ಶನಿವಾರ, ಜುಲೈ 31, 2021
26 °C
ಭಾನುವಾರ ಮಾತ್ರ ‘ಕರ್ಫ್ಯೂ’– ಕೋವಿಡ್‌ ಕಾರ್ಯಪಡೆ ಸಭೆ

ಲಾಕ್‌ಡೌನ್‌ ತೀರ್ಮಾನ ಸಿ.ಎಂ. ವಿವೇಚನೆಗೆ: ಡಾ.ಕೆ. ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಲಾಕ್‌ಡೌನ್‌ ಮತ್ತೆ ಜಾರಿಗೊಳಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕೋವಿಡ್‌ 19 ನಿಗ್ರಹ ಕಾರ್ಯಪಡೆ ಸಭೆಯ ಬಳಿಕ ಮಾತನಾಡಿದ ಅವರು, ‘ಸಭೆಯಲ್ಲಿ ಲಾಕ್‌ಡೌನ್‌ ವಿಷಯ ಚರ್ಚೆಗೆ ಬಂತು. ಈ ಸನ್ನಿವೇಶದಲ್ಲಿ ಲಾಕ್‌ಡೌನ್‌ ಅಗತ್ಯವಿಲ್ಲವೆಂದು ನಾನು ಮತ್ತು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮುಖ್ಯಮಂತ್ರಿಗೆ ತಿಳಿಸಿದ್ದೇವೆ’ ಎಂದರು.

‘ಮುಖ್ಯಮಂತ್ರಿ ಈಗಾಗಲೇ ಘೋಷಿಸಿದಂತೆ ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಮತ್ತು ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರಲಿದೆ’ ಎಂದು ಸುಧಾಕರ್‌ ಹೇಳಿದರು.

‘ಬೆಂಗಳೂರು ನಗರ ಮತ್ತು ಕೆಲವು ಜಿಲ್ಲೆಗಳಲ್ಲಿ ಅನೇಕ ಕಾರಣಗಳಿಂದ ಇತ್ತೀಚೆಗೆ ಸೋಂಕು ಹೆಚ್ಚಿದೆ. ಸೋಂಕು ಹೆಚ್ಚು ಕಾಣಿಸಿಕೊಂಡಿರುವ ಪ್ರದೇಶಗಳನ್ನು ಕಟ್ಟುನಿಟ್ಟಾಗಿ ಸೀಲ್‌ಡೌನ್‌ ಮಾಡಬೇಕು. ಇಡೀ ವ್ಯವಸ್ಥೆ ಅಚ್ಚುಕಟ್ಟಾಗಿ, ಪಾರದರ್ಶಕ ರೀತಿಯಲ್ಲಿ ಕೈಗೊಳ್ಳಬೇಕು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ಸಚಿವರು ಸಂಘಟಿತವಾಗಿ ಕೆಲಸ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದರು. 


ದೀಪಾಂಜಲಿ ನಗರ ವಾರ್ಡ್‌ನಲ್ಲಿರುವ ಕಂಟೈನ್‌ಮೆಂಟ್‌ ವಲಯವೊಂದರಲ್ಲಿ ರಸ್ತೆಗೆ ಮಣ್ಣು, ಬ್ಯಾರಿಕೇಡ್‌ ಹಾಕಿ ಸೀಲ್‌ಡೌನ್‌ ಮಾಡಲಾಗಿದೆ –ಪ್ರಜಾವಾಣಿ ವಾರ್ತೆ

ಕೋವಿಡ್‌: ಸಚಿವರಿಗೆ ಜವಾಬ್ದಾರಿ ಹಂಚಿಕೆ
ಕೋವಿಡ್ ನಿಯಂತ್ರಣ ಹಾಗೂ ಸೌಲಭ್ಯ ಒದಗಿಸುವ ಜವಾಬ್ದಾರಿಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿವಿಧ ಸಚಿವರಿಗೆ ಹಂಚಿಕೆ ಮಾಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ. 

‘ಕೋವಿಡ್‌ ವಿಷಯಕ್ಕೆ ಸಂಬಂಧಿಸಿದ ಎಲ್ಲ ನೀತಿ ನಿರೂಪಣೆ, ಮಾರ್ಗಸೂಚಿ, ಮಾಧ್ಯಮಗಳಿಗೆ ಮಾಹಿತಿ ನೀಡುವುದು, ವಾರ್ ರೂಮ್‌ ಜವಾಬ್ದಾರಿಯನ್ನು ನನಗೆ ವಹಿಸಲಾಗಿದೆ. ಕೋವಿಡ್‌ ಕೇರ್‌ ಸೆಂಟರ್‌ಗಳ ಸ್ಥಾಪನೆ ಮತ್ತು ನಿರ್ವಹಣೆಯನ್ನು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರಿಗೆ ಹಂಚಿಕೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳ ನಿವ೯ಹಣೆ ಜವಾಬ್ದಾರಿಯನ್ನು ಕಂದಾಯ ಸಚಿವ ಆರ್‌. ಅಶೋಕ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್‌ ಅವರಿಗೆ ವಹಿಸಲಾಗಿದೆ’ ಎಂದು ಅವರು ಹೇಳಿದರು.

ಮನೆ ಆರೈಕೆ ವ್ಯವಸ್ಥೆಗೆ ಪ್ರತ್ಯೇಕ ತಂಡ
ರಾಜ್ಯದಾದ್ಯಂತ ಕೋವಿಡ್‌ 19 ರೋಗಿಗಳ ಮನೆ ಆರೈಕೆಗೆ‌ ವ್ಯವಸ್ಥೆ ಮಾಡಲು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌‌ ನೇತೃತ್ವದಲ್ಲಿ ಐವರು ಸದಸ್ಯರನ್ನೊಳಗೊಂಡ ಪ್ರತ್ಯೇಕ ತಂಡ ರಚಿಸಲಾಗಿದೆ.

ವಸತಿ ಇಲಾಖೆ ಕಾರ್ಯದರ್ಶಿ ಮನೋಜ್‌ಕುಮಾರ್ ಮೀನಾ, ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್‌, ರಾಮಯ್ಯ ವೈದ್ಯಕೀಯ ಕಾಲೇಜಿನ ಡಾ. ನಂದಕುಮಾರ್‌, ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಡಾ. ಪ್ರಭುದೇವಗೌಡ ತಂಡದ ಇತರ ಸದಸ್ಯರು.

ಈ ತಂಡವು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ನೆರವಿನಲ್ಲಿ ಬೆಂಗಳೂರು ನಗರದಲ್ಲಿ ಮನೆ ಆರೈಕೆಗೆ‌ ವ್ಯವಸ್ಥೆ ಮಾಡಲಿದೆ. ಜಿಲ್ಲೆಗಳಲ್ಲಿ ಈ ರೀತಿಯ ವ್ಯವಸ್ಥೆ ಮಾಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಮಾರ್ಗದರ್ಶನ ನೀಡಲಿದೆ. ಮನೆ ಆರೈಕೆ ವ್ಯವಸ್ಥೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿ ಅನ್ವಯ ಈ ತಂಡ ಕೆಲಸ ಮಾಡಲಿದೆ. ಅಲ್ಲದೆ, ಮನೆ ಆರೈಕೆಯಲ್ಲಿರುವ ಕೋವಿಡ್‌ ರೋಗಿಗಳ ಸೂಕ್ಷ್ಮ ಆರೋಗ್ಯ ಮೇಲ್ವಿಚಾರಣೆ (ರಿಮೋಟ್‌ ಹೆಲ್ತ್‌ ಮಾನಿಟರಿಂಗ್‌) ಕಾರ್ಯವನ್ನೂ ತಂಡ ಮಾಡಲಿದೆ.

15 ದಿನ ಸಲೂನ್‌ ಬಂದ್‌
ರಾಜ್ಯದಾದ್ಯಂತ ಜುಲೈ 5ರಿಂದ 15 ದಿನಗಳವರೆಗೆ ತಾತ್ಕಾಲಿಕವಾಗಿ ಸಲೂನ್‍ಗಳನ್ನು ಬಂದ್ ಮಾಡಲು ರಾಜ್ಯ ಸವಿತಾ ಸಮಾಜ ನಿರ್ಧರಿಸಿದೆ.

‘ಸಲೂನ್ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದೆ. ಹೀಗಾಗಿ, ಸ್ವಯಂಪ್ರೇರಿತವಾಗಿ ಎಲ್ಲ ಸಲೂನ್‍ಗಳನ್ನು ಬಂದ್ ಮಾಡಲು ನಿರ್ಧರಿಸಿದ್ದೇವೆ' ಎಂದು ಸವಿತಾ ಸಮಾಜದ ಕಾರ್ಯಾಧ್ಯಕ್ಷ ಎಸ್.ಕಿರಣ್ ಕುಮಾರ್ ತಿಳಿಸಿದರು.

ಹೋಟೆಲ್‍ಗಳಲ್ಲಿ ಪಾರ್ಸೆಲ್ ಲಭ್ಯ: ಭಾನುವಾರದ ಲಾಕ್‍ಡೌನ್ ವೇಳೆ ನಗರದ ಎಲ್ಲ ಹೋಟೆಲ್‍ಗಳಲ್ಲಿ ಪಾರ್ಸೆಲ್ ಸೇವೆ ಇರಲಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್‍ಗಳ ಸಂಘದ ಪ್ರಕಟಣೆ ತಿಳಿಸಿದೆ. ‘ಸೋಮವಾರ ಬೆಳಗ್ಗಿನವರೆಗೂ ಲಾಕ್‌ಡೌನ್‌ ವೇಳೆ ಪಾರ್ಸೆಲ್ ಸೇವೆ ಇರಲಿದೆ’ ಎಂದು ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದರು.

ಮಲ್ಲಸಂದ್ರ ಮಾರುಕಟ್ಟೆ ಬಂದ್: ನಗರದ ಮಲ್ಲಸಂದ್ರ ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ವರ್ತಕರು ಹಾಗೂ ರೈತರು ನಿರ್ಧರಿಸಿದ್ದಾರೆ. ಸೋಂಕು ತಡೆಗಟ್ಟಲು ಮಾರುಕಟ್ಟೆ ಬಂದ್ ಮಾಡುವಂತೆ ಶಾಸಕ ಆರ್.ಮಂಜುನಾಥ್ ಅವರು ಶನಿವಾರ ಮನವಿ ಮಾಡಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು