ಅಡ್ಡ ಮತದಾನದ ಭೀತಿಯಲ್ಲಿ ಮಿತ್ರಪಕ್ಷದ ನಾಯಕರು: ರಂಗೇರಿದ ಪರಿಷತ್‌ ‘ರಾಜಕೀಯ’

7
: ಲಾಭ ಪಡೆಯಲು ಬಿಜೆಪಿ ಸಜ್ಜು

ಅಡ್ಡ ಮತದಾನದ ಭೀತಿಯಲ್ಲಿ ಮಿತ್ರಪಕ್ಷದ ನಾಯಕರು: ರಂಗೇರಿದ ಪರಿಷತ್‌ ‘ರಾಜಕೀಯ’

Published:
Updated:

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಉಪ ಚುನಾವಣೆಯ ಅಖಾಡ ರಂಗೇರಿದ್ದು, ಈ ಚುನಾವಣೆ ಮೂರೂ ರಾಜಕೀಯ ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಿದೆ.

‘ರಹಸ್ಯ ಮತದಾನ’ ಪದ್ಧತಿಯಲ್ಲಿ ಚುನಾವಣೆ ನಡೆಯುವುದರಿಂದ ‘ಅಡ್ಡ ಮತದಾನ’ದ ಭೀತಿ ಮೂರೂ ಪಕ್ಷಗಳ ನಾಯಕರಿಗೆ ತಲೆ ನೋವು ತಂದಿದೆ. ಮೈತ್ರಿ ಸರ್ಕಾರದ ಎಲ್ಲ ಶಾಸಕರನ್ನು ಬುಟ್ಟಿಯಲ್ಲಿ ಇಟ್ಟುಕೊಳ್ಳುವುದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಸವಾಲಾಗಿದ್ದರೆ, ಅತೃಪ್ತ ಶಾಸಕರು ಅಡ್ಡ ಮತದಾನ ಮಾಡಿ ‘ಕಮಲ’ ಹಿಡಿಯಬಹುದು ಎಂಬ ವಿಶ್ವಾಸ ಬಿಜೆಪಿಗೆ ಇದೆ.

ಏಕಕಾಲದಲ್ಲಿ ನಡೆಯುತ್ತಿರುವ ಮೂರು ಸದಸ್ಯ ಸ್ಥಾನಗಳ ಚುನಾವಣೆಗೆ ಪ್ರತ್ಯೇಕ ಅಧಿಸೂಚನೆ ಹೊರಬಿದ್ದಿದೆ. ಹೀಗಾಗಿ, ಪ್ರಾಶಸ್ತ್ಯದ ಮತಕ್ಕೆ ಅವಕಾಶವಿಲ್ಲ. ಇದರ ಲಾಭ ಪಡೆಯುವ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ. ಸದಸ್ಯಬಲದ ಲೆಕ್ಕಾಚಾರದಲ್ಲಿ ಮೂರು ಸ್ಥಾನಗಳನ್ನೂ ಆಡಳಿತಾರೂಢ ಮಿತ್ರ ಪಕ್ಷಗಳು ದಕ್ಕಿಸಿಕೊಳ್ಳಬಹುದು. ಆದರೆ, ಮಿತ್ರಪಕ್ಷಗಳ ಎಂಟು ಶಾಸಕರು ಅಡ್ಡ ಮತದಾನ ಮಾಡಿದರೆ ಬಿಜೆಪಿ ಮೇಲುಗೈ ಸಾಧಿಸಬಹುದು. ಹೀಗಾದರೆ, ದೋಸ್ತಿ ಸರ್ಕಾರಕ್ಕೆ ಮುಖಭಂಗ ಖಚಿತ. ಈ ಬೆಳವಣಿಗೆ ನಡೆದರೆ, ರಾಜ್ಯ ರಾಜಕೀಯದಲ್ಲಿ ಬಿಜೆಪಿ ಉದ್ದೇಶಿಸಿರುವ ‘ಪಲ್ಲಟ’ಕ್ಕೆ ಇದು ದಾರಿ ಮಾಡಿಕೊಡುವ ಸಾಧ್ಯತೆಯೂ ಇದೆ.

ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನ. ಕಾಂಗ್ರೆಸ್‌ನಿಂದ ಇಬ್ಬರನ್ನು, ಜೆಡಿಎಸ್‌ನಿಂದ ಒಬ್ಬರನ್ನು ಕಣಕ್ಕಿಳಿಸಲು ಮೈತ್ರಿಕೂಟ ತೀರ್ಮಾನಿಸಿದೆ. ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಪ್ರಕಟಿಸಿದೆ. ಆದರೆ, ಜೆಡಿಎಸ್‌ ಹಾಗೂ ಬಿಜೆಪಿ ಭಾನುವಾರ ರಾತ್ರಿಯವರೆಗೂ ಅಭ್ಯರ್ಥಿಗಳ ಹೆಸರು ಪ್ರಕಟಿಸಿಲ್ಲ. ಪಕ್ಷದ ಹಿಂದುಳಿದ ವಿಭಾಗದ ಅಧ್ಯಕ್ಷ ಅಮರನಾಥ್‌ ಹಾಗೂ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌ ಅವರಿಗೆ ಅಫಿಡವಿಟ್‌ ಸಿದ್ಧಪಡಿಸಿಕೊಳ್ಳುವಂತೆ ಜೆಡಿಎಸ್ ವರಿಷ್ಠರು ಸೂಚಿಸಿದ್ದಾರೆ.

ಅಮರನಾಥ್ ಅವರ ಕಡೆಗೆ ವರಿಷ್ಠರು ಹೆಚ್ಚಿನ ಒಲವು ತೋರಿದ್ದಾರೆ. ಈ ಮೂಲಕ ಹಿಂದುಳಿದವರಿಗೆ ಮಣೆ ಹಾಕಲಾಗಿದೆ ಎಂದು ಬಿಂಬಿಸಿಕೊಳ್ಳುವುದು ತಂತ್ರ. ಸೋಮವಾರ 11 ಗಂಟೆಯ ವೇಳೆಗೆ ಅಭ್ಯರ್ಥಿ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ. ಬಿಜೆಪಿಯಿಂದ ಮಾಜಿ ಶಾಸಕರಾದ ಸಿ.‍ಪಿ.ಯೋಗೀಶ್ವರ, ಮಾಲೀಕಯ್ಯ ಗುತ್ತೇದಾರ, ಬಿ.ಜೆ.ಪುಟ್ಟಸ್ವಾಮಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತ.

ಸಂಪುಟದಲ್ಲಿ ಕಾಂಗ್ರೆಸ್‌ ಪಾಲಿನ ಆರು ಸಚಿವ ಸ್ಥಾನಗಳು ಖಾಲಿ ಇವೆ. ಆದರೆ 20ಕ್ಕೂ ಅಧಿಕ ಆಕಾಂಕ್ಷಿಗಳು ಇದ್ದಾರೆ. ಈಗಾಗಲೇ ಹಲವು ಆಕಾಂಕ್ಷಿಗಳು ಬಂಡಾಯದ ಬೆದರಿಕೆ ಒಡ್ಡಿದ್ದಾರೆ. ಅಕ್ಟೋಬರ್‌ 10ರೊಳಗೆ ಸಂಪುಟ ವಿಸ್ತರಣೆ ಮಾಡಲು ದೋಸ್ತಿ ಪಕ್ಷಗಳ ವರಿಷ್ಠರು ಚಿಂತನೆ ನಡೆಸಿದ್ದಾರೆ.

ಸಂಪುಟ ವಿಸ್ತರಣೆಗೆ ಮುನ್ನ ನಡೆಯುತ್ತಿರುವ ಈ ಚುನಾವಣೆಯ ಗೆಲುವು ಮಿತ್ರಪಕ್ಷಗಳ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ನಾಯಕರ ಇಕ್ಕಟ್ಟಿನ ಪರಿಸ್ಥಿತಿಯನ್ನು ಬಳಸಿಕೊಂಡು ಸಚಿವ ಸ್ಥಾನದ ವಾಗ್ದಾನ ಪಡೆಯುವುದು ಕಾಂಗ್ರೆಸ್ ಶಾಸಕರ ಅಪೇಕ್ಷೆ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !