು ಮೃತಪಟ್ಟ ವಿಚಾರದ ಬಗ್ಗೆ ಸಮರ್ಪಕ ತನಿಖೆ ನಡೆಸಬೇಕು'  ಎಂದು ನ್ಯಾಯಪೀಠ ಇದೇ ವೇಳೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

'ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಆಸ್ಪತ್ರೆಗಳಿಗೆ ಕಠಿಣ ಸಂದೇಶ ರವಾನಿಸಬೇಕು' ಎಂದು ಸೂಚಿಸಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು