ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ಸಾವಿರ ವೈದ್ಯರಿಗೆ ಆನ್‌ಲೈನ್‌ ತರಬೇತಿ: ಶಿಷ್ಟಾಚಾರ ಅಳವಡಿಸಿದ ಮೊದಲ ರಾಜ್ಯ

Last Updated 1 ಏಪ್ರಿಲ್ 2020, 1:59 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ರಾಜ್ಯದ 25 ಸಾವಿರಕ್ಕೂ ಹೆಚ್ಚು ವೈದ್ಯರಿಗೆ ಹಾಗೂ ಸಾವಿರಾರು ವೈದ್ಯಕೀಯ ಸೇವಾ ಸಿಬ್ಬಂದಿಗೆ ಆನ್‌ಲೈನ್‌ ಮೂಲಕ ತರಬೇತಿ ಕಾರ್ಯಾಗಾರ ಆರಂಭಿಸಲಾಗಿದ್ದು, ಕೋವಿಡ್‌–19 ಚಿಕಿತ್ಸಾ ಶಿಷ್ಟಾಚಾರ ಅಳವಡಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

ಕೋವಿಡ್-19 ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವುದು, ರೋಗದ ಕುರಿತು ಮಾರ್ಗದರ್ಶನ, ಅಳವಡಿಸಿಕೊಳ್ಳಬೇಕಾದ ಸುರಕ್ಷತಾ ಕ್ರಮಗಳು ಮತ್ತು ಕಾರ್ಯನಿರ್ವಹಣಾ ವಿಧಾನ ಕುರಿತು 20 ಪುಟಗಳ ಶಿಷ್ಟಾಚಾರವನ್ನು ಸಿದ್ಧಪಡಿಸಲಾಗಿದ್ದು, ದೇಶದಾದ್ಯಂತ ವೈದ್ಯರು ಇದನ್ನೇ ಕಡ್ಡಾಯವಾಗಿ ಅನುಸರಿಸಬೇಕಾಗಿದೆ.

ನಗರದ ನಿಮ್ಹಾನ್ಸ್‌ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ತರಬೇತಿ ಶಿಬಿರ ಆರಂಭವಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇದಕ್ಕೆ ಚಾಲನೆ ನೀಡಿದರು.

ಕೊರೊನಾ ಎದುರಿಸಲು ಸಜ್ಜಾಗಿರುವ ವೈದ್ಯರ ಸೇವೆಯನ್ನು ಕೊಂಡಾಡಿದ ಅವರು, ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ ಉತ್ತಮ ಗುಣಮಟ್ಟದ ಮುಖಗವಸು, ವೈಯಕ್ತಿಕ ಸುರಕ್ಷಾ ವ್ಯವಸ್ಥೆ, ಸಾಕಷ್ಟು ಪ್ರಮಾಣದಲ್ಲಿ ವೆಂಟಿಲೇಟರ್‌ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.

ಒಂದು ರಾಷ್ಟ್ರ, ಒಂದೇ ಚಿಕಿತ್ಸೆ:ದೇಶದಾದ್ಯಂತ ಕೋವಿಡ್-19ಗೆ ನೀಡುವ ಚಿಕಿತ್ಸೆ ಒಂದೇ ರೀತಿಯಲ್ಲಿ ಇರಬೇಕು ಎಂಬ ಉದ್ದೇಶದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ. ತೀವ್ರವಾದ ಉಸಿರಾಟದ ಕಾಯಿಲೆ ಮತ್ತು ಅತಿಯಾದ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆ ಮತ್ತು ಸುರಕ್ಷಿತೆಗಾಗಿ ಅನುಸರಿಸಬೇಕಾದ ಮಾರ್ಗಸೂಚಿಯನ್ನು ವೈದ್ಯರಿಗೆ ಇಲ್ಲಿ ನೀಡಲಾಗುತ್ತಿದೆ.

ತರಬೇತಿಯ ಮೊದಲ ದಿನ ಸುಮಾರು 100 ವೈದ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಆನ್‌ಲೈನ್‌ ಮೂಲಕ ಸುಮಾರು 300 ವೈದ್ಯರಿಗೆ ತರಬೇತಿ ನೀಡಲಾಯಿತು. ವಿವಿಧ ಕ್ಷೇತ್ರಗಳ ತಜ್ಞರೇ ಇದ್ದ ಕಾರಣ ಹಲವಾರು ಬಗೆಯ ಸಂಶಯ ನಿವಾರಿಸುವುದು ಸಾಧ್ಯವಾಯಿತು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ಸಚ್ಚಿದಾನಂದ, ರಾಜೀವ್ ಗಾಂಧಿ ಎದೆ ರೋಗ ಸಂಸ್ಥೆಯ ನಿರ್ದೇಶಕ ಡಾ.ನಾಗರಾಜ್, ಸೋಂಕು ನಿಯಂತ್ರಣ ತಜ್ಞರಾದ ಡಾ.ನೇಹಾ, ಡಾ.ಅರುಣಾ ರಮೇಶ್, ಮಾದರಿ ಸಂಗ್ರಹ ತಜ್ಞ ಡಾ.ವಿ.ರವಿ, ಕೋವಿಡ್‌–19 ತಜ್ಞ ಡಾ.ಶಿವಪ್ರಸಾದ್‌ ಇದ್ದರು.

ಏನೆಲ್ಲ ತರಬೇತಿ
ಕೊರೊನಾ ಸೋಂಕು ನಿರ್ವಹಣೆ, ರೋಗ ಪತ್ತೆ, ಆರೋಗ್ಯ ಸಂರಕ್ಷಣೆ, ಸೋಂಕು ನಿಯಂತ್ರಣ ಮತ್ತು ಸೋಂಕನ್ನು ತಡೆಯಲು ಎಲ್ಲಾ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳು ಈ ಶಿಷ್ಟಾಚಾರದಲ್ಲಿ ಒಳಗೊಂಡಿದ್ದು, ಅದನ್ನು ಎಳೆ ಎಳೆಯಾಗಿ ವಿವರಿಸಿ, ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.

ತ್ವರಿತ ಮಾಹಿತಿ ರವಾನೆ
ತರಬೇತಿ ಕಾರ್ಯಾಗಾರದ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಇವುಗಳು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ವೈದ್ಯರಿಗೆ, ದಾದಿಯರಿಗೆ ತರಬೇತಿ ಸಾಮಗ್ರಿಯಾಗಲಿವೆ.

1 ಲಕ್ಷ ವಿದ್ಯಾರ್ಥಿಗಳಿಗೆ ಸೂಚನೆ
ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ ಅವರು ವಿಶ್ವವಿದ್ಯಾಲಯಕ್ಕೆ ಒಳಪಟ್ಟ 300ಕ್ಕೂ ಅಧಿಕ ಕಾಲೇಜುಗಳ 1 ಲಕ್ಷ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿಡಿಯೊ ಸಂದೇಶ ಕಳುಹಿಸಿದ್ದು, ಕೊರೊನಾ ನಿಯಂತ್ರಣಕ್ಕಾಗಿ ಅಗತ್ಯ ಕರೆ ಬಂದಾಗ ವೈದ್ಯಕೀಯ ಸೇವೆಗೆ ಸಜ್ಜಾಗಿರುವಂತೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT