ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್: ಹೋಂ ಕ್ವಾರಂಟೈನ್‌ನಲ್ಲಿರುವವರ ನಿಗಾಕ್ಕೆ ಬ್ಯಾಂಡ್

ಮೈಸೂರಿನ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅಭಿವೃದ್ಧಿಪಡಿಸಿದ ಸಾಧನ
Last Updated 5 ಏಪ್ರಿಲ್ 2020, 20:13 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ಸಂಕೊರೊನಾ ಸಂಬಂಧ ಹೋಂ ಕ್ವಾರಂಟೈನ್‌ನಲ್ಲಿ ಇರುವವರ ಮೇಲೆ ನಿಗಾ ಇಡಬಲ್ಲ ಬ್ಯಾಂಡ್‌ ಅನ್ನು (ಕೈಗೆ ಕಟ್ಟುವ ಸ್ಮಾರ್ಟ್‌ ಬ್ಯಾಂಡ್‌) ಮೈಸೂರಿನ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯೊಬ್ಬರು ಅಭಿವೃದ್ಧಿಪಡಿಸಿದ್ದಾರೆ.

ವಿದ್ಯಾವಿಕಾಸ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯ ಅಂತಿಮ ವರ್ಷದ ಎಲೆಕ್ಟ್ರಿಕ್‌ ಎಂಜಿನಿಯರಿಂಗ್ ವಿಭಾಗದ ಸ್ವಾತಿ ಹೆಗಡೆ ಈ ಬ್ಯಾಂಡ್‌ ಅಭಿವೃದ್ಧಿಪಡಿಸಿದ್ದಾರೆ. ಕೊರೊನಾ ಸೋಂಕಿನ ಪ್ರಾಥಮಿಕ ಲಕ್ಷಣಗಳನ್ನು ಕೂಡ ಈ ಬ್ಯಾಂಡ್‌ ಪತ್ತೆಹಚ್ಚುತ್ತದೆ ಎನ್ನುತ್ತಾರೆ ಅವರು.

ಮೈಕ್ರೋ ಎಲೆಕ್ಟ್ರೋಮೆಕ್ಯಾನಿಕಲ್‌ವ್ಯವಸ್ಥೆ ಬಳಸಿ ವಿನ್ಯಾಸ ಮಾಡಿರುವ ಬ್ಯಾಂಡ್‌ನಲ್ಲಿ ನ್ಯಾನೊಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ವ್ಯಕ್ತಿಯಲ್ಲಿ ಜ್ವರ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ನ್ಯಾನೊಸೆನ್ಸರ್‌ಗಳು ಅದನ್ನು ಪತ್ತೆಹಚ್ಚಿ ಕೆಂಪು ಬೆಳಕನ್ನು ಹೊರಸೂಸುತ್ತದೆ. ಮಾತ್ರವಲ್ಲ, ಕಂಟ್ರೋಲ್‌ ರೂಂ ಗೆ ಸಂದೇಶ ರವಾನಿಸುತ್ತದೆ. ಇದರಿಂದ ಆ ವ್ಯಕ್ತಿಯನ್ನು ಸುಲಭದಲ್ಲಿ ಕೊರೊನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಬಹುದು.

ಮನೆಯಿಂದ ಹೊರಬಂದರೆ ಪತ್ತೆ: ಕ್ವಾರಂಟೈನ್‌ನಲ್ಲಿರುವ ವ್ಯಕ್ತಿ ಮನೆ ಅಥವಾ ನಿರ್ದಿಷ್ಟ ಸ್ಥಳವನ್ನು ಬಿಟ್ಟು ಹೊರಬಂದರೆ ಬ್ಯಾಂಡ್‌ನಿಂದ ಸಂದೇಶ ರವಾನೆಯಾಗುತ್ತದೆ.

ನಿಗಾದಲ್ಲಿ ಇರಬೇಕಾದ ವ್ಯಕ್ತಿ ಮನೆಯಲ್ಲೇ ಇದ್ದಾನೆಯೇ ಎಂಬುದನ್ನು ಪರಿಶೀಲಿಸಿಲು ಪ್ರತಿದಿನವೂ ಅವರ ಮನೆಗೆ ತೆರಳುವ ಪ್ರಮೇಯ ಪೊಲೀಸರಿಗೆ ಎದುರಾಗದು. ಕಂಟ್ರೋಲ್ ರೂಂನಲ್ಲಿ ಕುಳಿತುಕೊಂಡೇ ಎಲ್ಲರ ಮೇಲೂ ನಿಗಾ ವಹಿಸಬಹುದು.

ಕಳೆದ 96 ಗಂಟೆಗಳಲ್ಲಿ ಆತ ಎಲ್ಲೆಲ್ಲಿ ಸುತ್ತಾಡಿದ್ದಾನೆ ಎಂಬ ಮಾಹಿತಿಯನ್ನು ಸಂಗ್ರಹಿಸಿಡುವ ವ್ಯವಸ್ಥೆಯೂ ಇದರಲ್ಲಿದೆ.

ಐಐಟಿ ಖರಗಪುರದ ಹಿರಿಯ ವಿದ್ಯಾರ್ಥಿ, ಎಂಜಿನಿಯರ್‌ ವಿನಾಯಕ ಭಟ್ ಮತ್ತು ವಿದ್ಯಾ ವಿಕಾಸ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕಿ ವರ್ಷಿತಾ ಅವರ ಮಾರ್ಗದರ್ಶನದಲ್ಲಿ ಸ್ವಾತಿ ಅವರು ಈ ಬ್ಯಾಂಡ್‌ ಅಭಿವೃದ್ಧಿಪಡಿಸಿದ್ದಾರೆ.

‘ಕೊರೊನಾ ತಡೆಗೆ ವಿನೂತನ ಯೋಜನೆಗಳಿದ್ದರೆ ತಿಳಿಸುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿತ್ತು. ಈ ಸಾಧನದ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಮೈಸೂರು ಜಿಲ್ಲಾಧಿಕಾರಿ ಕೂಡಾ ಪ್ರಾತ್ಯಕ್ಷಿಕೆ ನೀಡುವಂತೆ ಆಹ್ವಾನ ನೀಡಿದ್ದಾರೆ. ಒಂದು ಬ್ಯಾಂಡ್‌ಗೆ ₹300 ವೆಚ್ಚವಾಗಬಹುದು’ ಎಂದು ಸ್ವಾತಿ ತಿಳಿಸಿದರು.

‘ಕಿತ್ತು ತೆಗೆಯುವಂತಿಲ್ಲ’

ಈ ಬ್ಯಾಂಡ್‌ನಲ್ಲಿ ಲಾಕಿಂಗ್‌ ಸಿಸ್ಟಮ್‌ ಇದ್ದು, ಒಮ್ಮೆ ಧರಿಸಿದರೆ ತೆಗೆಯಲು ಆಗದು. ಪೊಲೀಸರು ಅಥವಾ ಸಂಬಂಧಪಟ್ಟ ಅಧಿಕಾರಿಗಳೇಅನ್‌ಲಾಕ್‌ ಮಾಡಿ ತೆಗೆಯಬೇಕು.ಇದರಲ್ಲಿ ‘ಟ್ಯಾಂಪರಿಂಗ್‌’ ಎಂಬ ಎಚ್ಚರಿಕೆಯ ಸಂದೇಶ ನೀಡುವವ್ಯವಸ್ಥೆ ಇದ್ದು, ಕಿತ್ತು ಬಿಸಾಕಿದರೆ ಕಂಟ್ರೋಲ್‌ ರೂಂಗೆ ಮಾಹಿತಿ ರವಾನೆಯಾಗುತ್ತದೆ.

**

ಈ ಬ್ಯಾಂಡ್‌ ಬ್ಲೂ ಟೂಥ್‌ 5 ಆಧರಿತ ಟ್ರ್ಯಾಕಿಂಗ್‌ ವ್ಯವಸ್ಥೆಯನ್ನು ಒಳಗೊಂಡಿದ್ದು, ವ್ಯಕ್ತಿಯ ಚಲನವಲನದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ.
-ವಿನಾಯಕ ಭಟ್, ಎಂಜಿನಿಯರ್

**
ಕೊರೊನಾ ತಡೆಗೆ ಸರ್ಕಾರಕ್ಕೆ ನೆರವಾಗುವ ಉದ್ದೇಶದಿಂದ ಬ್ಯಾಂಡ್‌ ಅಭಿವೃದ್ಧಿಪಡಿಸಿದ್ದೇನೆ. ಇದರ ತಯಾರಿಕೆಗೆ ಸರ್ಕಾರವೇ ಕ್ರಮ ವಹಿಸಿದರೆ ಒಳ್ಳೆಯದು.
-ಸ್ವಾತಿ ಹೆಗಡೆ, ಎಂಜಿನಿಯರಿಂಗ್‌ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT