ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಿಗಳಿಗೆ ಬೆದರಿಕೆ ಒಡ್ಡಿದ ಆರೋಪ: ಎಫ್‌ಐಆರ್ ದಾಖಲಿಸಲು ಸೂಚನೆ

ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣ
Last Updated 8 ಏಪ್ರಿಲ್ 2019, 15:08 IST
ಅಕ್ಷರ ಗಾತ್ರ

ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಾಕ್ಷನಾಶ, ಸಾಕ್ಷಿಗಳಿಗೆ ಬೆದರಿಕೆ ಒಡ್ಡಿದ ಆರೋಪದಡಿ ಡಿವೈಎಸ್‌ಪಿಗಳಾದ ತುಳಜಪ್ಪ ಸುಲ್ಫಿ, ಬಿ.ಪಿ.ಚಂದ್ರಶೇಖರ ಮತ್ತು ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಎಫ್‌ಐಆರ್‌ ದಾಖಲಿಸಿ, ವಿಚಾರಣೆ ನಡೆಸುವಂತೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಸೂಚಿಸಿದೆ.

ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ವಿನಯ ಕುಲಕರ್ಣಿ ಮತ್ತು ಡಿವೈಎಸ್‌ಪಿಗಳಾದ ತುಳಜಪ್ಪ ಸುಲ್ಫಿ ಮತ್ತು ಬಿ.ಪಿ ಚಂದ್ರಶೇಖರ ಬೆದರಿಕೆ ಒಡ್ಡುತ್ತಿದ್ದಾರೆ. ಆರೋಪಿಗಳ ಪರ ಸಾಕ್ಷಿ ಹೇಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಯೋಗೀಶಗೌಡ ಗೌಡರ ಸಹೋದರ ಗುರುನಾಥಗೌಡ ಜಿಲ್ಲಾ ನ್ಯಾಯಾಲಯದಲ್ಲಿ ಐಪಿಸಿ ಕಲಂ 195 (ಎ) ಅಡಿ ಸಲ್ಲಿಸಿದ್ದ ಅರ್ಜಿ 2019 ರ ಜನವರಿ 9 ರಂದು ತಿರಸ್ಕೃತಗೊಂಡಿತ್ತು. ಇದನ್ನು ಪ್ರಶ್ನಿಸಿ ಗುರುನಾಥಗೌಡ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ಮಾರ್ಚ್‌ 1 ರಂದು ಮೇಲ್ಮನವಿ ಪುರಸ್ಕರಿಸಿದ್ದ ಹೈಕೋರ್ಟ್‌, ಅರ್ಜಿ ಪರಿಗಣಿಸಿ, ವಿಚಾರಣೆ ನಡೆಸುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿತ್ತು.

ಈ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಿಚಾರಣೆಗಾಗಿ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ವಿಜಯಲಕ್ಷ್ಮಿ ಘಾಣಾಪುರ, ‘ಆರೋಪ ಎದುರಿಸುತ್ತಿರುವ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿ, ವಿಚಾರಣೆ ನಡೆಸುವಂತೆ’ ಉಪನಗರ ಪೊಲೀಸರಿಗೆ ಸೂಚಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ವಿನಯ ಕುಲಕರ್ಣಿ, ‘ನ್ಯಾಯಾಲಯದ ಯಾವುದೇ ಆದೇಶಗಳಿಗೆ ತಲೆಭಾಗುತ್ತೇನೆ. ಆದರೆ ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧಿ ಇಲ್ಲದಿದ್ದರೂ, ಬಿಜೆಪಿ ಪಕ್ಷ ಹಾಗೂ ಪ್ರಹ್ಲಾದ ಜೋಶಿ ಅನಗತ್ಯವಾಗಿ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಸೇರಿಸಿದ್ದಾರೆ. ಚುನಾವಣೆ ಪೂರ್ವದಲ್ಲೇ ನನ್ನ ವಿರುದ್ಧ ಷಡ್ಯಂತ್ರವನ್ನು ಇವರು ಹೆಣೆಯುತ್ತಾರೆ ಎಂಬ ಸಂದೇಹವಿತ್ತು. ಅದು ನಿಜವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT