ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಸಿಎಂ ಪರಿಹಾರ ನಿಧಿಗೆ ಕೆಎಂಎಫ್‌ನಿಂದ 5 ಕೋಟಿ ನೆರವು 

Last Updated 8 ಏಪ್ರಿಲ್ 2020, 15:40 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್- 19 ಸೋಂಕು ನಿವಾರಣೆಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ವತಿಯಿಂದ ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಜಂಟಿಯಾಗಿ ₹5 ಕೋಟಿ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊರೊನಾದಿಂದ ನರಳುತ್ತಿರುವವರಿಗೆ ಹಾಗೂ ಇತರರಿಗೆ ಸಹಾಯವಾಗಲು ಮುಖ್ಯಮಂತ್ರಿಗಳ ನಿಧಿಗೆ ಹಲವಾರು ಸಂಘ ಸಂಸ್ಥೆಗಳು ನೆರವಾಗಿವೆ. ಅದರಂತೆ ರಾಜ್ಯದ ಹಲವಾರು ಸಂಕಷ್ಟ ಸಂದರ್ಭಗಳಲ್ಲಿ ಕೆಎಂಎಫ್ ಕೂಡ ನೆರವಾಗಿದೆ. ಅದರಂತೆ ಸರ್ಕಾರ ಎದುರಿಸುತ್ತಿರುವ ಇಂತಹ ಕ್ಲಿಷ್ಟಕರ ಹೋರಾಟಕ್ಕೆ ನೆರವಾಗಲೆಂದು ಕೆಎಂಎಫ್ ದೇಣಿಗೆ ನೀಡಿದೆ ಎಂದು ಹೇಳಿದರು.

ಕೊರೊನಾದಂತಹ ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಕೆಎಂಎಫ್ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಮಾತ್ರವಲ್ಲ, ತುರ್ತು ಅಗತ್ಯ ಸೇವೆ ಎಂದು ಪರಿಗಣಿಸಿರುವುದರಿಂದ ಸಿಬ್ಬಂದಿ ಕೂಡ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದು, ಸರಕಾರದ ಕೊರೊನಾ ವಿರುದ್ಧದ ಹೋರಾಟದಲ್ಲಿ ಪರೋಕ್ಷವಾಗಿ ನೆರವಾಗಿದೆ ಎಂದೂ ಅವರು ಹೇಳಿದ್ದಾರೆ.
ಗ್ರಾಹಕರಿಗೆ ಹಾಲಿನ ಉತ್ಪನ್ನಗಳನ್ನು ನಿರಂತರವಾಗಿ ಪೂರೈಸಲು ಮತ್ತು ರೈತರಿಗೆ ಪಶು ಆಹಾರ ಪೂರೈಕೆ ಮಾಡಲು ಕೆಎಂಎಫ್ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಪ್ರತಿನಿತ್ಯ 14 ಒಕ್ಕೂಟಗಳಿಂದ ಸರಾಸರಿ 70 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿದ್ದು, ದಕ್ಷಿಣ ಭಾರತದಲ್ಲಿಯೇ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ವಿಚಾರ.

ಇದರ ಜತೆಗೆ ಗ್ರಾಹಕರಿಗೆ ಹಾಲನ್ನು ಕೊರೊನಾ ವ್ಯಾಪಕತೆಯ ಇಂದಿನ ಸಂದರ್ಭದಲ್ಲಿ ಕೆಎಂಎಫ್‌ನ ಪ್ರತಿಯೊಬ್ಬ ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಅದರಂತೆ ಡೇರಿಯ ಪ್ರತಿಯೊಬ್ಬ ಸಿಬ್ಬಂದಿ ಮತ್ತು ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಸ್ವೀಕರಣೆ, ಸಂಸ್ಕರಣೆ, ಪ್ಯಾಕಿಂಗ್ ವೇಳೆ ಗ್ಲೌಸ್ ಮತ್ತು ಮಾಸ್ಕ್ ಧರಿಸಿ ಕೆಲಸ ನಿರ್ವಹಿಸಲಾಗುತ್ತಿದೆ. ಅದರಂತೆ ಹಾಲನ್ನು ಪೂರೈಸುವ ಮತ್ತು ಪಶು ಆಹಾರ ಸಾಗಾಣಿಕೆ ಮಾಡುವ ವಾಹನಗಳ ಚಾಲಕರು ಕೂಡ ಸುರಕ್ಷಾ ಸಾಧನಗಳನ್ನು ಅಳವಡಿಸಿಕೊಂಡು ನಿತ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಕೊರೊನಾದಂತಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೆಎಂಎಫ್ ಪ್ರತಿದಿನ ₹ 500 ಪ್ರೋತ್ಸಾಹಧನ ನೀಡುತ್ತಿದೆ.

ಲಾಕ್‌ಡೌನ್ ಆಗಿರುವ ಇಂತಹ ಸಂದರ್ಭದಲ್ಲಿ ರೈತರು ಅಪಾರ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಅವರು ನಂಬಿರುವ ಹೈನೋದ್ಯಮ ಕೈಬಿಡಬಾರದು ಎಂಬ ಕಾರಣಕ್ಕೆ ಪ್ರತಿನಿತ್ಯ 2 ಬಾರಿ ಹಾಲು ಸಂಗ್ರಹಿಸಲಾಗುತ್ತಿದೆ. ಜತೆಗೆ ಪಶು ಆಹಾರ ಮಾರಾಟ ದರಕ್ಕೆ ಪ್ರತಿ ಟನ್ನಿಗೆ ನೀಡುತ್ತಿರುವ ₹500 ರಿಯಾಯಿತಿಯನ್ನು ಏಪ್ರಿಲ್‌ವರೆಗೂ ಮುಂದುವರಿಸಲಾಗಿದೆ.

ಅದರಂತೆ ಪ್ರಸ್ತುತ ಕೆಎಂಎಫ್ ಹಾಲು, ಮೊಸರು, ಟೆಟ್ರಾ/ಪ್ಲೆಕ್ಸಿ ಪ್ಯಾಕ್ ರೂಪದಲ್ಲಿ ಒಟ್ಟು 43.5 ಲಕ್ಷ ಲೀಟರ್ ಮಾರುತ್ತಿದೆ. ಅಲ್ಲದೆ 19 ಲಕ್ಷ ಲೀ. ಹಾಲನ್ನು ಉಪಯೋಗಿಸಿ 170 ಮೆ.ಟನ್ ಹಾಲಿನ ಪುಡಿಯನ್ನು ತಯಾರಿಸುತ್ತಿದೆ. ಅದರಂತೆ ಇತ್ತೀಚೆಗೆ ರಾಮನಗರದಲ್ಲಿ 100 ಮೆ. ಟನ್ ಸಾಮರ್ಥ್ಯದ ನಂದಿನಿ ಮೆಗಾ ಹೈಟೆಕ್ ಪೌಡರ್ ಪ್ಲಾಂಟ್ ಸ್ಥಾಪಿಸಲಾಗಿದೆ. ಇದರ ಕಾರ್ಯಾರಂಭ ತಾಂತ್ರಿಕ ತೊಂದರೆ ಮತ್ತು ಲಾಕ್.ಡೌನ್ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಆದಾಗ್ಯೂ ಸಿಬ್ಬಂದಿಯನ್ನು ಬಳಸಿಕೊಂಡು ಪ್ರತಿನಿತ್ಯ 2 ಲಕ್ಷ ಲೀಟರ್ ಹಾಲನ್ನು ಪುಡಿಯಾಗಿ ಪರಿವರ್ತಿಸಲಾಗುತ್ತಿದೆ.

ಪ್ರಸ್ತುತ 70 ಲಕ್ಷ ಲೀ. ಹಾಲನ್ನು ಸಂಗ್ರಹಿಸಿ 8 ಲಕ್ಷ ಲೀ. ಹಾಲು ಉಳಿಯುತ್ತಿತ್ತು. ಉಳಿಯುವ ಈ ಹಾಲನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎಲ್ಲ ಒಕ್ಕೂಟಗಳ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ಕೊಳೆಗೇರಿಗಳು, ಅಧಿಸೂಚಿತವಲ್ಲದ ಗುರುತಿಸಲ್ಪಟ್ಟ ಕೊಳೆಗೇರಿಗಳು, ಕಟ್ಟಡ ಕಾರ್ಮಿಕರ ವಸತಿ ತಾಣಗಳು, ವಲಸಿಗ ಕಾರ್ಮಿಕರಿಗಾಗಿ ಸರ್ಕಾರದ ವತಿಯಿಂದ ಪ್ರಾರಂಭವಾಗಿರುವ ತಾತ್ಕಾಲಿಕ ಪುನರ್ವಸತಿ ಶಿಬಿರಗಳಲ್ಲಿರುವ ಪ್ರತಿ ಕುಟುಂಬಕ್ಕೆ 1 ಲೀಟರ್ ಹಾಲನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಈ ಮೂಲಕ ರಾಜ್ಯದ ಹಾಲು ಉತ್ಪಾದಕರಿಗೆ ನೆರವು ನೀಡಲಾಗುತ್ತಿದೆ.

ದೇಣಿಗೆ ವಿತರಣೆ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್, ಕೆಎಂಎಫ್ ಮಾರುಕಟ್ಟೆ ವಿಭಾಗದ ನಿರ್ದೇಶಕ ಎಂ.ಟಿ.ಕುಲಕರ್ಣಿ, ಹಣಕಾಸು ವಿಭಾಗದ ನಿರ್ದೇಶಕ ರಮೇಶ ಕೊಣ್ಣೂರ, ಮದರ್ ಡೇರಿ ನಿರ್ದೇಶಕ ಡಾ.ಸತ್ಯನಾರಾಯಣ, ಆಡಳಿತ ವಿಭಾಗದ ನಿರ್ದೇಶಕ ರಮೇಶ್ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT