ಶನಿವಾರ, ಜುಲೈ 31, 2021
27 °C
ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ಪ್ರಮುಖ ಕಾರಣ *ಕರ್ನಾಟಕ ಕೋವಿಡ್ ವಾರ್‌ ರೂಮ್ ವಿಶ್ಲೇಷಣೆ

ರಾಜ್ಯದ ಕೊರೊನಾ ಸೋಂಕಿತರಲ್ಲಿ ಶೇ 63 ರಷ್ಟು ಮಂದಿ ಪುರುಷರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Coronavirus

ಬೆಂಗಳೂರು: ರಾಜ್ಯದಲ್ಲಿ ವರದಿಯಾದ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಶೇ 63.4 ರಷ್ಟು ಮಂದಿ ಪುರುಷರಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಓಡಾಟ ಹಾಗೂ ವ್ಯಕ್ತಿಗಳ ಸಂಪರ್ಕವೇ ಇದಕ್ಕೆ ಕಾರಣ.

ಕರ್ನಾಟಕ ಕೋವಿಡ್ ವಾರ್‌ರೂಮ್ ಒಟ್ಟು ಪ್ರಕರಣಗಳನ್ನು ಆಧರಿಸಿ ಈ ವಿಶ್ಲೇಷಣೆ ಮಾಡಿದೆ. ರಾಜ್ಯದಲ್ಲಿ ‌ಎಲ್ಲ ವಯೋಮಾನದವರೂ ಕೋವಿಡ್ ಪೀಡಿತರಾಗುತ್ತಿದ್ದಾರೆ. ಕೆಲಸದ ನಿಮಿತ್ತ ದಿನದ ಬಹುತೇಕ ಸಮಯವನ್ನು ಹೊರಗಡೆ ಕಳೆಯುವುದರಿಂದ ಪುರುಷರು ಹೆಚ್ಚಾಗಿ ಸೋಂಕಿತರಾಗುತ್ತಿದ್ದಾರೆ ಎನ್ನುವುದು ತಜ್ಞರ ಅಭಿಮತ. 4,835 (ಜೂ.5) ಕೋವಿಡ್ ಪೀಡಿತರಲ್ಲಿ ಶೇ 36.6 ರಷ್ಟು ಮಂದಿ ಮಹಿಳೆಯರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಸೋಂಕಿತರ ಸಂಪರ್ಕದಿಂದಲೇ ರೋಗಿಗಳಾಗಿದ್ದಾರೆ. ಅದೇ ರೀತಿ, ಮನೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುವ ಮಕ್ಕಳು ಹಾಗೂ ವೃದ್ಧರಿಗೆ ಕೂಡ ಸೋಂಕು ಅಷ್ಟಾಗಿ ಬಾಧಿಸಿಲ್ಲ. ಸೋಂಕಿತರಲ್ಲಿ ಶೇ 5.76 ರಷ್ಟು ಮಂದಿ ಮಾತ್ರ ಹಿರಿಯ ನಾಗರಿಕರಾಗಿದ್ದಾರೆ. 10 ವರ್ಷದೊಳಗಿನ ಶೇ 8 ರಷ್ಟು ಮಕ್ಕಳಿಗೆ ಸೋಂಕು ತಗುಲಿದೆ.

ಇದನ್ನೂ ಓದಿ: 

ಕಳೆದ ಐದು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾದ ಪರಿಣಾಮ ಪಾಸಿಟಿವ್ ಪ್ರಕರಣಗಳ ಬೆಳವಣಿಗೆ ದರ ರಾಜ್ಯದಲ್ಲಿ ಶೇ 8.50ಕ್ಕೆ ಏರಿಕೆಯಾಗಿದೆ. ಈ ಪ್ರಮಾಣ ಉಡುಪಿಯಲ್ಲಿ ಅತೀ ಹೆಚ್ಚು (ಶೇ 32.60) ಇದೆ. ಕೊರೊನಾ ಸೋಂಕು ಕಾಣಿಸಿಕೊಂಡ ಪ್ರಾರಂಭಿಕ ದಿನಗಳಲ್ಲಿ ನೇರ ಸಂಪರ್ಕಿತರಿಗೆ ಮಾತ್ರ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಈಗ ಪರೋಕ್ಷ ಸಂಪರ್ಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ಮಂದಿ (467) ರೋಗಿಗಳ ನೇರ ಸಂ‍ಪರ್ಕದಿಂದಲೇ ಸೋಂಕಿತರಾಗಿದ್ದಾರೆ. 

ಮನೆಯೇ ಸುರಕ್ಷಿತ: ‘ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಮುಖಗವಸು ಧರಿಸುವ ಜತೆಗೆ ಸಾಕಷ್ಟು ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ನಮಗೆ ಅರಿವಿಲ್ಲದೆಯೇ ಸೋಂಕು ತಗಲುವ ಸಾಧ್ಯತೆಗಳಿವೆ. ಆಗಾಗ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಕೈಕುಲುಕುವುದು, ಮುಖದ ಸಮೀಪದಲ್ಲಿ ಮಾತನಾಡುವ ಅಭ್ಯಾಸಗಳನ್ನು ಬಿಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಮನೆಯೇ ಸುರಕ್ಷಿತ ಸ್ಥಳವಾಗಿದೆ. ಅನಗತ್ಯವಾಗಿ ಹೊರಗಡೆ ಹೋಗಬಾರದು’ ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ.ನಾಗರಾಜ್ ತಿಳಿಸಿದರು.  

‘ಪರಸ್ಪರ ಅಂತರ ಕಾಯ್ದುಕೊಂಡಲ್ಲಿ ಮಾತ್ರ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಕಚೇರಿ ಸೇರಿದಂತೆ ವಿವಿಧ ಸ್ಥಳಗಳಿಂದ ಮನೆಗೆ ಬಂದ ಬಳಿಕ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕುಟುಂಬದ ಸದ್ಯರಿಗೂ ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ. ಈಗಾಗಲೇ ಅಂತಹ ಹಲವು ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ’ ಎಂದು ಫೋರ್ಟಿಸ್ ಮಲಾರ್ ಆಸ್ಪತ್ರೆಯ ಆಂಟೋ ಸಹಾಯರಾಜ್ ಎಚ್ಚರಿಸಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು