ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌: ಕೇರಳ–ಕರ್ನಾಟಕ ಗಡಿಯಲ್ಲಿ ಹೈ ಅಲರ್ಟ್‌

ಬೆಂಗಳೂರಿನಲ್ಲಿಯೇ ಶಂಕಿತ ವ್ಯಕ್ತಿಗಳ ರಕ್ತ ಪರೀಕ್ಷೆ
Last Updated 3 ಫೆಬ್ರುವರಿ 2020, 9:23 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ–ಕೇರಳಗಡಿ ಜಿಲ್ಲೆಯಾದ ಕಾಸರಗೋಡಿನಲ್ಲೂ ಮಾರಕ ಕೊರೊನಾ ವೈರಸ್‌ ಸೋಂಕಿತರು ಪತ್ತೆಯಾಗಿದ್ದು, ಕೇರಳಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಕೊಡಗು, ಮಂಗಳೂರು, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳು ಕೇರಳದೊಂದಿಗೆ ಗಡಿ ಹಂಚಿಕೊಳ್ಳುತ್ತವೆ. ಸೋಂಕು ಶಂಕಿತರ ಚಲನವಲನಗಳ ಬಗ್ಗೆ ನಿಗವಹಿಸಲು ರಾಜ್ಯ ಸರ್ಕಾರ ಸೋಮವಾರ ಆದೇಶಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಪ್ರಕಟಣೆಯೊಂದನ್ನು ಹೊರಡಿಸಿದ್ದು, ‘ಗಡಿ ಜಿಲ್ಲೆಗಳಲ್ಲಿ ಯಾವುದಾದರು ಶಂಕಿತ ಪ್ರಕರಣಗಳು ಕಂಡುಬಂದರೆ ತಕ್ಷಣ ರಾಜ್ಯ ವಿಚಕ್ಷಣ ಘಟಕಕ್ಕೆ (ಎಸ್‌ಎಸ್‌ಯು) ವರದಿ ನೀಡಬೇಕು’ ಎಂದು ಅದರಲ್ಲಿ ತಿಳಿಸಿದೆ.

ನಗರದಲ್ಲಿಯೇ ಪರೀಕ್ಷೆ

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಹಾಗೂ ನಿಮ್ಹಾನ್ಸ್‌ ಬಳಿಯಿರುವ ಎನ್‌ಐವಿ ವೈದ್ಯಕೀಯ ಪ್ರಯೋಗಾಲಯದಲ್ಲಿ ಕೊರೊನಾ ವೈರಸ್ ಶಂಕಿತ ವ್ಯಕ್ತಿಗಳ ರಕ್ತ ಪರೀಕ್ಷೆ ಪ್ರಾರಂಭಿಸಲಾಗಿದೆ.

ಪುಣೆಯ ರಾಷ್ಟ್ರೀಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆಯಿಂದ(ಎನ್‌ಐವಿ) ಪರೀಕ್ಷಾ ವರದಿ ಬರುವುದು ವಿಳಂಬವಾಗುತ್ತಿರುವುದರಿಂದ ನಗರದಲ್ಲಿಯೇ ಪ್ರಯೋಗಾಲಯ ಪ್ರಾರಂಭಿಸಲಾಗಿದೆ. ಇದರಿಂದಾಗಿ ವರದಿಗಳು ಬೇಗ ಶಂಕಿತರ ಕೈ ಸೇರಲಿವೆ.

ಜ.21ರಿಂದ ಈವರೆಗೆ 84 ಶಂಕಿತರ ರಕ್ತದ ಮಾದರಿಯನ್ನು ಎನ್‌ಐವಿಗೆ ಕಳುಹಿಸಲಾಗಿತ್ತು. ಅದರಲ್ಲಿ 28 ಮಂದಿಗೆ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ. ಶನಿವಾರ ಮತ್ತು ಭಾನುವಾರ 43 ಶಂಕಿತರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಚೀನಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಲ್ಲಿಂದ ಬಂದವರು ಕೆಲವೊಂದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

‘ಮನೆಯಲ್ಲಿ 14 ದಿನಗಳು ಪ್ರತ್ಯೇಕವಾಗಿ ಮಲಗಬೇಕು. ಸೀನುವಾಗ ಮತ್ತು ಕೆಮ್ಮುವಾಗ ಮೂಗು ಹಾಗೂ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಕುಟುಂಬದ ಸದಸ್ಯರು ಹಾಗೂ ಹೊರಗಿನವರೊಂದಿಗೆ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಬೇಕು’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT