ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ ಆಗಲ | 36 ಸಾವಿರ ಸಾವು ಲೆಕ್ಕಕ್ಕೆ ಸಿಕ್ಕಿಲ್ಲ

11 ದೇಶಗಳ ಸಾವಿನ ಪ್ರಮಾಣ ವಿಶ್ಲೇಷಣೆ: ಪ್ರಶ್ನೆಯಾಗಿ ಉಳಿದ ಹೆಚ್ಚುವರಿ ಸಾವು
Last Updated 26 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಲೆಕ್ಕದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತಿವೆ. ಪಿಡುಗು ವ್ಯಾಪಿಸಿರುವ 11 ದೇಶಗಳಲ್ಲಿ ಕಳೆದ ತಿಂಗಳು ಸಂಭವಿಸಿದ ಸಾವಿನ ಪ್ರಮಾಣವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇದರನ್ವಯ ಸುಮಾರು 26 ಸಾವಿನ ಪ್ರಕರಣಗಳು ಸಂಶಯ ಮೂಡಿಸಿವೆ ಎಂದು ನ್ಯೂಯಾಕ್ಟ್ ಟೈಮ್ಸ್ ವರದಿ ಮಾಡಿದೆ. ಈ ವಿಶ್ಲೇಷಣೆಯು ಕೋವಿಡ್‌–19 ಬಿಕ್ಕಟ್ಟಿನ ಸ್ಪಷ್ಟ ಚಿತ್ರಣವನ್ನು ನೀಡಿದೆ

ಈ 11 ದೇಶಗಳಲ್ಲಿಕಳೆದ ವರ್ಷ ಇದೇ ಅವಧಿಯಲ್ಲಿ ಸಂಭವಿಸಿದ್ದ ಸಾಮಾನ್ಯ ಸಾವಿನ ಪ್ರಮಾಣದ ಜತೆ ಈ ವರ್ಷದ ಸಾವಿನ ಪ್ರಕರಣಗಳನ್ನು ಹೋಲಿಸಿ ನೋಡಲಾಗಿದೆ. ಕೋವಿಡ್ ಸೋಂಕಿನ ಕಾರಣಕ್ಕೆ ಈ ವರ್ಷ ಭಾರಿ ಪ್ರಮಾಣದ ಸಾವು ಸಂಭವಿಸಿರುವುದು ನಿಜ. ಆದರೆ ಆಯಾ ಸರ್ಕಾರಗಳು ನೀಡಿದ ಅಧಿಕೃತ ಕೊರೊನಾ ಸಾವಿನ ಸಂಖ್ಯೆಗೂ, ಆ ದೇಶಗಳಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆಗೂ ಗುರುತರವಾದ ವ್ಯತ್ಯಾಸ ಕಂಡುಬಂದಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ

ವರದಿಯ ಅಂಶಗಳು

* ವಿಶ್ಲೇಷಣೆ ನಡೆಸಿದ 11 ದೇಶಗಳಲ್ಲಿ ಕೋವಿಡ್‌ ಹಾಗೂ ಇತರೆ ಕಾಯಿಲೆಗಳೂ ಒಳಗೊಂಡಂತೆ ಮೃಪತಟ್ಟವರ ಒಟ್ಟು ಸಂಖ್ಯೆಯಲ್ಲಿ ಈ ವರ್ಷ ಭಾರಿ ಏರಿಕೆಯಾಗಿದೆ

*ಆಸ್ಪತ್ರೆಗಳಲ್ಲಿ ವರದಿಯಾಗುವ ಕೋವಿಡ್ ಸೋಂಕಿತರ ಸಾವಿನ ಲೆಕ್ಕವನ್ನು ಮಾತ್ರ ಆಯಾ ಸರ್ಕಾರಗಳು ಅಧಿಕೃತವಾಗಿ ಪ್ರಕಟಿಸುತ್ತಿವೆ

* ಒಟ್ಟು ಸಾವಿನ ಸಂಖ್ಯೆಯಲ್ಲಿ ಕೋವಿಡ್‌ನಿಂದ ಸಂಭವಿಸಿರುವ ಸಾವಿನ ಸಂಖ್ಯೆ ಕಳೆದರೆ ಉಳಿಯುವ ಸಾವಿನ ಪ್ರಕರಣಗಳು ಯಾವುವು ಎಂಬುದು ಪ್ರಶ್ನೆ

* ಸೋಂಕು ಪತ್ತೆ ಪರೀಕ್ಷೆಗೆ ಒಳಪಡದೇ ಮೃತಪಟ್ಟವರು, ಆಸ್ಪತ್ರೆ ಭರ್ತಿಯಾಗಿರುವ ಕಾರಣ ಚಿಕಿತ್ಸೆ ದೊರೆಯದೆ ಮೃತಪಟ್ಟವರು, ಮನೆಯಲ್ಲಿ ಮರಣ ಹೊಂದಿದವರು – ಈ ಹೆಚ್ಚುವರಿ ಸಾವಿನ ವರ್ಗದಲ್ಲಿ ಸೇರಿದ್ದಾರೆ

* ಕೋವಿಡ್ ತಪಾಸಣೆ ಅಥವಾ ಚಿಕಿತ್ಸೆ ಸಕಾಲದಲ್ಲಿ ದೊರೆಯದೆ ಈ ಹೆಚ್ಚುವರಿ ಸಾವುಗಳು ಸಂಭವಿಸಿರಬಹುದು ಎಂದು ವರದಿ ಶಂಕೆ ವ್ಯಕ್ತಪಡಿಸಿದೆ

* ಆಯಾ ದೇಶಗಳಲ್ಲಿ ಇದೇ ಅವಧಿಯಲ್ಲಿ ಚಾರಿತ್ರಿಕವಾಗಿ ಕಂಡ ಸಾವಿನ ಪ್ರಮಾಣದ ಜತೆ ತಾಳೆ ನೋಡಿದಾಗಲೂ, ಈ ಬಾರಿ ಹೆಚ್ಚುವರಿ ಸಾವು ಸಂಭವಿಸಿವೆ

* ಸೋಂಕು ತಪಾಸಣೆಗೆ ಇರುವ ಸೀಮಿತ ಸಾಧ್ಯತೆಗಳನ್ನು ಈ ಸಂಖ್ಯೆಗಳು ಪ್ರತಿಬಿಂಬಿಸುತ್ತವೆ.ಕೋವಿಡ್‌ ಸಾವಿನ ಸಂಖ್ಯೆ ಮುಚ್ಚಿಡುವ ಉದ್ದೇಶ ಮೇಲ್ನೋಟಕ್ಕೆ ಕಂಡುಬರುವುದಿಲ್ಲ

* ತಜ್ಞರ ಪ್ರಕಾರ, ಜಗತ್ತಿನಲ್ಲಿ ಸಾವಿನ ಚಿತ್ರಣ ಇನ್ನೂ ಕೆಟ್ಟದಾಗಿರುತ್ತಿತ್ತು. ಲಾಕ್‌ಡೌನ್, ಅಂತರ ಕಾಯ್ದುಕೊಳ್ಳುವಿಯಂತಹ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಪರಿಸ್ಥಿತಿ ಸುಧಾರಿಸಿದೆ

ಸಾಮಾನ್ಯಕ್ಕಿಂತ ಹೆಚ್ಚುವರಿ ಸಾವು ದಾಖಲು (ಬಾರ್ ಗ್ರಾಫ್)

ಪ್ರದೇಶ&ಅವಧಿ ಸಾವು ಅಧಿಕೃತ ಕೋವಿಡ್ ಸಾವು ವ್ಯತ್ಯಾಸ

ಸ್ಪೇನ್ (ಮಾ.9–ಏ.5) 19,700 12,401 7,300

ಫ್ರಾನ್ಸ್ (ಮಾ.9–ಏ.5) 14,500 8,059 6,500

ಇಂಗ್ಲೆಂಡ್&ವೇಲ್ಸ್ (ಮಾ.7–ಏ.10) 6,700 10,335 6,300

ನ್ಯೂಯಾರ್ಕ್ ನಗರ(ಮಾ.11–ಏ.18) 17,200 13,240 4,000

ನೆದರ್ಲೆಂಡ್ಸ್ (ಮಾ.9–ಏ.5) 4,000 2,166 1,900

ಇಸ್ತಾಂಬುಲ್(ಮಾ.9–ಏ.12) 2,100 1,006 1,100

ಜಕಾರ್ತಾ(ಮಾರ್ಚ್) 1,000 84 900

ಸ್ವಿಟ್ಜರ್ಲೆಂಡ್ (ಮಾ.9–ಏ.5) 1,000 712 300

ಎಲ್ಲಿ ಏನಾಗುತ್ತಿದೆ?

* ಇಂಡೊನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಕಳೆದ ತಿಂಗಳು ಕೋವಿಡ್‌ನಿಂದ ಸತ್ತವರು 84 ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಆದರೆಕಳೆದ ವರ್ಷದ ಸರಾಸರಿಗಿಂತ 1,000ಕ್ಕೂ ಹೆಚ್ಚು ಜನರು ಈ ಅವಧಿಯಲ್ಲಿ ಮೃತಪಟ್ಟಿದ್ದು, ಅವರನ್ನು ಸಂಸ್ಕಾರ ಮಾಡಲಾಗಿದೆ ಎಂದು ಉದ್ಯಾನ ಮತ್ತು ಸ್ಮಶಾನಗಳ ಇಲಾಖೆ ತಿಳಿಸಿದೆ

* ಹಲವು ಐರೋಪ್ಯ ದೇಶಗಳು ವಾರ್ಷಿಕ ಸರಾಸರಿ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ ಈ ಬಾರಿ ಶೇ 20ರಿಂದ 30ರಷ್ಟು ಹೆಚ್ಚು ಮರಣ ಪ್ರಮಾಣ ದಾಖಲಿಸಿರುವುದನ್ನು ಇತ್ತೀಚಿನ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ. ಇದರರ್ಥ ಹೆಚ್ಚುವರಿಯಾಗಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ

* ನ್ಯೂಯಾರ್ಕ್‌ನಲ್ಲಿ ಸಾವಿನ ಸಂಖ್ಯೆ ಸಾಮಾನ್ಯ ದರಕ್ಕಿಂತ 4 ಪಟ್ಟು, ಪ್ಯಾರಿಸ್‌ನಲ್ಲಿ 2 ಪಟ್ಟು ಹೆಚ್ಚಳವಾಗಿದೆ. ಆದರೆ ಕೊರೊನಾದಿಂದ ಆಸ್ಪತ್ರೆಯಲ್ಲಿ ಮೃತಪಟ್ಟವರ ದಾಖಲೆಯನ್ನು ಮಾತ್ರ ಬಹುತೇಕ ದೇಶಗಳು ನೀಡುತ್ತಿವೆ

ಪಕ್ಕಾ ಲೆಕ್ಕ ವಿಳಂಬ

*ಫ್ರಾನ್ಸ್, ಬೆಲ್ಜಿಯಂ ದೇಶಗಳು ಆಸ್ಪತ್ರೆಯ ಹೊರಗಡೆ ಅಂದರೆ ನರ್ಸಿಂಗ್ ಹೋಮ್, ವೃದ್ಧಾಶ್ರಮಗಳಲ್ಲಿ ಸಂಭವಿಸಿದ ಕೋವಿಡ್‌ ಸಾವಿನ ಲೆಕ್ಕ ಒಟ್ಟುಗೂಡಿಸುವ ಯತ್ನಕ್ಕೆ ಮುಂದಾಗಿವೆ

*ಬ್ರಿಟನ್‌ನಲ್ಲಿ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಸಂಸ್ಥೆಯು ಕೋವಿಡ್‌ ಅಂಕಿ–ಅಂಶಗಳನ್ನು ನಿತ್ಯ ನೀಡುತ್ತದೆ. ಆದರೆ ಕೋವಿಡ್‌ನಿಂದ ಮೃತಪಟ್ಟವರು ಎಂಬ ಪ್ರಮಾಣ ಪತ್ರ ಖಚಿತಪಡಿಸಿಕೊಂಡು ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಕಚೇರಿಯುದತ್ತಾಂಶ ತಯಾರಿಸುತ್ತಿದೆ. ಇದು ಅತ್ಯಂತ ನಿಖರ ದಾಖಲೆ. ಆದರೆ ಎರಡು ವಾರ ತಡವಾಗಿ ಇದು ಬಿಡುಗಡೆಯಾಗುತ್ತದೆ

*ಯುರೋಪಿನ ಅನೇಕ ದೇಶಗಳಲ್ಲಿ ಸಾವಿನ ಸಾಮಾನ್ಯ ಮಾದರಿಯಲ್ಲಿ ವ್ಯತ್ಯಾಸ ಇರುವುದು ದೃಢಪಟ್ಟಿದೆ ಎಂದು ಐರೋಪ್ಯ ಒಕ್ಕೂಟದ ಮರಣ ನಿಗಾ ಸಂಶೋಧನಾ ತಂಡ ಹೇಳಿದೆ. ಈ ಸಂಸ್ಥೆಯು 24 ಸದಸ್ಯ ದೇಶಗಳ ಸಾವಿನ ದಾಖಲೆಗಳನ್ನು ಪ್ರತೀ ವಾರ ಸಂಗ್ರಹಿಸುತ್ತಿದೆ

ಈಗ ಸಿಗುತ್ತಿರುವ ಲೆಕ್ಕ ಏನಿದ್ದರೂ ಒಟ್ಟಾರೆ ಕಡಿಮೆ. ಹಲವು ಪ್ರದೇಶಗಳಲ್ಲಿ ಪಿಡುಗು ದೀರ್ಘಕಾಲ ಬಾಧಿಸಲಿದೆ. ಸಾವಿನ ಪ್ರಕರಣಗಳು ತಡವಾಗಿ ನೋಂದಣಿಯಾಗಲಿವೆ. ಅದಕ್ಕಿನ್ನೂ ಸಾಕಷ್ಟು ಸಮಯವಿದೆ. ಈ ಬಳಿಕವಷ್ಟೇ ಸಾವಿನ ಪ್ರಮಾಣದ ಸ್ಪಷ್ಟ ಚಿತ್ರಣ ಸಿಗಲಿದೆ ಎಂದುಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಜನಸಂಖ್ಯಾ ಸಂಶೋಧನಾ ಸಂಸ್ಥೆಯ ತಜ್ಞಟಿಮ್ ರಿಫ್ಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT