ಹೊಸಪೇಟೆ: ಜೂನ್‌ನಲ್ಲಿ ಹುಲಿ, ಸಿಂಹ ಸಫಾರಿ ಶೀಘ್ರ ಆರಂಭ

ಶುಕ್ರವಾರ, ಮೇ 24, 2019
23 °C
ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಂದ ಇನ್ನೆರಡು ಹೊಸ ಅತಿಥಿಗಳು

ಹೊಸಪೇಟೆ: ಜೂನ್‌ನಲ್ಲಿ ಹುಲಿ, ಸಿಂಹ ಸಫಾರಿ ಶೀಘ್ರ ಆರಂಭ

Published:
Updated:
Prajavani

ಹೊಸಪೇಟೆ: ಇಲ್ಲಿನ ಬಿಳಿಕಲ್‌ ಸಂರಕ್ಷಿತ ಅರಣ್ಯ ಪ್ರದೇಶದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಹುಲಿ ಮತ್ತು ಸಿಂಹ ಸಫಾರಿಗೆ ಕೊನೆಯ ಹಂತದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಜೂನ್‌ ಮೊದಲ ವಾರದಲ್ಲಿ ಸಫಾರಿ ಆರಂಭಿಸಲು ನಿರ್ಧರಿಸಲಾಗಿದೆ.

ಬನ್ನೇರುಘಟ್ಟದಿಂದ ಮಂಗಳವಾರ ರಾತ್ರಿ ವಾಜಪೇಯಿ ಉದ್ಯಾನಕ್ಕೆ ಆರು ವರ್ಷ ವಯಸ್ಸಿನ ‘ಕೇಸರಿ’ ಹಾಗೂ ‘ಪ್ರೇಮಾ’ ಹೆಸರಿನ ಎರಡು ಸಿಂಹಗಳನ್ನು ತರಲಾಗಿದೆ. ಈ ವಾರದೊಳಗೆ ಇನ್ನೆರಡು ಸಿಂಹಗಳನ್ನು ತರಲು ಉದ್ದೇಶಿಸಲಾಗಿದೆ. 

ಎರಡು ತಿಂಗಳ ಹಿಂದೆ ಮೈಸೂರಿನ ಪ್ರಾಣಿ ಸಂಗ್ರಹಾಲಯದಿಂದ ಕ್ರಮವಾಗಿ ಏಳು ಮತ್ತು ಆರು ವರ್ಷದ ‘ರಮ್ಯಾ’ ಹಾಗೂ ‘ಪೃಥ್ವಿ’ ಹೆಸರಿನ ಹುಲಿಗಳನ್ನು ಜೈವಿಕ ಉದ್ಯಾನಕ್ಕೆ ತರಲಾಗಿತ್ತು. ಅದಾದ ಬಳಿಕ ಏಳು ವರ್ಷದ ‘ಚಾಮುಂಡಿ’, ಒಂಬತ್ತು ವರ್ಷದ ‘ಸಿಂಧೂ’ ಹೆಸರಿನ ಇನ್ನೆರಡು ಹುಲಿಗಳನ್ನು ತಂದು ಬಿಡಲಾಗಿದೆ. ಈಗಾಗಲೇ ನಾಲ್ಕೂ ಹುಲಿಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿವೆ.

ಹುಲಿಗಳಂತೆ ಸಿಂಹಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲಿ ಎಂಬ ಏಕೈಕ ಕಾರಣಕ್ಕೆ ಜೂನ್‌ನಲ್ಲಿ ಸಫಾರಿ ಆರಂಭಕ್ಕೆ ಮುಹೂರ್ತ ನಿಗದಿಗೊಳಿಸಲಾಗಿದೆ. ಒಬ್ಬರಿಗೆ ₹100 ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದೆ. ಎಂಟು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇದೆ.

ಒಂದೆಡೆ ಸಫಾರಿಗೆ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಚಿರತೆ, ಕರಡಿ, ನರಿ, ಹೈನಾಗಳನ್ನು ಇರಿಸಲು ಕಟ್ಟಡ, ಜಾಲರಿ ನಿರ್ಮಿಸುವ ಕೆಲಸ ಭರದಿಂದ ನಡೆಯುತ್ತಿದೆ. ಮುಂದಿನ ತಿಂಗಳು ಬಳ್ಳಾರಿ ಮೃಗಾಲಯದಿಂದ ಹತ್ತು ಚಿರತೆ, ನಾಲ್ಕು ಕರಡಿ, ನರಿ, ಹೈನಾ, ಕತ್ತೆಕಿರುಬಗಳನ್ನು ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ.

ವರ್ಷದ ಹಿಂದೆ ಕೃಷ್ಣಮೃಗ, ಜಿಂಕೆ ಹಾಗೂ ನೀಲ್‌ಗಾಯ್‌ಗಳನ್ನು ಉದ್ಯಾನಕ್ಕೆ ತಂದು ಬಿಡಲಾಗಿತ್ತು. ಅವುಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿವೆ. 149.50 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿರುವ ಜಾಗದಲ್ಲಿ ಉದ್ಯಾನ ನಿರ್ಮಾಣಕ್ಕೆ 2010ರಲ್ಲಿ ಚಾಲನೆ ಸಿಕ್ಕಿತ್ತು. ತಲಾ 35 ಹೆಕ್ಟೇರ್‌ ಪ್ರದೇಶವನ್ನು ಸಸ್ಯಾಹಾರಿ ಪ್ರಾಣಿಗಳು, ಹುಲಿ ಮತ್ತು ಸಿಂಹ ಸಫಾರಿಗೆ ಮೀಸಲಿಡಲಾಗಿದೆ. ಉದ್ಯಾನಕ್ಕೆ ಸೇರಿದ ಜಾಗದ ಸುತ್ತಲೂ ತಂತಿ ಬೇಲಿ, ಐದು ಕೆರೆಗಳ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ.

‘ಹುಲಿ, ಸಿಂಹಕ್ಕೆ ಹೇಳಿಮಾಡಿಸಿದ ಸ್ಥಳ’
‘ಬಳ್ಳಾರಿಯ ಶುಷ್ಕ ವಾತಾವರಣ ಹುಲಿ, ಸಿಂಹಗಳಿಗೆ ಹೇಳಿ ಮಾಡಿಸಿದ ಜಾಗ. ಹುಲಿಗಳು ಈಗಾಗಲೇ ಹೊಂದಿಕೊಂಡಿವೆ. ಮಂಗಳವಾರವಷ್ಟೇ ಸಿಂಹಗಳು ಬಂದಿದ್ದು, ಅವುಗಳು ಕೂಡ ಹೊಂದಿಕೊಳ್ಳುತ್ತವೆ’ ಎಂದು ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಪುರುಷೋತ್ತಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುಜರಾತಿನ ಗಿರ್‌ನಲ್ಲಿ 43ರಿಂದ 45 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನಲ್ಲಿ ಸಿಂಹಗಳು ಇರುತ್ತವೆ. ಬಳ್ಳಾರಿ ಜಿಲ್ಲೆಯಲ್ಲಿ ಏಪ್ರಿಲ್‌, ಮೇನಲ್ಲಿ 41ರಿಂದ 43 ಡಿಗ್ರಿ ಸೆಲ್ಸಿಯಸ್‌ ವರೆಗೆ ಬಿಸಿಲು ಇರುತ್ತದೆ. ಉಳಿದ ಅವಧಿಯಲ್ಲಿ 30 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಬಿಸಿಲಿರುತ್ತದೆ. ಹಾಗಾಗಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಕರಡಿ, ಚಿರತೆಗಳಂತೂ ಮೊದಲಿನಿಂದಲೂ ಇಲ್ಲಿನ ಪರಿಸರದಲ್ಲಿ ದೊಡ್ಡ ಸಂಖ್ಯೆಯಲ್ಲಿವೆ’ ಎಂದು ಮಾಹಿತಿ ನೀಡಿದರು. 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !