ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಡಿವ ನೀರಿನ ಘಟಕ ಯೋಜನೆಯಲ್ಲಿ ಭ್ರಷ್ಟಾಚಾರ’

ಸದನ ಸಮಿತಿ ರಚನೆಗೆ ಆಗ್ರಹಿಸಿ ಪರಿಷತ್ತಿನಲ್ಲಿ ಬಿಜೆಪಿ ಧರಣಿ: ಮಧ್ಯಾಹ್ನಕ್ಕೆ ಕೊನೆಗೊಂಡ ಕಲಾಪ
Last Updated 12 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಶುದ್ಧ ಕುಡಿಯುವ ನೀರಿನ ಘಟಕಗಳ ಅನುಷ್ಠಾನದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಅದರ ತನಿಖೆಗೆ ಸದನ ಸಮಿತಿ ರಚಿಸಬೇಕು ಎಂದು ಬಿಜೆಪಿ ಸದಸ್ಯರು ಮಂಗಳವಾರ ವಿಧಾನಪರಿಷತ್ತಿನಲ್ಲಿ ಧರಣಿ ನಡೆಸಿದರು.

ಸರ್ಕಾರ ಸದನ ಸಮಿತಿ ರಚನೆಗೆ ಒಪ್ಪದ ಕಾರಣ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು. ಪ‍ರ–ವಿರೋಧವಾಗಿ ಗದ್ದಲ ಹೆಚ್ಚಾದಾಗ ವಿಧಾನಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.

ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ರಘುನಾಥರಾವ್‌ ಮಲ್ಕಾಪೂರೆ, ‘ಬೆಳಗಾವಿ ಅಧಿವೇಶನದಲ್ಲೂ ಪ್ರಸ್ತಾಪಿಸಲಾಗಿತ್ತು. ಇಲ್ಲಿಯವರೆಗೂ ಏನೂ ಆಗಿಲ್ಲ. ಸಾಕಷ್ಟು ಸಂಖ್ಯೆಯ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿವೆ’ ಎಂದು ಹೇಳಿದರು.

ಇದಕ್ಕೆ ಬೆಂಬಲ ನೀಡಿದ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಈ ಯೋಜನೆಯಲ್ಲಿ ನೂರಾರು ಕೋಟಿ ದುರುಪಯೋಗ ಆಗಿದೆ. ಕಳೆದ ಅಧಿವೇಶನದ ಸಂದರ್ಭದಲ್ಲಿ ಸದನ ಸಮಿತಿ ರಚಿಸಲು ಸಿದ್ಧ ಎಂದು ಸಚಿವರೇ ಭರವಸೆ ನೀಡಿದ್ದರು. ಕೂಡಲೇ ಸದನ ಸಮಿತಿ ರಚಿಸಿ ಎಂದು ಆಗ್ರಹಿಸಿದರು.

ಸದನ ಸಮಿತಿ ರಚನೆಗೆ ಒಪ್ಪದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ರಾಜ್ಯದಲ್ಲಿ 18,582 ಘಟಕಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಇದರಲ್ಲಿ 16,166 ಘಟಕಗಳು ಸ್ಥಾಪನೆ ಆಗಿವೆ. ಇನ್ನೂ 2000 ಅನುಷ್ಠಾನದ ವಿವಿಧ ಹಂತಗಳಲ್ಲಿ ಇವೆ. 588 ಘಟಕಗಳು ಕೆಟ್ಟು ನಿಂತಿವೆ ಎಂದು ಹೇಳಿದರು.

ಶುದ್ಧ ಕುಡಿಯುವ ನೀರಿನ ಘಟಕಗಳ ಅನುಷ್ಠಾನದಲ್ಲಿ ಲೋಪಗಳು ಆಗಿರುವುದು ನಿಜ. ಈ ಬಗ್ಗೆ ಕ್ಯಾಪ್ಟನ್‌ ರಾಜಾರಾವ್ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿದೆ. ರಾಜಾರಾವ್‌ ಅವರಿಗೆ ಆರೋಗ್ಯ ಸರಿಯಿಲ್ಲ. ಹೀಗಾಗಿ, ವರದಿ ಸಲ್ಲಿಸಲು ವಿಳಂಬ ಆಗಿದೆ. ಮಾರ್ಚ್‌ 15 ರೊಳಗೆ ವರದಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ. ವರದಿ ಬಂದ ಮೇಲೆ ಮುಂದೇನು ಮಾಡಬೇಕು ಎಂದು ತೀರ್ಮಾನಿಸಲಾಗುವುದು ಕೃಷ್ಣಬೈರೇಗೌಡ ತಿಳಿಸಿದರು.

ಮೊದಲ ಬಾರಿ ಕಲಾಪ ಮುಂದೂಡಿದಾಗ ಸಭಾಪತಿ ಕೊಠಡಿಯಲ್ಲಿ ಚಿವರು ಮತ್ತು ವಿರೋಧ ಪಕ್ಷದ ಸದಸ್ಯರ ಜತೆ ಸಂಧಾನದ ಚರ್ಚೆ ನಡೆಯಿತು. ರಾಜಾರಾವ್‌ ಸಮಿತಿ ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ಸಚಿವರು ವಿರೋಧ ಪಕ್ಷದವರಿಗೆ ಭರವಸೆ ನೀಡಿ ಮನವೊಲಿಸಿದ್ದರು. ಪುನಃ ಮಧ್ಯಾಹ್ನ 2 ಕ್ಕೆ ಕಲಾಪ ಆರಂಭವಾದಾಗ, ಚರ್ಚೆ ಹಳಿ ತಪ್ಪಿತು. ಸಚಿವ ಕೃಷ್ಣ ಬೈರೇಗೌಡ ಕೇಂದ್ರ ಸರ್ಕಾರ ಮೇಲೆ ವಾಗ್ದಾಳಿ ಆರಂಭಿಸಿದರು.

ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಮಾತಿನ ತಿರುಗೇಟು ನೀಡಲಾರಂಭಿಸಿದಾಗ ಗೊಂದಲ ನಿರ್ಮಾಣವಾಯಿತು. ಆಗ ಕಲಾಪವನ್ನು ಮುಂದೂಡಲಾಯಿತು.

ದ.ಕ, ಉಡುಪಿಯಲ್ಲಿ ವಿರೋಧ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆಗೆ ಕೆಲವು ಕಡೆಗಳಲ್ಲಿ ವಿರೋಧ ಇರುವುದರಿಂದ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ ಎಂದು ಸಚಿವ ಕೃಷ್ಣಬೈರೇಗೌಡ ಅಸಹಾಯಕತೆ ವ್ಯಕ್ತಪಡಿಸಿದರು.

ಈಗಾಗಲೇ ಕೆಟ್ಟು ಹೋಗಿರುವ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸಲಾಗಿದೆ. ಆದರೆ, ಪರ– ವಿರೋಧ ಚರ್ಚೆ ಇರುವುದರಿಂದ ಹೊಸ ಘಟಕಗಳನ್ನು ಅನುಷ್ಠಾನ ಮಾಡಿಲ್ಲ ಎಂದು ಕೃಷ್ಣಬೈರೇಗೌಡ ಅವರು, ಕಾಂಗ್ರೆಸ್‌ನ ಹರೀಶ್‌ ಕುಮಾರ್‌ ಪ್ರಶ್ನೆಗೆ ವಿವರ ನೀಡಿದರು.

* ಏನ್ರಿ ಅದು ಎಲ್ಲದಕ್ಕೂ ಧರಣಿ ಮಾಡ್ತೀರಿ, ಎಲ್ಲದರಲ್ಲೂ ರಾಜಕಾರಣ, ಬೇರೆ ಕೆಲಸ ಇಲ್ವಾ

-ಪ್ರತಾಪಚಂದ್ರ ಶೆಟ್ಟಿ, ಸಭಾಪತಿ

* ರಾಜ್ಯದ ಸಮಸ್ಯೆ ಬಗೆಹರಿಸಲು ಬಿಜೆಪಿ ಶಾಸಕರಿಗೆ ಆಸಕ್ತಿ ಮತ್ತು ಜವಾಬ್ದಾರಿ ಇಲ್ಲ

- ಕೃಷ್ಣ ಬೈರೇಗೌಡ , ಗ್ರಾಮೀಣಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT