ಸೋಮವಾರ, ಜೂನ್ 1, 2020
27 °C
ಸರ್ಕಾರದ ಆದೇಶಕ್ಕೂ ಬೆಲೆ ನೀಡದೆ ಕ್ಲಿನಿಕ್‌ಗಳು ಬಂದ್‌

ಕೊರೊನಾ ಭೀತಿ: ಬೆಳಗಾವಿಯಲ್ಲಿ ಕರ್ತವ್ಯ ಪ್ರಜ್ಞೆ ಮರೆತ ಖಾಸಗಿ ವೈದ್ಯರು!

ಎಂ.ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೊರೊನಾ ವೈರಾಣು ಭೀತಿ ಹರಡುತ್ತಿರುವ ಆತಂಕದ ಪರಿಸ್ಥಿತಿಯಲ್ಲಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬಹುತೇಕ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳ ವೈದ್ಯರು ಮನೆಗಳಲ್ಲೇ ಉಳಿಯುವ ಮೂಲಕ ಕರ್ತವ್ಯ ಪ್ರಜ್ಞೆಯನ್ನು ಮರೆತಿರುವುದು ಅಚ್ಚರಿ ಮತ್ತು ಆತಂಕಕ್ಕೆ ಕಾರಣವಾಗಿದೆ.

ಲಾಕ್‌ಡೌನ್‌ನಿಂದಾಗಿ ಖಾಸಗಿ ಆಸ್ಪತ್ರೆಗಳನ್ನು ಅವರು ಬಂದ್ ಮಾಡಿದ್ದಾರೆ. ಹೊರ ರೋಗಿಗಳ ವಿಭಾಗವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಇದು, ಜನಸಾಮಾನ್ಯರಿಗೆ ಸಮರ್ಪಕವಾಗಿ ಆರೋಗ್ಯ ಸೇವೆ ಒದಗಿಸಬೇಕು ಎನ್ನುವ ಸರ್ಕಾರದ ಉದ್ದೇಶಕ್ಕೆ ತೊಡಕಾಗಿ ಪರಿಣಮಿಸಿದೆ. ಸರ್ಕಾರದ ಆದೇಶಕ್ಕೂ ಅವರು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಆರೋಗ್ಯ ಸೇವೆಯನ್ನು ‘ತುರ್ತು ಹಾಗೂ ಅವಶ್ಯ ಸೇವೆ’ ಎಂದು ಪರಿಗಣಿಸಲಾಗಿದೆ. ಆದರೆ, ಖಾಸಗಿಯವರು ಇದರಿಂದ ದೂರ ಉಳಿದಿರುವುದು ‘ಪ್ರಜಾವಾಣಿ’ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕಂಡುಬಂತು.

ಪ್ರತಿನಿಧಿ ಹಲವು ಕ್ಲಿನಿಕ್‌ಗಳಿಗೆ ಹೋದಾಗ ಬಾಗಿಲು ಹಾಕಿರುವುದು ಕಂಡುಬಂತು. ಕೆಲವು ವೈದ್ಯರಷ್ಟೇ ಸಂಜೆ ಅಥವಾ ಬೆಳಿಗ್ಗೆ ಕೆಲವೇ ಸಮಯ ಕ್ಲಿನಿಕ್‌ ತೆರೆಯುತ್ತಿದ್ದಾರೆ. ಬಹುತೇಕರು ಈ ಗೊಡವೆಗೆ ಹೋಗುತ್ತಿಲ್ಲ.

ಅನುಮಾನದಿಂದ ನೋಡುತ್ತಾರೆ: ಮನೆಗಳಲ್ಲಿ ಕ್ಲಿನಿಕ್‌ ಹೊಂದಿರುವ ಕೆಲವು ವೈದ್ಯರು, ಗೇಟ್‌ಗೆ ಬೀಗ ಹಾಕಿಕೊಂಡಿದ್ದಾರೆ. ವಿಚಾರಿಸಲು ಹೋದವರನ್ನು ಅನುಮಾನದಿಂದ ನೋಡುವುದು, ‘ನಮ್ಮಲ್ಲಿ ಚಿಕಿತ್ಸೆ ಬಂದ್ ಮಾಡಲಾಗಿದೆ. ಬೇಕಿದ್ದರೆ ಗುಳಿಗೆ ಕೊಡುತ್ತೇನೆ. ಮುಟ್ಟಿ ತಪಾಸಣೆ ಮಾಡುವುದಿಲ್ಲ’ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ, ಜ್ವರ, ತಲೆನೋವು, ಹೊಟ್ಟೆನೋವು, ರಕ್ತದೊತ್ತಡ, ಮಧುಮೇಹ, ಮತ್ತಿತರ ಸಾಮಾನ್ಯ ಸಮಸ್ಯೆಗಳಿಗೆ ಒಳಗಾದವರು ಆರೋಗ್ಯ ಸೇವೆಯಿಂದ ವಂಚಿತವಾಗುತ್ತಿದ್ದಾರೆ. ಮೆಡಿಕಲ್‌ ಸ್ಟೋರ್‌ಗಳಿಂದ ಮಾತ್ರೆ ತಂದು ನುಂಗಿ ಸ್ವಯಂ ಚಿಕಿತ್ಸೆಯ ದಾರಿ ಕಂಡುಕೊಳ್ಳುವ ಆತಂಕಕಾರಿ ಸ್ಥಿತಿಯಲ್ಲಿ ಅವರದಿದ್ದಾರೆ! ನಿಯಮಿತ ತಪಾಸಣೆಗಳನ್ನು ಬಹುತೇಕರು ಮುಂದೂಡುತ್ತಿದ್ದಾರೆ.

‘ಎಲ್ಲೆಲ್ಲೂ ಕೊರೊನಾ ವೈರಾಣು ಸೋಂಕು ಹರಡುವ ಭೀತಿ ಇದೆ. ಯಾರಿಗಾದರೂ ಆ ವೈರಾಣು ಬಂದಿದ್ದು, ಅದು ನಮಗೂ ಬಂದರೆ ಏನು ಮಾಡುವುದು, ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದೂ ಮುಖ್ಯವಲ್ಲವೇ? ಅಲ್ಲದೇ ಲಾಕ್‌ಡೌನ್‌ ಕೂಡ ಇರುವುದರಿಂದ ನಾವೂ ಕ್ಲಿನಿಕ್ ಬಂದ್ ಮಾಡಿದ್ದೇವೆ’ ಎಂದು ಖಾಸಗಿ ವೈದ್ಯರೊಬ್ಬರು ಪ್ರತಿಕ್ರಿಯಿಸಿದರು. ಹಾಗಾದರೆ, ರೋಗಿಗಳು ಏನು ಮಾಡಬೇಕು ಎಂಬ ‍ಪ್ರಶ್ನೆಗೆ, ‘ಸರ್ಕಾರಿ ಆಸ್ಪತ್ರೆಗಳಿಗೆ ಹೋಗಲಿ ಬಿಡಿ’ ಎಂಬ ಉತ್ತರ ನೀಡಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಒತ್ತಡ: ಖಾಸಗಿ ಆಸ್ಪತ್ರೆಗಳಲ್ಲಿ ಉಪಚಾರ ಸಿಗದಿರುವುದರಿಂದಾಗಿ, ಸರ್ಕಾರಿ ಆಸ್ಪತ್ರೆಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. ಇದರಿಂದಾಗಿ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಖಾಸಗಿಯವರು ಚಿಕಿತ್ಸೆ ನೀಡಲು ನಿರಾಕರಿಸುತ್ತಿರುವುದರಿಂದ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ನಗರವೊಂದರಲ್ಲೇ 6 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಇವರಿಗೆ ಸರ್ಕಾರಿ ಆಸ್ಪತ್ರೆ ಎಂದರೆ ಜಿಲ್ಲಾಸ್ಪತ್ರೆಯೊಂದೆ. ಇಲ್ಲಿಗೆ ನೆರೆಯ ಮಹಾರಾಷ್ಟ್ರದಿಂದಲೂ ರೋಗಿಗಳು ಬರುತ್ತಾರೆ. ಆಯಾ ಬಡಾವಣೆಗಳಲ್ಲಿರುವ ಖಾಸಗಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸಿದ್ದರೆ ಜಿಲ್ಲಾಸ್ಪತ್ರೆಯ ಮೇಲಿನ ಒತ್ತಡ ಕಡಿಮೆಯಾಗುತ್ತಿತ್ತು. ಆದರೆ, ಅವರು ಸಾಮಾಜಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದರಿಂದ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

‘ಖಾಸಗಿ ಆಸ್ಪತ್ರೆಗಳವರು ಕ್ಲಿನಿಕ್‌ಗಳನ್ನು ತೆರೆಯಬೇಕು’ ಎಂದು ಪ್ರಕಟಣೆ ನೀಡಿದ್ದ ಅಧಿಕಾರಿಗಳು, ವೈದ್ಯರ ವಿರುದ್ಧ ಕ್ರಮ ಕೈಗೊಂಡಿಲ್ಲ!

ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ ಹಾಗೂ ಡಿಎಚ್‌ಒ ಲಭ್ಯವಾಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು