ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಬಹುತೇಕ ಶಾಂತಿಯುತ ಮತದಾನ

ಶೇ 64.21ರಷ್ಟು ಮತದಾನ; ಮತಪೆಟ್ಟಿಗೆಯಲ್ಲಿ ಭದ್ರಗೊಂಡ ಮತಗಳು
Last Updated 13 ಮೇ 2018, 9:25 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಲಿಂಗಸುಗೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕಡದರಗಡ್ಡಿಯಲ್ಲಿ ಮತದಾನ ಬಹಿಷ್ಕರಿಸಿ ತಹಸೀಲ್ದಾರ್‌ರಿಗೆ ಘೇರಾವ್‌ ಹಾಕಿದ್ದ ಘಟನೆ ಹೊರತುಪಡಿಸಿ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಬಹುತೇಕ ಶಾಂತಿಯುತವಾಗಿ ಚುನಾವಣೆ ನಡೆದಿದ್ದು, ಶೇ 64.21 ಮತದಾನವಾಗಿದೆ.

ಮಾನ್ವಿಯಲ್ಲಿ ಶೇ 72 ಅತಿಹೆಚ್ಚು ಮತದಾನ ದಾಖಲಾಗಿದೆ. ಅತಿಕಡಿಮೆ ಮತದಾನವು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಾಗಿದೆ. ಮಾನ್ವಿ ತಾಲ್ಲೂಕಿನ ಜಕ್ಕಲದಿನ್ನಿ, ರಾಯಚೂರು ನಗರದ ಮಂಗಳವಾಪೇಟೆ ಮತಗಟ್ಟೆಗಳಲ್ಲಿ ಬೆಳಿಗ್ಗೆ ನಿಗದಿತ ವೇಳೆಗೆ ಮತದಾನ ಆರಂಭವಾಗಿರಲಿಲ್ಲ. ಅರ್ಧಗಂಟೆ ಬಳಿಕ ತಾಂತ್ರಿಕ ದೋಷ ಸರಿಪಡಿಸಿದ್ದರಿಂದ ಎಲ್ಲ ಕಡೆಗಳಲ್ಲೂ ಚುರುಕಿನಿಂದ ಮತದಾನ ನಡೆಯಿತು.

ಬೆಳಿಗ್ಗೆ 9 ಗಂಟೆಗೆ ಜಿಲ್ಲೆಯಲ್ಲಿ ಶೇ 10 ರಷ್ಟು ಮತದಾನವು ದಾಖಲಾಗಿತ್ತು. ಬೆಳಿಗ್ಗೆ 11 ಕ್ಕೆ ಶೇ 23ರಷ್ಟು, ಮಧ್ಯಾಹ್ನ 1 ಕ್ಕೆ ಶೇ 39 , ಮಧ್ಯಾಹ್ನ 3 ಕ್ಕೆ 49 ಹಾಗೂ ಸಂಜೆ 5 ಗಂಟೆಗೆ ಶೇ 59 ರಷ್ಟು ಮತದಾನ ದಾಖಲಾಗಿತ್ತು. ಎಲ್ಲ ಕಡೆಗಳಲ್ಲೂ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ವಯೋವೃದ್ಧರು, ಅಂಗವಿಕಲರು ನೇರವಾಗಿ ಮತಗಟ್ಟೆಯೊಳಗೆ ಹೋಗಿ ಮತ ಚಲಾಯಿಸುವುದಕ್ಕೆ ಅನುವು ಮಾಡುತ್ತಿರುವುದು ಕಂಡು ಬಂತು.

ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಬಹುತೇಕ ಮಧ್ಯಾಹ್ನದೊಳಗೆ ಮತ ಚಲಾಯಿಸಿದರು. ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ತಮ್ಮ ಪರವಾಗಿಯೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಕೊನೆಯ ದಿನ: ಮತದಾನದ ದಿನವಾದ ಶನಿವಾರಕ್ಕಿಂತ ಒಂದು ದಿನ ಮೊದಲು ಕ್ಷೇತ್ರದಾದ್ಯಂತ ಹೊಸ ಬೆಳವಣಿಗೆಗಳು ನಡೆದವು. ಅಕ್ರಮಗಳು ನಡೆಯದಂತೆ ಪೊಲೀಸರು ಸಾಕಷ್ಟು ಕಡೆಗಳಲ್ಲಿ ತಪಾಸಣೆ ಹಾಗೂ ನಿಗಾ ವಹಿಸಿದ್ದರು. ಆದರೆ, ಎಲ್ಲ ಕ್ಷೇತ್ರಗಳಲ್ಲೂ ಹಣ ಹಂಚಿಕೆಯ ಸುದ್ದಿಗಳು ಜನರ ಬಾಯಲ್ಲಿ ಸಾಮಾನ್ಯವಾಗಿ ಕೇಳಿಬಂದವು. ಮತದಾನದ ಮುನ್ನಾದಿನ ರಾತ್ರಿ ನಡೆದ ಬೆಳವಣಿಗೆ ಆಧರಿಸಿ ಪಕ್ಷದ ಗೆಲುವು, ಸೋಲು ಲೆಕ್ಕಾಚಾರದ ಮಾತುಗಳು ಮತದಾನ ದಿನದಂದು ಜೋರಾಗಿದ್ದವು.

ದೇವದುರ್ಗ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ನಾಯಕ, ಜೆಡಿಎಸ್‌ ಅಭ್ಯರ್ಥಿ ವೆಂಕಟೇಶ ಪೂಜಾರಿ ಹಾಗೂ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರು ತಾಲ್ಲೂಕಿನ ಅರಕೇರಾದಲ್ಲಿ ಮತ ಚಲಾಯಿಸಿದರು. ಮೂವರು ಅಭ್ಯರ್ಥಿಗಳು ಒಂದೇ ಗ್ರಾಮದವರು ಎನ್ನುವುದು ಗಮನಾರ್ಹ.

ಎಲ್ಲ ಮತಗಟ್ಟೆಗಳ ಎದುರು ಪೊಲೀಸರು ಸಾಕಷ್ಟು ಬಂದೋಬಸ್ತ್‌ ಏರ್ಪಡಿಸಿದ್ದರು. ತಾಂತ್ರಿಕ ದೋಷದಿಂದ ತಡವಾಗಿ ಮತದಾನ ಆರಂಭಿಸಿದ ಮತಗಟ್ಟೆಗಳಲ್ಲಿ ರಾತ್ರಿ 8 ಗಂಟೆಯಾದರೂ ಮತದಾನ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT