ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟಕ್ಕೆ ಸಿಲುಕಿದ ಲೈಂಗಿಕ ಕಾರ್ಯಕರ್ತೆಯರು

ಪುನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ಆಗ್ರಹ
Last Updated 17 ಮೇ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಭೀತಿ ಹಾಗೂ ಲಾಕ್‌ ಡೌನ್‌ನಿಂದಾಗಿ ಲೈಂಗಿಕ ಕಾರ್ಯಕರ್ತೆಯರ ಬದುಕು ಮೂರಾಬಟ್ಟೆಯಾಗಿದ್ದು, ಮನೆಯ ಬಾಡಿಗೆಯನ್ನೂ ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲೈಂಗಿಕ ಚಟುವಟಿಕೆಗಳ ತಾಣಗಳ ಮೇಲಿನ ನಿರ್ಬಂಧವನ್ನು ಸಡಿಲಿಸಿದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಲಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಆದರೆ, ಇದೇ ಅವಧಿಯಲ್ಲಿರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ (ಕೆಸಾಪ್ಸ್) ಕಾಂಡೋಮ್‌ಗಳನ್ನು ಹಂಚಿಕೆ ಮಾಡುತ್ತಿರುವುದು ಸೋಂಕು ಹರಡುವಿಕೆಗೆ ಪರೋಕ್ಷವಾಗಿ ಕೈಜೋಡಿಸಿದಂತಾಗಿದೆ. ಬಡತನ, ಬಾಲ್ಯ ವಿವಾಹ, ಕಳ್ಳ ಸಾಗಣೆ, ಅನಕ್ಷರತೆ ಸೇರಿದಂತೆ ವಿವಿಧ ಕಾರಣಗಳಿಂದ ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿಕೊಂಡವರ ಬದುಕು ಈಗ ಬೀದಿಗೆ ಬಿದ್ದಿದೆ. ದಿನದ ಆದಾಯದ ಮೇಲೆಯೇ ಜೀವನ ನಡೆಸುತ್ತಿದ್ದ ಅವರಿಗೆ ಬದುಕಿನ ಹಾದಿಗಳು ಕಾಣದಂತಾಗಿದೆ. ಲಾಕ್‌ ಡೌನ್‌ ತೆಗೆದರೂ ಇನ್ನೂ ಕನಿಷ್ಠ ಮೂರು ತಿಂಗಳು ಅವರ ದುಡಿಮೆಗೆ ಕೊರೊನಾ ಸೋಂಕು ತಡೆಯೊಡ್ಡಲಿದ್ದು, ಪರ್ಯಾಯ ಉದ್ಯೋಗಾವಕಾಶ ಕಾಣದೇ ಕಂಗಾಲಾಗಿದ್ದಾರೆ.

ರಾಜ್ಯದಲ್ಲಿಕೆಸಾಪ್ಸ್ ಅಡಿಯಲ್ಲಿ ಒಂದು ಲಕ್ಷ ಲೈಂಗಿಕ ಕಾರ್ಯಕರ್ತರು ಹೆಸರು ನೋಂದಾಯಿಸಿಕೊಂಡಿದ್ದು, ಈಗ ಅವರು ಸರ್ಕಾರದ ನೆರವಿಗೆ ಎದುರು ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಅಂತಹವರಿಗೆ ಪುನರ್ವಸತಿ ಯೋಜನೆಯನ್ನು ರೂಪಿಸಬೇಕು ಎಂದು ಸರ್ಕಾರೇತರ ಸಂಸ್ಥೆಗಳೂ ಆಗ್ರಹಿಸುತ್ತಿವೆ. ಇನ್ನೊಂದೆಡೆ ಕಾಂಡೋಮ್ ಹಂಚುವ ಜಾಲವನ್ನು ಮೊದಲು ನಿಲ್ಲಿಸಬೇಕೆಂಬ ಕೂಗು ಸಹ ಮೊಳಗಲಾರಂಭಿಸಿದೆ. ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯ ಪ್ರಕಾರ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದವರಲ್ಲಿ 12,185 ಮಂದಿ 18 ರಿಂದ 24 ವಯೋಮಾನದವರಾಗಿದ್ದಾರೆ.

ವರದಿ ಸಲ್ಲಿಸಲು ಸೂಚನೆ:ಬರಹಗಾರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ಅವರು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಪತ್ರ ಬರೆದಿದ್ದು, ‘ಕೊರೊನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವೇಶ್ಯಾವಾಟಿಕೆಗೆ ನಿರ್ಬಂಧ ಹೇರಿ, ಲೈಂಗಿಕ ಕಾರ್ಯಕರ್ತರಿಗೆ ಪುನರ್ವಸತಿ ಒದಗಿಸಬೇಕು’ ಎಂದು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿರುವ ಸಚಿವರು, ಪುನರ್ವಸತಿ ಸೌಲಭ್ಯವನ್ನು ಒದಗಿಸುವ ಬಗ್ಗೆ ವಿಸ್ತೃತ ವರದಿಯೊಂದಿಗೆ‍ಪ್ರಸ್ತಾವನೆ ಸಲ್ಲಿಸಲು ಕೆಸಾಪ್ಸ್ ಯೋಜನಾ ನಿರ್ದೇಶಕರು, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಜತೆಗೆ, ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

‘ಲೈಂಗಿಕ ಕಾರ್ಯಕರ್ತೆಯರಿಗೆ ಸರ್ಕಾರ ನೀಡುತ್ತಿರುವ ಪಡಿತರ ಸರಿಯಾಗಿ ಕೈಸೇರುತ್ತಿಲ್ಲ. ಆದರೆ, ಕೆಲವೊಂದು ಸರ್ಕಾರೇತರ ಸಂಸ್ಥೆಗಳು ಆಹಾರದ ಕಿಟ್‌ಗಳನ್ನು ನೀಡಲು ಮುಂದೆ ಬರುತ್ತಿವೆ. ದಿನದ ಆದಾಯದಿಂದಲೇ ಲೈಂಗಿಕ ಕಾರ್ಯಕರ್ತರು ಜೀವನ ನಡೆಸುತ್ತಿದ್ದರು. ಈಗ ಅವರ ಕೈಯಲ್ಲಿ ಹಣವಿಲ್ಲ. ಮನೆಯ ಬಾಡಿಗೆಯನ್ನೂ ಕಟ್ಟಲಾಗದ ಸ್ಥಿತಿ ನಿರ್ಮಾಣವಾಗಿದೆ. ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಿದಂತೆ ಧನ ಸಹಾಯ ಮಾಡಿದಲ್ಲಿ ತಕ್ಕ ಮಟ್ಟಿಗೆ ಸಂಕಷ್ಟದಿಂದ ಪಾರಾಗುತ್ತಾರೆ.ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಂಬಂಧ ಎಲ್ಲ ಕಡೆ ಅಂತರವನ್ನು ಕಾಪಾಡಬೇಕು’ ಎಂದು ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಒಕ್ಕೂಟದ ಖಜಾಂಚಿ ನಿಶಾ ಗೋಳೂರು ತಿಳಿಸಿದರು. ‌

₹ 10 ಕೋಟಿ ಹಣ ಬಾಕಿ

‘ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಅಧ್ಯಯನಕ್ಕಾಗಿ’ ಸರ್ಕಾರ 2015ರಲ್ಲಿ ಸಮಿತಿ ರಚಿಸಿತ್ತು. ಸಮತಿಯು 2017ರಲ್ಲಿ ವಿಸ್ತೃತವಾದ ವರದಿಯನ್ನು ನೀಡಿತ್ತು. ಆ ಸಮಿತಿಯ ಸದಸ್ಯರಾಗಿದ್ದ ರೂಪಾ ಹಾಸನ ಅವರು ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿ ಸಂಬಂಧ ಸಚಿವರಿಗೆ ಬರೆದ ಪತ್ರದಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

*ಕಾಂಡೋಮ್ ಹಂಚಿಕೆಯ ಜಾಲದಲ್ಲಿರುವ ಸಮುದಾಯಗಳಿಗೆ ತುರ್ತಾಗಿ ಜಾಗೃತಿ ನೀಡಬೇಕು

*ಕಾಂಡೋಮ್‌ಗಳನ್ನು ನಿಗದಿತ ಸಾರ್ವಜನಿಕ ಸ್ಥಳಗಳಲ್ಲಿ ವೆಂಡಿಂಗ್ ಮಷಿನ್‌ಗಳ ಮೂಲಕ ಅವಶ್ಯಕತೆ ಇರುವವರಿಗೆ ದೊರಕಿಸುವ ವ್ಯವಸ್ಥೆ ಮಾಡಬೇಕು

*ಕೆಸಾಪ್ಸ್‌ನಲ್ಲಿ ನೋಂದಣಿಯಾದವರ ಮೂಲಕ ಕಾಂಡೋಮ್ ವಿತರಿಸುವುದನ್ನು ನಿರ್ಬಂಧಿಸಬೇಕು.

*ಕೆಸಾಪ್ಸ್ ಕಾಂಡೋಮ್ ಹಂಚಿಕೆಯಲ್ಲಿ ನಿರತವಾಗಿದ್ದ ಎಲ್ಲ ಜಿಲ್ಲೆಗಳ ಸಮುದಾಯ ಆಧಾರಿತ ಸಂಸ್ಥೆಗಳಿಗೆ ಕಳೆದ 3-4 ವರ್ಷಗಳಿಂದ ₹ 10 ಕೋಟಿಗೂ ಹೆಚ್ಚಿನ ಹಣವನ್ನು ಬಾಕಿ ಉಳಿಸಿಕೊಂಡಿದೆ. ಈ ಸಂಕಷ್ಟದ ಸಮಯದಲ್ಲಿಯಾದರೂ ಈ ದಮನಿತ ಹೆಣ್ಣುಮಕ್ಕಳ ಹಣವನ್ನು ನೀಡಿ ಮಾನವೀಯತೆ ಮೆರೆಯಬೇಕು

*ಸರ್ಕಾರ ತುರ್ತಾಗಿ ಪಡಿತರ ಹಾಗೂ ಸಹಾಯ ಧನ ನೀಡಲು ಆದೇಶ ಹೊರಡಿಸಬೇಕು

*ಸ್ವಯಂ ಉದ್ಯೋಗ ಸಂಬಂಧ ಅಗತ್ಯ ತರಬೇತಿ ನೀಡಿ, ಅವರು ತಯಾರಿಸಿದ ಉತ್ಪನ್ನಗಳಿಗೆ ಸ್ಥಳೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಬೇಕು

*****

ಲೈಂಗಿಕ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿದಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಇದರಲ್ಲಿ ವಿವಿಧ ಇಲಾಖೆಗಳು ಪಾಲ್ಗೊಳ್ಳಬೇಕಾಗುತ್ತದೆ.
-ಡಾ.ಜಯರಾಜ್ ಕೆಸಾಪ್ಸ್ ಉಪನಿರ್ದೇಶಕ

***

ಸಾಮಾಜಿಕ ವ್ಯವಸ್ಥೆಯ ಲೋಪದಿಂದ ಹಲವರು ವೇಶ್ಯಾವಾಟಿಕೆಗೆ ಬಂದಿದ್ದಾರೆ. ಅವರೆಲ್ಲರಿಗೂ ಸರ್ಕಾರ ಪುನರ್ವಸತಿ ಕಲ್ಪಿಸಬೇಕು. ಅವರು ತಯಾರಿಸಿದ ವಸ್ತುಗಳನ್ನು ಜಿಲ್ಲಾ ಮಟ್ಟದಲ್ಲಿ ಖರೀದಿಸುವ ವ್ಯವಸ್ಥೆ ರೂಪಿಸಬೇಕು
-ರೂಪಾ ಹಾಸನ, ಸಾಮಾಜಿಕ ಕಾರ್ಯಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT