ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿಸಿ: ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ

ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ
Last Updated 3 ಏಪ್ರಿಲ್ 2020, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಒದಗಿಸಲು 1 ಲಕ್ಷ ಪಿಪಿಇ (ವೈಯಕ್ತಿಕ ಸುರಕ್ಷತಾ ಸಾಧನ) ಕಿಟ್‌ಗಳ ಪೂರೈಕೆಗೆ ಕಾರ್ಯಾದೇಶ ನೀಡಿದ್ದು, ಇನ್ನೂ 2 ಲಕ್ಷ ಪಿಪಿಇ ಕಿಟ್‌ಗಳ ಪೂರೈಕೆಗೆ ಆದೇಶ ನೀಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್‌–19 ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ಸಮಾಲೋಚನೆ ನಡೆಸಲು ಕರೆದಿದ್ದ ಸಚಿವರ ಸಭೆಯಲ್ಲಿ ಪಿಪಿಇ ಕಿಟ್‍ಗಳ ಗುಣಮಟ್ಟ ಹಾಗೂ ಕಿಟ್‍ಗಳ ಕೊರತೆ ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

15 ಲಕ್ಷ ಕಟ್ಟಡ ಕಾರ್ಮಿಕರ ಖಾತೆಗಳಿಗೆ ಈಗಾಗಲೇ ತಲಾ ₹1,000 ಜಮೆ ಮಾಡಲಾಗಿದೆ. ಹೆಚ್ಚುವರಿಯಾಗಿ ಇನ್ನೂ ತಲಾ ₹1,000 ಖಾತೆಗೆ ಜಮೆ ಮಾಡಲು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಅಲ್ಲದೆ, ಓಲಾ ಮತ್ತು ಉಬರ್‌ ಕಂಪನಿಗಳ ನೆರವಿನೊಂದಿಗೆ ತುರ್ತು ಸಂದರ್ಭದಲ್ಲಿ ವಿವಿಧ ಕಾಯಲೆಗಳಿಂದ ಬಳಲುತ್ತಿರುವ ರೋಗಿಗಳ ಸೇವೆಗೆ ವಾಹನ ಒದಗಿವು ಬಗ್ಗೆ ಕ್ರಮ ತೆಗೆದುಕೊಳ್ಳಲೂ ಅವರು ಸಲಹೆ ನೀಡಿದರು.

ಎಲ್ಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಲು ಯಡಿಯೂರಪ್ಪ ನಿರ್ದೇಶನ ನೀಡಿದರು.

ಬೆಂಗಳೂರು ನಗರದಲ್ಲಿ ಉಚಿತ ಆಹಾರ ವಿತರಣೆ ಕ್ರಮಬದ್ಧವಾಗಿ ಆಗುತ್ತಿಲ್ಲ. ಇದನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದು ಸಚಿವರು, ಶಾಸಕರು ಮತ್ತು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಸಚಿವರಾದ ಆರ್‌.ಅಶೋಕ, ಎಸ್‌.ಸುರೇಶ್‌ ಕುಮಾರ್‌, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್, ಬಿ.ಶ್ರೀರಾಮುಲು,ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ. ವಿಜಯಭಾಸ್ಕರ್ ಇದ್ದರು.

ತಾರತಮ್ಯ ಬೇಡ: ಸಿ.ಎಂ ಕಟ್ಟಪ್ಪಣೆ
ಸಂಕಷ್ಟಕ್ಕೆ ಸಿಲುಕಿರುವ ಬಡವರು ಮತ್ತು ಕಾರ್ಮಿಕರಿಗೆ ಆಹಾರ ಮತ್ತು ಇತರ ವಸ್ತುಗಳನ್ನು ವಿತರಿಸುವಾಗ ಪಕ್ಷ ಅಥವಾ ಕ್ಷೇತ್ರಗಳ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಶಾಸಕರು ಎಂಬ ಕಾರಣಕ್ಕೆ ವಿತರಣೆಯಲ್ಲಿ ತಾರತಮ್ಯ ಮಾಡಬೇಡಿ. ಪ್ರತಿಯೊಂದೂ ವಿಧಾನಸಭಾ ಕ್ಷೇತ್ರ ಮತ್ತು ವಾರ್ಡ್‌ಗಳ ಅಗತ್ಯಕ್ಕೆ ಅನುಸಾರವಾಗಿ ಹಂಚಿಕೆ ಮಾಡಿ’ ಎಂದು ನಿರ್ದೇಶನ ನೀಡಿದರು.

‘ನಮ್ಮ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡು ಯಾರಾದರೂ ನಿಮಗೆ ಬೆದರಿಕೆ ಹಾಕಿ ಹೆಚ್ಚು ಆಹಾರ ಧಾನ್ಯ ಮತ್ತು ವಸ್ತುಗಳನ್ನು ಪಡೆದುಕೊಳ್ಳಲು ಮುಂದೆ ಬಂದರೆ, ಅದಕ್ಕೆ ಅವಕಾಶ ನೀಡಬೇಡಿ’ ಎಂದು ಯಡಿಯೂರಪ್ಪ ಹೇಳಿದರು.

‘ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಕೊಳೆಗೇರಿಗಳಿವೆಯೋ ಅಲ್ಲಿಗೆ ಹೆಚ್ಚು ಒತ್ತು ನೀಡಬೇಕು.ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಗುಣಮಟ್ಟ ಚೆನ್ನಾಗಿಲ್ಲ ಎಂಬ ದೂರುಗಳು ಬರುತ್ತಿವೆ. ಇದನ್ನು ಸರಿಪಡಿಸಬೇಕು. ಇಲ್ಲಿ ಉಚಿತ ನೀಡುತ್ತಾರೆ ಎಂಬ ಕಾರಣಕ್ಕೆ ಸ್ಥಳೀಯ ಕಾರ್ಪೊರೇಟರ್‌ಗಳು ಬಂದು ಆಹಾರ ಕೇಳಿದರೆ ಕೊಡಬೇಡಿ. ಕೆಲವರು ಉಚಿತ ಆಹಾರ ಒಯ್ಯುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಸಹಿಸುವುದಿಲ್ಲ’ ಎಂದು ತಿಳಿಸಿದರು.

‘ತಬ್ಲೀಗ್‌ನಲ್ಲಿ ಭಾಗಿಯಾದವರ ಪತ್ತೆಗೆ ಸಹಕಾರ’
ಬೆಂಗಳೂರು: ದೆಹಲಿಯ ತಬ್ಲೀಗ್‌ ಜಮಾತ್‌ನಲ್ಲಿ ಭಾಗವಹಿಸಿ ಬಂದವರನ್ನು ಪತ್ತೆ ಮಾಡಿ, ಕ್ವಾರಂಟೈನ್‌ಗೆ ಒಳಪಡಿಸುವ ಕಾರ್ಯಕ್ಕೆ ಸಹಕಾರ ನೀಡುವುದಾಗಿ ಮುಸ್ಲಿಂ ಮುಖಂಡರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಭರವಸೆ ನೀಡಿದರು.

ಕೋವಿಡ್‌–19 ನಿಯಂತ್ರಣಕ್ಕೆ ಧಾರ್ಮಿಕ ಮುಖಂಡರ ಜತೆ ಸಮಾಲೋಚನೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಶುಕ್ರವಾರ ವಿಧಾನಸೌಧದಲ್ಲಿ ಸಭೆ ಕರೆದಿದ್ದರು.

‘ತಬ್ಲೀಗ್‌ ಜಮಾತ್‌ಗೆ ಭೇಟಿ ನೀಡಿದ ವ್ಯಕ್ತಿಗಳ ಮಾಹಿತಿ ನೀಡಿ ಕಟ್ಟುನಿಟ್ಟಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಮನವೊಲಿಸುತ್ತೇವೆ. ಆದರೆ, ಇವರನ್ನು ಅಸ್ಪೃಶ್ಯರಂತೆ ನೋಡಬಾರದು. ಅಪಪ್ರಚಾರ ನಡೆಯದಂತೆಯೂ ಎಚ್ಚರಿಕೆ ವಹಿಸ
ಬೇಕು’ ಎಂದು ಮುಸ್ಲಿಂ ಮುಖಂಡರು ಹೇಳಿದರು.

‘ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಯ ಘಟನೆ ಖಂಡನೀಯ. ತಪ್ಪು ಕಲ್ಪನೆಯಿಂದಾಗಿ ಈ ಘಟನೆ ನಡೆದಿರಬಹುದು. ಇನ್ನು ಮುಂದೆ ವೈದ್ಯಕೀಯ ಸಿಬ್ಬಂದಿ ಹೋಗುವ ಸಂದರ್ಭದಲ್ಲಿ ನಮ್ಮ ಗಮನಕ್ಕೆ ತಂದರೆ, ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಅವರು ಭರವಸೆ ನೀಡಿದರು.

‘ಎಲ್ಲರ ಆರೋಗ್ಯದ ದೃಷ್ಟಿಯಿಂದ ಜಾತಿ, ಧರ್ಮಗಳ ತಾರತಮ್ಯವಿಲ್ಲದೆ ಒಗ್ಗಟಿನಿಂದ ಶ್ರಮಿಸಬೇಕು’ ಎಂದು ಯಡಿಯೂರಪ್ಪ ಸಲಹೆ ನೀಡಿದರು. ಇದಕ್ಕೆ ಮುಖಂಡರು ಸಹಮತ ವ್ಯಕ್ತಪಡಿಸಿದರು.

‘ರಾಜ್ಯದ ಜನತೆ ವದಂತಿಗಳಿಗೆ ಕಿವಿಗೊಡಬಾರದು. ಸರ್ಕಾರದ ನೀಡುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಈ ಮೂಲಕ ಕೊರೊನಾ ವಿರುದ್ಧದ ಯುದ್ಧವನ್ನು ಗೆಲ್ಲಬೇಕು’ ಎಂದು ಯಡಿಯೂರಪ್ಪ ಸಲಹೆ ನೀಡಿದರು.

ಸಭೆಯಲ್ಲಿ ಶಾಸಕರಾದ ಎನ್‌.ಎ.ಹ್ಯಾರಿಸ್‌, ಜಮೀರ್‌ ಅಹಮದ್‌, ರಿಜ್ವಾನ್ ಅರ್ಷದ್‌, ವಿಧಾನಪರಿಷತ್‌ ಸದಸ್ಯರಾದ ಸಿ.ಎಂ.ಇಬ್ರಾಹಿಂ, ನಜೀರ್ ಅಹಮದ್‌ ಮುಂತಾದವರು ಇದ್ದರು.

ವಲಸೆ ಕಾರ್ಮಿಕರ ಆರೋಗ್ಯತಪಾಸಣೆ
ಬೆಂಗಳೂರು: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಶಿಬಿರಗಳಲ್ಲಿರುವ ವಲಸೆ ಕಾರ್ಮಿಕರ ಆರೋಗ್ಯವನ್ನು ಪ್ರತಿನಿತ್ಯ ತಪಾಸಣೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್ ಪಾಂಡೆ ಸುತ್ತೋಲೆ ಹೊರಡಿಸಿದ್ದಾರೆ.

ಸಾಂಕ್ರಾಮಿಕ ರೋಗವಾಗಿರುವ ಕೋವಿಡ್‌–19 ಹರಡದಂತೆ ಸಮೂಹ ನಿಯಂತ್ರಣ ಕಾರ್ಯತಂತ್ರಗಳನ್ನು ಬಲಪಡಿಸಬೇಕಿದೆ. ವಲಸೆ ಕಾರ್ಮಿಕರು ಹಾಗೂ ದಿನಗೂಲಿ ನೌಕರರು ತಮ್ಮ ಸ್ವಗ್ರಾಮಗಳಿಗೆ ತೆರಳಲು ಸಾಧ್ಯವಾಗದೇ ಸರ್ಕಾರವು ಕಲ್ಪಿಸಿರುವ ತಾತ್ಕಾಲಿಕ ಶಿಬಿರಗಳಲ್ಲಿ ಉಳಿದುಕೊಂಡಿದ್ದಾರೆ.

ಸ್ಥಳೀಯ ಜಿಲ್ಲಾಡಳಿತಗಳಿಂದ ಛತ್ರಗಳು ಹಾಗೂ ಸರ್ಕಾರಿ ಕಟ್ಟಡಗಳನ್ನು ಶಿಬಿರಗಳನ್ನಾಗಿ ಪರಿವರ್ತಿಸಲಾಗಿದೆ. ಇಂತಹ ಶಿಬಿರಗಳಲ್ಲಿ ಸೋಂಕಿತ ವ್ಯಕ್ತಿಗಳು ಇದ್ದರೆ ಅವರೊಂದಿಗೆ ನೇರ ಹಾಗೂ ಪರೋಕ್ಷವಾಗಿ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೂ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT