ಬುಧವಾರ, ಆಗಸ್ಟ್ 4, 2021
27 °C
388ಕ್ಕೇರಿದ ಸೋಂಕಿತರ ಸಂಖ್ಯೆ

ಕೋವಿಡ್-19ಗೆ ಬೆಳಗಾವಿಯಲ್ಲಿ ಮತ್ತಿಬ್ಬರು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೋವಿಡ್–19 ಸೋಂಕಿಗೆ ಜಿಲ್ಲೆಯ ಮತ್ತಿಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿದೆ.

ಜೂನ್‌ 30ರ ನಂತರ ಅಂದರೆ ಕೆಲವೇ ದಿನಗಳಲ್ಲಿ ಈ ಸೋಂಕಿನಿಂದಾಗಿ ಐವರು ಪ್ರಾಣ ಕಳೆದುಕೊಂಡಿರುವುದು ಜಿಲ್ಲೆಯ ಜನರಲ್ಲಿ ಅತಂಕ ಹೆಚ್ಚಳಕ್ಕೆ ಕಾರಣವಾಗಿದೆ.

ರಾಯಬಾಗ ತಾಲ್ಲೂಕಿನ ಕುಡಚಿಯ 70 ವರ್ಷದ ವ್ಯಕ್ತಿ ಶನಿವಾರ ಮಧ್ಯಾಹ್ನ ಇಲ್ಲಿನ ಬಿಮ್ಸ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳಿಂದ ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು, ಸಂಜೆ ಮೃತರಾಗಿದ್ದಾರೆ. ಇನ್ನೊಬ್ಬ ಮೃತರು ಇಲ್ಲಿನ ವೀರಭದ್ರ ನಗರ ಬಡಾವಣೆಯವರು. 48 ವರ್ಷದ ಅವರು ಉಸಿರಾಟದ ತೊಂದರೆಯಿಂದಾಗಿ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಸಂಜೆ ಮೃತಪಟ್ಟಿದ್ದಾರೆ. ಇಬ್ಬರ ಗಂಟಲು ದ್ರವದ ಮಾದರಿಯ ಪರೀಕ್ಷಾ ವರದಿಯೂ ರಾತ್ರಿ ಬಂದಿದೆ. ಅವರಿಗೆ ಕೋವಿಡ್–19 ಸೋಂಕು ಇದ್ದದ್ದು ದೃಢಪಟ್ಟಿದೆ ಎಂದು ಬಿಮ್ಸ್‌ ಮೂಲಗಳು ತಿಳಿಸಿವೆ.

‘ರಾತ್ರಿಯೇ ನಿಧನರಾದರೂ ಶವಗಳ ಅಂತ್ಯಕ್ರಿಯೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಿಲ್ಲ. ಬಿಮ್ಸ್‌ನಲ್ಲೇ ಇಟ್ಟುಕೊಳ್ಳಲಾಗಿತ್ತು’ ಎಂಬ ಆರೋಪ ಕೇಳಿಬಂದಿತ್ತು. ‘ಮಾರ್ಗಸೂಚಿಗಳ ಪ್ರಕಾರ ಶವಗಳನ್ನು ನೀಡಲಾಗಿದೆ. ಇದರಲ್ಲಿ ಲೋಪ ಉಂಟಾಗಿಲ್ಲ’ ಎಂದು ಬಿಮ್ಸ್‌ ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ಕೋವಿಡ್‌ನಿಂದ ಮೃತರಾದವರ ಅಂತ್ಯಸಂಸ್ಕಾರಕ್ಕಾಗಿ ಇಲ್ಲಿನ ಈದ್ಗಾ ಮೈದಾನದ ಬಳಿ ಪ್ರತ್ಯೇಕವಾಗಿ ಜಾಗ ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ತಹಶೀಲ್ದಾರ್‌ ಆರ್‌.ಕೆ. ಕುಲಕರ್ಣಿ, ಪಾಲಿಕೆ ಆರೋಗ್ಯಾಧಿಕಾರಿ ಬಸವರಾಜ ದಾಬಡೆ ಮೊದಲಾದವರು ಸ್ಥಳವ ಪರಿಶೀಲಿಸಿದರು. ಶನಿವಾರ ನಿಧನರಾದವರ ಅಂತ್ಯಸಂಸ್ಕಾರವನ್ನು ಭಾನುವಾರ ಈ ಜಾಗದಲ್ಲಿ ಮಾರ್ಗಸೂಚಿ ಪ್ರಕಾರ ನೆರವೇರಿಸಲಾಯಿತು.

ಉಳಿದಂತೆ ಮತ್ತೆ 9 ಮಂದಿಗೆ ಭಾನುವಾರ ಕೋವಿಡ್–19 ದೃಢಪಟ್ಟಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ. 52 ವರ್ಷದ ಮಹಿಳೆ ಅಥಣಿಯವರು. 15 ವರ್ಷದ ಬಾಲಕಿ, 44 ವರ್ಷದ ವ್ಯಕ್ತಿ ಹಾಗೂ 35 ವರ್ಷದ ಮಹಿಳೆ ಅಥಣಿ ತಾಲ್ಲೂಕಿನ ಅನಂತಪುರದವರು. 42 ವರ್ಷದ ವ್ಯಕ್ತಿ ಅಥಣಿಯ ವಿಕ್ರಮಪುರದವರು. ಉಳಿದವರಲ್ಲಿ ಮೂವರು ನಗರದ ಅನಗೋಳ, ಹನುಮಾನ್ ನಗರ ಹಾಗೂ ಸುಭಾಷ್ ನಗರದವರು. ಇನ್ನೊಬ್ಬರು ಸವದತ್ತಿ ತಾಲ್ಲೂಕಿನ ಉರಗೋಳದವರು (48 ವರ್ಷದ ಮಹಿಳೆ). ಎಲ್ಲರನ್ನೂ ಚಿಕಿತ್ಸೆಗಾಗಿ ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು