ಸೋಮವಾರ, ಮಾರ್ಚ್ 8, 2021
19 °C

ಕ್ವಾರಂಟೈನ್‌ ಕೇಂದ್ರ: ಸಚಿವರ ಜೊತೆ ಸ್ಥಳೀಯರ ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ಮುಂಬೈನಿಂದ ಬಂದಿರುವ ವಲಸಿಗರನ್ನು ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡುವ ವಿಚಾರದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಸ್ಥಳೀಯರ ನಡುವೆ ಮಂಗಳವಾರ ಮಾತಿನ ಚಕಮಕಿ ನಡೆಯಿತು.

ಬೇರೆ ತಾಲ್ಲೂಕುಗಳ ಜನರನ್ನು ಪಟ್ಟಣದ ವಿವಿಧೆಡೆ ಕ್ವಾರಂಟೈನ್‌ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದ್ದ ಕಾರಣ ಗೊಂದಲಕ್ಕೆ ಕಾರಣವಾಗಿತ್ತು.

ತಾಲ್ಲೂಕಿನ ಕದಬಹಳ್ಳಿಯ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ, ಕೋಟೆ ಬೆಟ್ಟ, ಸೋಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಸ್ಥಳ ಪರಿಶೀಲನೆಗೆ ಬಂದ ಸಚಿವ ಕೆ.ಸಿ.ನಾರಾಯಣಗೌಡರ ಕಾರಿಗೆ ಜನರು ಮುತ್ತಿಗೆ ಹಾಕಿದರು. ಇಲ್ಲಿ ಕ್ವಾರಂಟೈನ್‌ ಮಾಡುವುದು ಬೇಡ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಚಿವರು ಹಾಗೂ ಜನರ ನಡುವೆ ವಾಗ್ವಾದ ನಡೆಯಿತು.

ತಾಳ್ಮೆ ಕಳೆದುಕೊಂಡ ಸಚಿವರು, ‘ಗೂಂಡಾಗಳ ರೀತಿಯಲ್ಲಿ ವರ್ತಿಸಬೇಡಿ, ಇಂತಹ ಗೊಡ್ಡು ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ನಾನು ಕೋವಿಡ್‌ ರೋಗಿಗಳನ್ನು ಹಾಸ್ಟೆಲ್‌ಗೆ ಕರೆದುಕೊಂಡು ಬಂದಿಲ್ಲ. ನಿಮಗೆ ನಾನು ಉತ್ತರ ನೀಡಬೇಕಾಗಿಲ್ಲ. ನಿಮ್ಮ ಶಾಸಕರು ಕೇಳುತ್ತಾರೆ ಬಿಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಂದ ಶಾಸಕ ಕೆ.ಸುರೇಶ್‌ಗೌಡ ‘ಬೇರೆ ತಾಲ್ಲೂಕುಗಳ ವಲಸಿಗರನ್ನು ತಂದು ಇಲ್ಲಿ ಹಾಕುವುದಕ್ಕೆ ನಾವು ಬಿಡುವುದಿಲ್ಲ, ಕ್ವಾರಂಟೈನ್‌ ಕೇಂದ್ರ ಮಾಡುವುದಿದ್ದರೆ ನಮ್ಮ ಹೆಣದ ಮೇಲೆ ಮಾಡಲಿ. ಬೇರೆ ವಲಸಿಗರು ನಮ್ಮ ತಾಲ್ಲೂಕಿಗೆ ಬರುವುದು ಬೇಡ’ ಎಂದರು.

‘ನಿಮ್ಮ ತಾಲ್ಲೂಕಿನ ಜನರನ್ನೇ ಕ್ವಾರಂಟೈನ್‌ ಮಾಡಲಾಗುತ್ತಿದೆ. ಇದಕ್ಕೆ ವಿರೋಧ ಏಕೆ’ ಎಂದು ಸಚಿವರು ಪ್ರಶ್ನಿಸಿದರು. ನಂತರ ಪರಿಸ್ಥಿತಿ ಶಾಂತವಾಯಿತು. ಅಧಿಕಾರಿಗಳು ಸಿದ್ಧತಾ ಕಾರ್ಯ ಮುಂದುವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು