ಶನಿವಾರ, ಜುಲೈ 24, 2021
22 °C
ಕ್ವಾರಂಟೈನ್‌ ಕಥೆಗಳು

ಕೋವಿಡ್–19 | ಕಾಡೀತೇ ಮುಂಬೈ ಮೋಹ

ಯೋಗೇಶ್‌ ಎಂ.ಎನ್‌., ಬಾಲಚಂದ್ರ ಎಚ್‌., ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ/ಉಡುಪಿ/ಚಿಕ್ಕಬಳ್ಳಾಪುರ: ಮುಂಬೈ ಎಂದರೆ ಸಾಕು, ಬೆಚ್ಚಿಬೀಳುವವರೂ ಉಂಟು; ನಾವು ಮತ್ತೆ ಅಲ್ಲಿಗೆ ಹೋಗಲು ರೆಡಿ ಎಂದು ಕಣ್ಣು ಮಿಟುಕಿಸುವವರೂ ಉಂಟು. ಅರಬ್ಬಿ ಸಮುದ್ರ ತೀರದ ಆ ಮಾಯಾನಗರಿಯಿಂದ ಬಂದು, ರಾಜ್ಯದ ನಾನಾ ಕೇಂದ್ರಗಳಲ್ಲಿ ಕ್ವಾರಂಟೈನ್‌ ಪೂರೈಸಿದವರನ್ನು ಮಾತಿಗೆಳೆದರೆ ಅವರಿಂದ ಸಿಗುವ ಅನುಭವದ ಕಥೆಗಳು ನೂರೆಂಟು.

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕಿನ ‘ಮುಂಬೈ ನಂಟು’ ಎಲ್ಲರಿಗೂ ಗೊತ್ತಿರುವಂಥದ್ದೇ. ಇತ್ತ ಹೇಮಾವತಿ, ಅತ್ತ ಕಾವೇರಿ ಹರಿಯುತ್ತಿದ್ದರೂ ಈ ತಾಲ್ಲೂಕಿನಲ್ಲಿ ನೀರಿಗೆ ಬರ. ದೋಸೆ ಕ್ಯಾಂಪ್‌ ಹೂಡಲು, ಚಹಾದಂಗಡಿ ಇಡಲು, ವಡಾ ಪಾವ್‌ ಮಾರಲು, ಆಟೊ ಓಡಿಸಲು, ಬೌನ್ಸರ್‌ಗಳಾಗಿ ಕೆಲಸ ಮಾಡಲು... ಹೀಗೆ ಇಲ್ಲಿನ ಜನರಿಗೆ ಮುಂಬೈ ಸೆಳೆತ.

ಲಕ್ಷ್ಮಿಪುರದ ಯುವಕ ಚಿನ್ನಸ್ವಾಮಿ ಅವರನ್ನು ಕೇಳಿ ಅಥವಾ ಬೊಮ್ಮೇನಹಳ್ಳಿಯ ಅಜ್ಜಿ ಶಾರದಮ್ಮ ಅವರನ್ನಾದರೂ ಕೇಳಿನೋಡಿ, ‘ನಾವು ಇನ್ಮುಂದೆ ಮುಂಬೈ ಕಡೆಗೆ ತಲೆ ಹಾಕಿಯೂ ಮಲಗುವುದಿಲ್ಲ’ ಎನ್ನುತ್ತಾರೆ. ಇದು ಒಬ್ಬಿಬ್ಬರ ಮಾತಲ್ಲ; ಮುಂಬೈನಿಂದ ಮಂಡ್ಯ ಜಿಲ್ಲೆಗೆ ಬಂದಿರುವ ಶೇಕಡಾ 75ರಷ್ಟು ಜನ ಇದನ್ನೇ ಹೇಳುತ್ತಿದ್ದಾರೆ.

ಒಂದಷ್ಟು ಜನ ಈಗಾಗಲೇ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಉದ್ಯೋಗದ ಚೀಟಿಗಾಗಿ ಅರ್ಜಿ ಹಾಕಲು ಸರದಿ ನಿಲ್ಲುವವರ ಸಂಖ್ಯೆ ಜಾಸ್ತಿಯಾಗಿದೆ. ಆಧಾರ್‌ ತಿದ್ದುಪಡಿ, ವಾಸಸ್ಥಳ ದೃಢೀಕರಣ ಪತ್ರಕ್ಕಾಗಿ ಅಲೆಯುವವರ ಸಂಖ್ಯೆಗೆ ಲೆಕ್ಕವಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲ್ಲೂಕುಗಳಲ್ಲಿ ಸುಮಾರು 25 ತಾಂಡಾಗಳಿವೆ. ಅಲ್ಲಿನ ಬಹುಪಾಲು ಜನರಿಗೆ 2–3 ತಲೆಮಾರುಗಳಿಂದ ಮುಂಬೈ ನಂಟಿದೆ. ಈ ನಂಟಿನ ಜಾಡು ಹುಡುಕುತ್ತಾ ಹೋದರೆ ಲಂಬಾಣಿ ಸಮುದಾಯದ ಮನೆಭಾಷೆಯೇ (ಮರಾಠಿ) ಅವರನ್ನು ಆ ಮಹಾನಗರಕ್ಕೆ ಸೆಳೆಯುತ್ತದೆ ಎಂದು ಹೇಳಲಾಗುತ್ತದೆ.

ಬಡತನವನ್ನೇ ಹಾಸಿ, ಹೊದ್ದು ಮಲಗುತ್ತವೆ ಇಲ್ಲಿನ ತಾಂಡಾಗಳು. ಆದರೆ, ಮಹಾನಗರದಿಂದ ವಾಪಸ್‌ ಬಂದು ಆರ್‌ಸಿಸಿ ಮನೆ ಕಟ್ಟಿಸಿದವರೂ ಐಷಾರಾಮಿ ಕಾರು ಖರೀದಿಸಿದವರೂ ಉಂಟು.

ಚಿಕ್ಕಪುಟ್ಟ ದುಡಿಮೆಗಾಗಿ ಮುಂಬೈ ಸೇರುವ ಪೈಕಿ ಬಹುತೇಕರ ಆಸ್ತಿ ಅಚ್ಚರಿಯ ರೀತಿಯಲ್ಲಿ ಹೆಚ್ಚಾದ ಉದಾಹರಣೆಗಳಿವೆ. ಹೀಗಾಗಿ, ಅನೇಕರು ಏನು ಮಾಡುತ್ತಾರೆ ಎನ್ನುವುದು ನಿಗೂಢ. ಇಲ್ಲಿಂದ ಹೋಗುವ ಹೆಣ್ಣು ಮಕ್ಕಳಲ್ಲಿ ಅನೇಕರು ಅಲ್ಲಿನ ಕಾಮಾಟಿಪುರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತವೆ. ಕೊರೊನಾ ಸೋಂಕು ಜೀವನದ ಭಾಗವಾಗಿ, ಭೀತಿ ಕಡಿಮೆ ಆಗುತ್ತಿದ್ದು ಬಹುತೇಕರು ಮತ್ತೆ ಮಹಾನಗರಿಯ ಸೆಳೆತಕ್ಕೆ ಒಳಗಾಗಿದ್ದಾರೆ.

ಉಡುಪಿ ಜಿಲ್ಲೆಗೆ ಮುಂಬೈನಿಂದ ಬಂದವರ ಸಂಖ್ಯೆಯೇ ಅಧಿಕ. ಹೆಚ್ಚಿನವರು ಹೋಟೆಲ್‌ಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದವರು. ಲಾಕ್‌ಡೌನ್ ಬಳಿಕ ಉದ್ಯೋಗ ಕಳೆದುಕೊಂಡು ಬರಿಗೈಲಿ ತವರಿಗೆ ಮರಳಿದ್ದರಿಂದ ಕ್ವಾರಂಟೈನ್‌ನಲ್ಲಿ ಇದ್ದರು. ಕಾರ್ಕಳ ತಾಲ್ಲೂಕು ಒಂದರಲ್ಲೇ 2,500ಕ್ಕೂ ಅಧಿಕ ಮಂದಿ ಕ್ವಾರಂಟೈನ್‌ನಲ್ಲಿ ತಂಗಿದ್ದರು. ಕೃಷಿಯತ್ತ ಮುಖ ಮಾಡಿರುವ ಅವರ ಪಾಲಿಗೆ ಮಾಯಾನಗರಿ ಎಂದರೆ ಸಾಕು, ದುಃಸ್ವಪ್ನಗಳು ಕಾಡುತ್ತವೆ.

ಒಂದು ಜೊತೆ ಬಟ್ಟೆಯಲ್ಲಿ 61 ದಿನ ಕ್ವಾರಂಟೈನ್‌!
ಕೆ.ಆರ್‌.ಪೇಟೆ ತಾಲ್ಲೂಕು ತೆಂಗಿನಘಟ್ಟದ ಕುಮಾರ್‌ ಬರೊಬ್ಬರಿ 61 ದಿನ ಕ್ವಾರಂಟೈನ್‌ನಲ್ಲಿ ಕಳೆದಿದ್ದಾರೆ. ಮಹಾರಾಷ್ಟ್ರದಲ್ಲಿ 42 ದಿನ, ಕರ್ನಾಟಕದಲ್ಲಿ 19 ದಿನ ಪ್ರತ್ಯೇಕವಾಸ ಅನುಭವಿಸಿರುವ ಅವರು, ಎರಡು ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದಾರೆ.

ಅಂಧೇರಿಯ ರೆಸ್ಟೋರೆಂಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್‌ 26 ವರ್ಷಗಳಿಂದಲೂ ಮುಂಬೈನಲ್ಲಿ ನೆಲೆಸಿದ್ದರು. ಮಾರ್ಚ್‌ ತಿಂಗಳಲ್ಲಿ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ಅವರು, ಉಟ್ಟ ಬಟ್ಟೆಯಲ್ಲೇ ಸಿಕ್ಕಸಿಕ್ಕ ವಾಹನ ಹತ್ತಿ ಕರ್ನಾಟಕದ ಹಾದಿ ಹಿಡಿದರು. ಆದರೆ, ಮಹಾರಾಷ್ಟ್ರ– ಕರ್ನಾಟಕದ ಗಡಿ ವಡಗಾಂವ್‌ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಅವರು, ಅಲ್ಲಿಯ ಆಯುರ್ವೇದ ಆಸ್ಪತ್ರೆಯೊಂದರಲ್ಲಿ 42 ದಿನ ಕ್ವಾರಂಟೈನ್‌ನಲ್ಲಿ ಇರಬೇಕಾಯಿತು.

ಲಾಕ್‌ಡೌನ್‌ ಸಡಿಲಿಕೆಯಾಗುವವರೆಗೂ ಅವರನ್ನು ಕಳುಹಿಸಲಿಲ್ಲ. ಅಲ್ಲಿ ನಡೆದ ಕೋವಿಡ್‌ ಪರೀಕ್ಷೆಯಲ್ಲಿ ವರದಿ ನೆಗೆಟಿವ್‌ ಬಂತು. ರಾಜ್ಯಕ್ಕೆ ಮರಳಿದ ನಂತರವೂ ಮರಡಿಲಿಂಗೇಶ್ವರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 19 ದಿನ ಕ್ವಾರಂಟೈನ್‌ ಕಳೆದರು. ಇಲ್ಲೂ ಅವರಿಗೆ ನೆಗೆಟಿವ್‌ ಬಂತು.

‘ಮುಂಬೈನಲ್ಲಿ ಕೊರೊನಾ ಸೋಂಕು ಹರಡುತ್ತಿದ್ದ ರೀತಿ ಕಂಡು ಭಯವಾಯಿತು. ಒಂದು ಜೊತೆ ಬಟ್ಟೆಯಲ್ಲೇ ಎರಡು ತಿಂಗಳು ಕಳೆದೆ. ಇನ್ನು ಮುಂಬೈ ಎನ್ನುವುದಿಲ್ಲ. ಊರಿನಲ್ಲಿ ಎರಡು ಎಕರೆ ಜಮೀನು, ಒಂದು ಕೊಳವೆ ಬಾವಿ ಇದೆ. ಕೃಷಿ ಮಾಡುತ್ತೇನೆ’ ಎಂದು ಹೇಳುತ್ತಾರೆ.

ವಿದ್ಯಾರ್ಥಿಗಳ ಗತಿ ಏನು?
ಮಂಡ್ಯ ಜಿಲ್ಲೆಗೆ ಬಂದಿರುವ ಅಂದಾಜು ಐದು ಸಾವಿರ ವಲಸಿಗರಲ್ಲಿ 800ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳೇ ಇದ್ದಾರೆ. ಶಾಲೆ ಆರಂಭವಾದ ನಂತರ ನಾವೆಲ್ಲ ಮುಂಬೈಗೆ ಹೋಗುವುದು ಅನಿವಾರ್ಯ ಎನ್ನುವುದು ಮಾತಿಗೆ ಸಿಕ್ಕ ಬಹುತೇಕರ ಸ್ಪಷ್ಟ ಅಭಿಪ್ರಾಯ. ಕೆಲವರಿಗೆ ಸ್ವಂತ ಮನೆ ಇದ್ದು ಅವರೂ ವಾಪಸ್‌ ಹೋಗಲು ನಿರ್ಧರಿಸಿದ್ದಾರೆ.

ಕರೋಟಿ ಗ್ರಾಮದ ಹುಚ್ಚೇಗೌಡ ಅವರು ಮುಂಬೈನಲ್ಲಿ ಓದುತ್ತಿದ್ದ ಇಬ್ಬರು ಮಕ್ಕಳೊಂದಿಗೆ ವಾಪಸ್‌ ಬಂದು ಕ್ವಾರಂಟೈನ್‌ ಮುಗಿಸಿ ಊರು ಸೇರಿದ್ದಾರೆ. ಮುಂಬೈ ಸಹವಾಸ ಸಾಕು ಎನ್ನುವುದು ಅವರ ಖಡಕ್‌ ಮಾತು. ಬಿಎಸ್‌ಸಿ– ಐಟಿ ಓದುತ್ತಿದ್ದ ಮಗ ತೃಣಾಲ್‌ ಅಂತಿಮ ವರ್ಷದ ಪರೀಕ್ಷೆ ಬರೆದಿಲ್ಲ. ಪರೀಕ್ಷೆ ರದ್ದಾಗುವ ಮಾಹಿತಿ ದೊರೆತಿದ್ದು ಊರಿನಲ್ಲೇ ಕೆಲಸ ಹುಡುಕುತ್ತಿದ್ದಾರೆ. ಮತ್ತೊಬ್ಬ ಮಗ ನವೀನ್‌ನ ಎಸ್ಸೆಸ್ಸೆಲ್ಸಿಯ ಒಂದು ವಿಷಯದ ಪರೀಕ್ಷೆ ಬಾಕಿ ಇದೆ. ಕೆ.ಆರ್‌.ಪೇಟೆಯಲ್ಲೇ ಆತನ ಓದು ಮುಂದುವರಿಸಲು ಹುಚ್ಚೇಗೌಡ ನಿರ್ಧರಿಸಿದ್ದಾರೆ.

***

35 ಸಾವಿರ: ನಿಗಾ ವ್ಯವಸ್ಥೆಯಲ್ಲಿ ಇರುವವರು
246: ರಾಜ್ಯದಲ್ಲಿರುವ ಸರ್ಕಾರಿ ಕ್ವಾರಂಟೈನ್ ಕೇಂದ್ರಗಳು
28 ಸಾವಿರ: ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವ ಹಾಸಿಗೆಗಳು
323: ಕ್ವಾರಂಟೈನ್‌ಗೆ ಗುರುತಿಸಲಾದ ಆಸ್ಪತ್ರೆಗಳು
1,273: ಆಸ್ಪತ್ರೆ ಕ್ವಾರಂಟೈನ್‌ನಲ್ಲಿರುವ ಸೋಂಕು ಶಂಕಿತರು
56,403: ಸಾಂಸ್ಥಿಕ ಕ್ವಾರಂಟೈನ್‌ ಪೂರ್ಣಗೊಳಿಸಿದವರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು