ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಲಾಕ್‌ಡೌನ್‌ನಿಂದ ತಾಯಿ ಸಾವು, ತಬ್ಬಲಿಯಾದ ಗಂಗಮ್ಮನ ಮಕ್ಕಳು

ಪ್ರಯಾಣದ ಪ್ರಯಾಸದಿಂದ ಅಸುನೀಗಿದ ಕಾರ್ಮಿಕ ಮಹಿಳೆ
Last Updated 9 ಏಪ್ರಿಲ್ 2020, 2:45 IST
ಅಕ್ಷರ ಗಾತ್ರ

ಸಿಂಧನೂರು: ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಹೋಗಿ ಲಾಕ್‌ಡೌನ್‌ ಕರಿನೆರಳಿನಿಂದ ಮೃತಪಟ್ಟಿರುವ ಗಂಗಮ್ಮನ ಇಬ್ಬರು ಮಕ್ಕಳು ತಬ್ಬಲಿಯಾಗಿ ಕಣ್ಣೀರು ಹಾಕುತ್ತಿದ್ದಾರೆ.

ನಿರಂತರ ಕೂಲಿ ಕೆಲಸವಿಲ್ಲದೆ ಉಪಜೀವನ ಸಾಗಿಸಲು ಸಂಕಷ್ಟ ಅನುಭವಿಸುತ್ತಿರುವ ತಂದೆ ಮಲ್ಲಿಕಾರ್ಜುನ ಇದ್ದರೂ, ಶಿಕ್ಷಣ ಕೊಡಿಸುವಷ್ಟು ಶಕ್ತಿಯಿಲ್ಲ. ಶಿಕ್ಷಣದಿಂದ ವಂಚಿತವಾದ ಬಾಲಕ ಮಲ್ಲಿಕಾರ್ಜುನ ಹೋಟೆಲ್‌ವೊಂದರಲ್ಲಿ ದುಡಿಯುತ್ತಿದ್ದ. ಗಂಗಮ್ಮ ತವರು ಮನೆ ಸಾಸಲಮರಿ ಗ್ರಾಮದ ಮನೆಯಲ್ಲಿ ಪುತ್ರಿಯನ್ನು ಬಿಟ್ಟಿದ್ದರು. ಮಕ್ಕಳ ಭವಿಷ್ಯಕ್ಕೆ ನೆರವಾಗಲು ಗುಳೆಹೋಗಿದ್ದ ಗಂಗಮ್ಮ ಈಗ ಮಕ್ಕಳ ಕಣ್ಮುಂದೆ ಇಲ್ಲ.

ಸಾಸಲಮರಿ ಗ್ರಾಮದ ಹುಲಗಯ್ಯ ಮತ್ತು ಯಂಕಮ್ಮಳ ಹಿರಿಯ ಪುತ್ರಿಯಾದ ಗಂಗಮ್ಮ ಅವರು ಚಿಕ್ಕಂದಿನಿಂದಲೂ ಬಡತನದಲ್ಲೇ ಬೆಳೆದವರು. ಕೂಲಿ ಕೆಲಸಕ್ಕೆ ಹೋಗದೆ ಊಟವಿಲ್ಲ ಎನ್ನುವ ಸ್ಥಿತಿ ಪತಿಯ ಮನೆಯಲ್ಲೂ. ಸಿಂಧನೂರಿನಲ್ಲಿ ಹೆಚ್ಚು ಕೂಲಿ ಸಿಗಲಿಲ್ಲವೆಂದು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ದುಡಿಯಲು ಹೋಗಿ ಈಗ ಪ್ರಾಣವನ್ನು ಬಿಡುವಂತಾಯಿತು. ಕೆಂಗೇರಿಯ ಗ್ಲೋಬಲ್ ವಿಲೇಜ್ ಅಪಾರ್ಟ್‍ಮೆಂಟ್‍ನ ಮಾಲೀಕರು ದುಡಿಸಿಕೊಂಡು ಕೂಲಿಯನ್ನು ಸಕಾಲಕ್ಕೆ ಕೊಡಲಿಲ್ಲ ಎಂದು ಆರೋಪಿಸಲಾಗಿದೆ.

ಕೂಲಿ ಹಣಕ್ಕಾಗಿ ಮಾರ್ಚ್ 31 ರವರೆಗೆ ಕಾದಿದ್ದ ಗಂಗಮ್ಮ, ಪಕ್ಕದ ಜನರ ಒತ್ತಾಯಕ್ಕೆ ಮಣಿದು ದುಡಿದ ಸಂಬಳವನ್ನು ಲೆಕ್ಕಿಸದೆ ಮಕ್ಕಳನ್ನು ಸೇರಿಕೊಳ್ಳುವ ಹಂಬಲದಿಂದ ಸಿಂಧನೂರಿಗೆ ಬರುವಾಗ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟರು.

‘ಅಪಾರ್ಟ್‍ಮೆಂಟ್ ಮಾಲೀಕರು ದುಡಿದ ಹಣ ಕೊಟ್ಟಿಲ್ಲ. ಮೂರು ದಿವಸ ಉಪವಾಸವಿದ್ದು ಕೃಶಳಾಗಿದ್ದ ಪತ್ನಿ ಗಂಗಮ್ಮ ಜೀವಕ್ಕೆ ಕೊರೊನಾ ಲಾಕ್‍ಡೌನ್ ಪರಿಸ್ಥಿತಿ ಶಾಪವಾಯಿತು’ ಎಂದು ಪತಿ ಮಲ್ಲಿಕಾರ್ಜುನ ಕೂಡಾ ಕಣ್ಣೀರು ಹಾಕುತ್ತಿದ್ದಾರೆ.

ಪರಿಹಾರ ಕೊಡಿ: ಕಟ್ಟಡ ಕಾರ್ಮಿಕರ ಯೋಗ್ಯಕ್ಷೇಮ ಯೋಜನೆಯಡಿ ಕಾರ್ಮಿಕ ಇಲಾಖೆಯಿಂದ ಗಂಗಮ್ಮನ ಕುಟುಂಬಕ್ಕೆ ನೆರವು ಕೊಡಬೇಕು. ಹಸಿವಿನಿಂದ ಮೃತಪಟ್ಟ ಗಂಗಮ್ಮನಿಗೆ ಸರ್ಕಾರವು ಪರಿಹಾರ ಘೋಷಿಸಬೇಕು ಎಂದು ಕಾರ್ಮಿಕರ ಪರ ಹೋರಾಡುವ ಸಂಘಟನೆಗಳು ಒತ್ತಾಯಿಸುತ್ತಿವೆ.

‘ಮೃತ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ಅವರ ಸಾವಿನ ಕುರಿತು ಇಲಾಖೆಯಿಂದ ಸಮಗ್ರ ವರದಿಯನ್ನು ಸಲ್ಲಿಸಲಾಗಿದೆ. ಈಗ ಅನಾಥ ಸ್ಥಿತಿಯಲ್ಲಿರುವ ಗಂಗಮ್ಮಳ ಮಕ್ಕಳಾದ ಮಂಜುನಾಥ ಮತ್ತು ಪ್ರೀತಿಗೆ ಇಲಾಖೆಯ ನೆರವು ದೊರೆಯುವ ಬಗ್ಗೆ ಉನ್ನತ ಅಧಿಕಾರಿಗಳು ನಿರ್ಧರಿಸಲಿದ್ದಾರೆ’ ಎನ್ನುತ್ತಾರೆ ಕಾರ್ಮಿಕ ನಿರೀಕ್ಷಕ ಶಿವಶಂಕರ ಬಿ.ಅವರು.

‘ಕೂಲಿ ಕಾರ್ಮಿಕನಾದ ಗಂಗಮ್ಮಳ ಪತಿಗೆ ಯಾವುದೇ ಆರ್ಥಿಕ ಸಂಪನ್ಮೂಲ ಇಲ್ಲ. ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ನಿರ್ವಹಣೆಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ದುಡಿಸಿಕೊಂಡು ಕೂಲಿ ಕೊಡದ ಗ್ಲೋಬಲ್ ವಿಲೇಜ್ ಅಪಾರ್ಟ್‍ಮೆಂಟ್ ಮಾಲೀಕನ ವಿರುದ್ದ ಕ್ರಮ ಜರುಗಿಸಬೇಕು’ ಎನ್ನುವುದು ಮನುಜಮತ ಬಳಗದ ಉಪಾಧ್ಯಕ್ಷರಾದ ಖಾದರ್‍ಸುಭಾನಿ, ವೆಂಕನಗೌಟ ಗದ್ರಟಗಿ, ಮತ್ತು ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ ಒತ್ತಾಯ.

‘ನನ್ನ ಜೀವನೋಪಾಯಕ್ಕೆ ದುಡಿದು ತಿನ್ನುತ್ತೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಕಾರ್ಮಿಕ ಇಲಾಖೆಯಿಂದ ಸಹಾಯ ಮಾಡಿದರೆ ಸಾಕು’ ಎನ್ನುವುದು ಮಲ್ಲಿಕಾರ್ಜುನ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT