ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಡವರು ರೌಡಿಗಳ ಬಳಿ ನ್ಯಾಯ ಕೇಳುತ್ತಾರೆ !’

ನ್ಯಾಯಾಲಯಗಳಲ್ಲಿ ನ್ಯಾಯದಾನ ತಡ: ಎಚ್.ಕೆ.ಪಾಟೀಲ
Last Updated 4 ಮಾರ್ಚ್ 2020, 18:33 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾಯಾಲಯಗಳಲ್ಲಿ ನ್ಯಾಯದಾನ ತಡ ಆಗುತ್ತಿರುವುದರಿಂದ ರಾಜಕಾರಣಿಗಳು ಮತ್ತು ರೌಡಿಗಳ ಬಳಿ ಬಡವರು ನ್ಯಾಯ ಕೇಳಿಕೊಂಡು ಹೋಗುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಸದಸ್ಯ ಎಚ್‌.ಕೆ.ಪಾಟೀಲ ವಿಧಾನಸಭೆಯಲ್ಲಿ ಹೇಳಿದರು.

ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನ್ಯಾಯಾಲಯಗಳಲ್ಲಿ ಹಲವು ವರ್ಷಗಳು ಕಳೆದರೂ ನ್ಯಾಯ ಸಿಗುವುದಿಲ್ಲ. ರಾಜಕಾರಣಿಗಳು ಅಥವಾ ರೌಡಿಗಳ ಬಳಿ ಹೋದರೆ ಪ್ರಕರಣ ಬೇಗ ಇತ್ಯರ್ಥವಾಗುತ್ತದೆ ನಂಬಿಕೆ ಜನರಲ್ಲಿ ಬಂದಿದೆ’ ಎಂದರು.

‘ನ್ಯಾಯಾಂಗ ವ್ಯವಸ್ಥೆ ಹದಗೆಟ್ಟಿದೆ. ನ್ಯಾಯಾಧೀಶರ ಸಂಖ್ಯೆಯೂ ಕಡಿಮೆ. ಮೂಲ ಸೌಕರ್ಯಗಳೂ ಇಲ್ಲ. ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿರುವ ಪ್ರಕರಣಗಳನ್ನು ಬಿಟ್ಟು ಉಳಿದ ನ್ಯಾಯಾಲಯಗಳಲ್ಲಿ 2,76,74,499 ಪ್ರಕರಣಗಳು ವಿವಿಧ ಹಂತಗಳಲ್ಲಿ ಬಾಕಿ ಉಳಿದಿವೆ. ಹೆಚ್ಚಿನ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯೊಬ್ಬರು ಪ್ರಧಾನಿ ಮುಂದೆ ಕಣ್ಣೀರು ಹಾಕಿದರು’ ಎಂದು ಪಾಟೀಲ ಹೇಳಿದರು.

‘ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಶೇ 63 ರಷ್ಟು ಜನ ಲಂಚ ಕೊಟ್ಟೇ ಕೆಲಸ ಮಾಡಿಸಿಕೊಳ್ಳುವ ಸ್ಥಿತಿ ಇದೆ. ಈ ವ್ಯವಸ್ಥೆಗೆ ಕಡಿವಾಣ ಹಾಕಲು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಸಾಂವಿಧಾನಿಕ ಹುದ್ದೆಗಳಾದ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ’ ಎಂದರು.

‘ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ’
ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿಶೇ 10 ಮೀಸಲಾತಿ ನೀಡುವ ಸಂಬಂಧ ಹಿಂದಿನ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು. ಅದನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ನ ಆರ್‌.ವಿ.ದೇಶಪಾಂಡೆ ಮನವಿ ಮಾಡಿದರು.

‘ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಸಿಗಬೇಕು. ಆರ್ಥಿಕವಾಗಿ ದುರ್ಬಲನಾದವನು ಅವಕಾಶದಿಂದ ವಂಚಿತರಾದರೆ ಹೇಗೆ? ಹಲವು ರಾಜ್ಯಗಳಲ್ಲಿ ಮೀಸಲಾತಿ ಜಾರಿ ಮಾಡಲಾಗಿದೆ. ನಮ್ಮಲ್ಲೂ ಜಾರಿ ಆಗಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT