ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಸೋಂಕಿನ ಭೀತಿ: ಬಾಗಲಕೋಟೆಯಲ್ಲಿ ಕೋಳಿಗಳ ಸಾಮೂಹಿಕ ಮಾರಣಹೋಮ ಆರಂಭ

ಜಿಲ್ಲೆಯ ಕುಕ್ಕುಟೋದ್ಯಮ ತತ್ತರ
Last Updated 15 ಮಾರ್ಚ್ 2020, 6:18 IST
ಅಕ್ಷರ ಗಾತ್ರ

ಬಾಗಲಕೋಟೆ: ಕೋವಿಡ್-19 ಸೋಂಕಿನ ಭೀತಿಯಿಂದ ಕುಕ್ಕಟ ಉದ್ಯಮ ತತ್ತರಿಸಿದ್ದು, ಬೆಲೆ ಕುಸಿತದಿಂದ ಬೇಸತ್ತ ಜಿಲ್ಲೆಯ ಫೌಲ್ಟ್ರಿ ಫಾರಂಗಳ ಮಾಲೀಕರು ಕೋಳಿಗಳ ಸಾಮೂಹಿಕ ಮಾರಣಹೋಮ ಆರಂಭಿಸಿದ್ದಾರೆ.

ಜಮಖಂಡಿ ಹಾಗೂ ಮುಧೋಳ ತಾಲ್ಲೂಕುಗಳಲ್ಲಿ ಕಳೆದೆರಡು ದಿನಗಳಿಂದ 30 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಗುಂಡಿ ತೆಗೆದು ಜೀವಂತವಾಗಿ ಹೂಳಲಾಗಿದೆ.

ಕೋಳಿ ಹಾಗೂ ಮೊಟ್ಟೆ ತಿಂದರೆ ಕೋವಿಡ್-19 ಸೋಂಕು ಬರುತ್ತದೆ ಎಂದು ಸಾಮಾಜಿಕ ಜಾಲ ತಾಣಗಳ ಮೂಲಕ ನಡೆಸಿದ ಅಪಪ್ರಚಾರದ ಪರಿಣಾಮ ಕೋಳಿ ಮಾಂಸ, ಮೊಟ್ಟೆ ಖರೀದಿಸಲು ಯಾರೂ ಮುಂದಾಗುತ್ತಿಲ್ಲ. ಉಚಿತವಾಗಿ ಕೊಡುವುದಾಗಿ ಹೇಳಿದರೂ ಒಲ್ಲೆ ಎನ್ನುತ್ತಿದ್ದಾರೆ. ನಷ್ಟದ ಪರಿಣಾಮ ಕೋಳಿಗಳಿಗೆ ಆಹಾರ ಕೊಡಲು (ಫೀಡ್) ಸಾಧ್ಯವಾಗದೇ ಜೀವಂತವಾಗಿ ಹೂಳುತ್ತಿದ್ದೇವೆ ಎಂದು ಜಮಖಂಡಿ ತಾಲ್ಲೂಕಿನ ಹುನ್ನೂರಿನ ಚನ್ಹಾಳ ಫೌಲ್ಟ್ರಿಫಾರಂ ಮಾಲೀಕ ಪ್ರಕಾಶ ಚನಾಳ ಹೇಳುತ್ತಾರೆ.

ಪಕ್ಕದ ತೊದಲಬಾಗಿಯ ನಬಿ ನದಾಫ 5 ಸಾವಿರ, ಕಡಪಟ್ಟಿ, ಹುನ್ನೂರಿನಲ್ಲಿ ತಲಾ 3 ಸಾವಿರ, ಮುಧೋಳ ತಾಲ್ಲೂಕಿನ ಮುಗಳಖೋಡದ ಶಿವಾನಂದ ಜನವಾಡ, ಕುಳಲಿಯ ಕಲ್ಮೇಶ ಮಳಲಿ, ತೆಗ್ಗಿಯ ಅಶೋಕ ಅವರ ಫಾರಂನ 20 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ನಾಶಪಡಿಸಲಾಗಿದೆ.

'2.2 ಕೆ.ಜಿ ತೂಕದ ಒಂದು ಕೋಳಿ ಬೆಳೆಸಲು ನಮಗೆ ₹140 ಖರ್ಚು ಬರುತ್ತದೆ. ಉಚಿತವಾಗಿ ಕೊಡುವುದಾಗಿ ಹೇಳಿದರು ಯಾರೂ ಒಯ್ಯುತ್ತಿಲ್ಲ. ಇಟ್ಟುಕೊಂಡು ಏನು ಮಾಡುವುದು. ಕೋಳಿ ಆಹಾರ ಒಂದು ಕಿಲೋಗೆ ₹30 ಇದೆ. ಒಂದು ಸಾವಿರ ಕೋಳಿ ಸಾಕಲು ₹30 ಸಾವಿರ ಖರ್ಚು ಮಾಡಬೇಕು. ನಿಗದಿತ ತೂಕಕ್ಕಿಂತ ಹೆಚ್ಚಾದರೆ ಅವು ತಿನ್ನಲು ಯೋಗ್ಯವಲ್ಲ. ಹೀಗಾಗಿ ಜೀವಂತವಾಗಿ ನಾಶಪಡಿಸುತ್ತಿದ್ದೇವೆ' ಎಂದು ಪ್ರಕಾಶ ಚನಾಳ 'ಪ್ರಜಾವಾಣಿ'ಗೆ ತಿಳಿಸಿದರು.

ನಾವು ಫೌಲ್ಟ್ರಿ ಮಾಲೀಕರು ಸೇರಿ, ಕೋಳಿ ಮಾಂಸ ಹಾಗೂ ಮೊಟ್ಟೆ ಸೇವನೆಯಿಂದ ಕೋವಿಡ್-19 ಬರುವುದಿಲ್ಲ ಎಂದು ವೈದ್ಯರು, ಕೃಷಿ ಅಧಿಕಾರಿಗಳಿಂದ ಹೇಳಿಸಿ ಅದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟೆವು. ಕರಪತ್ರ ಮಾಡಿಸಿ ಹಂಚಿದೆವು. ಅದರಿಂದಲೂ ಏನೂ ಉಪಯೋಗವಾಗಲಿಲ್ಲ. ಜನರ ಮನಸ್ಸಿನಲ್ಲಿ ತಪ್ಪು ಕಲ್ಪನೆ ಆಳವಾಗಿ ಬೇರುಬಿಟ್ಟಿದೆ ಎಂದು ಪ್ರಕಾಶ ಬೇಸರ ವ್ಯಕ್ತಪಡಿಸಿದರು.

***
ಕೋಳಿಗಳ ಸಾಮೂಹಿಕ ಮಾರಣಹೋಮ ಸಲ್ಲ. ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಜನಜಾಗೃತಿ ಅಭಿಯಾನ ಆರಂಭಿಸಲಾಗುವುದು.
-ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾಧಿಕಾರಿ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT