ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯ್ನೆಲಕ್ಕೆ ಬರುವವರ ಮೇಲೆ ಹೆಚ್ಚಿನ ನಿಗಾ

Last Updated 8 ಮೇ 2020, 4:52 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶದಲ್ಲಿ ಸಿಲುಕಿಕೊಂಡಿರುವ 10 ಸಾವಿರಕ್ಕೂ ಅಧಿಕ ಕನ್ನಡಿಗರನ್ನು ರಾಜ್ಯಕ್ಕೆ ಕರೆತರಲು ಮುಂದಾಗಿರುವ ರಾಜ್ಯ ಸರ್ಕಾರ, ಕ್ವಾರಂಟೈನ್ ವ್ಯವಸ್ಥೆಯನ್ನು ಬಲಪಡಿಸುವ ಜತೆಗೆ ತಪಾಸಣೆಯ ವಿಧಾನದಲ್ಲಿ ಮಾರ್ಪಾಡು ಮಾಡಿದೆ. ‌

ವಿದೇಶಿ ಪ್ರಯಾಣಿಕರಿಂದಲೇ ಕೊರೊನಾ ಸೋಂಕು ದೇಶ ಹಾಗೂ ರಾಜ್ಯವನ್ನು ಪ್ರವೇಶಿಸಿದೆ. ಈ ಹಿನ್ನೆಲೆಯೊಳಗೆ ತಪಾಸಣೆ ಪದ್ಧತಿಯಲ್ಲಿ ಬದಲಾವಣೆ ಮಾಡಲು ಸರ್ಕಾರ ಕ್ರಮವಹಿಸಿದೆ.

ವಿಮಾನ ನಿಲ್ದಾಣಗಳು ಹಾಗೂ ಬಂದರುಗಳಲ್ಲಿಯೇವಿದೇಶದಿಂದ ಬಂದವರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆಗೆ ಒಳಪಡಿಸಲಾಗುತ್ತದೆ.ಆರೋಗ್ಯದ ಲಕ್ಷಣಗಳ ಅನುಸಾರ ಎ, ಬಿ ಹಾಗೂ ಸಿ ಎಂದು ವರ್ಗೀಕರಿಸಲಾಗುತ್ತದೆ. ಅವರ ಪ್ರಯಾಣದ ಇತಿಹಾಸ ಹಾಗೂ ವೈಯಕ್ತಿಕ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುತ್ತದೆ. ಪ್ರತಿಯೊಬ್ಬರೂ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳಿಂದ ಹೊರಹೋಗುವ ಮೊದಲು ಕಡ್ಡಾಯವಾಗಿ ‘ಆರೋಗ್ಯ ಸೇತು’ ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ರೋಗ ಲಕ್ಷಣಗಳನ್ನು ಹೊಂದಿರದ ಆರೋಗ್ಯವಂತ ವ್ಯಕ್ತಿಗಳಿಗೆ (ಸಿ ವರ್ಗ) ಮನೆಯಲ್ಲಿಯೇ 14 ದಿನಗಳು ಕ್ವಾರಂಟೈನ್‌ಗೆ ಒಳಗಾಗಗಲು ಕೈಗಗಳಿಗೆ ರಬ್ಬರ್‌ ಸ್ಟಾಂಪ್ ಮೂಲಕ ಮುದ್ರೆ ಹಾಕಲಾಗುತ್ತದೆ.

ರೋಗ ಲಕ್ಷಣಗಳನ್ನು ಹೊಂದಿರುವ ಎ ವರ್ಗದ ಪ್ರಯಾಣಿಕರನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಟ್ಟಿರುವ ಪ್ರಥಮ ಆದ್ಯತಾ ಆಸ್ಪತ್ರೆಗಳು ಅಥವಾ ನಿಗದಿತ ಹೋಟೆಲ್‌ಗಳಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಅವರ ಗಂಟಲ ದ್ರವದ ಮಾದರಿಗಳನ್ನು ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಸೋಂಕು ತಗುಲಿರುವುದು ದೃಢಪಟ್ಟಲ್ಲಿ ಅವರನ್ನು ಕೋವಿಡ್‌ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗುತ್ತದೆ. ಸೋಂಕು ಇಲ್ಲ ಎನ್ನುವುದು ತಿಳಿದುಬಂದಲ್ಲಿ ವ್ಯಕ್ತಿ ಇದ್ದಲ್ಲಿಯೇ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತದೆ. 5 ಅಥವಾ 7 ದಿನ ಹಾಗೂ 12ನೇ ದಿನ ಪುನಃ ಅವರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಸೋಂಕು ಇಲ್ಲ ಎನ್ನುವುದು ದೃಢಪಟ್ಟಲ್ಲಿ 14 ದಿನಗಳ ಬಳಿಕ ಮನೆಗೆ ಕಳುಹಿಸಿ, ಮುಂದಿನ 14 ದಿನಗಳು ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಲು ಸೂಚಿಸಲಾಗುತ್ತದೆ.

ರೋಗ ಲಕ್ಷಣ ಹೊಂದಿರದಿದ್ದರೂ ಅಸ್ವಸ್ಥಗೊಂಡಿರುವವರು ಹಾಗೂ 60 ವರ್ಷ ಮೇಲ್ಪಟ್ಟವರನ್ನು ಬಿ ವರ್ಗ ಎಂದು ವಿಂಗಡಿಸಿ, ಹೋಟೆಲ್‌ಗಳಲ್ಲಿ 14 ದಿನಗಳು ಕ್ವಾರಂಟೈನ್‌ ಮಾಡಲಾಗುತ್ತದೆ. ಅವರಿಗೆ ಕೂಡ ಎ ವರ್ಗದವರಿಗೆ ಮಾಡಿದ ರೀತಿಯಲ್ಲಿಯೇ ಪರೀಕ್ಷೆ ಮಾಡಲಾಗುತ್ತದೆ. ಅವರನ್ನು ಇರಿಸಲಾದ ಹೋಟೆಲ್‌ಗಳಲ್ಲಿ ವಾರದ ಎಲ್ಲ ದಿನ 24 ಗಂಟೆಗಳೂ ಶುಶ್ರೂಷಕರು ಸೇರಿದಂತೆ ಆರೋಗ್ಯ ಸಿಬ್ಬಂದಿ ಇರುತ್ತಾರೆ. ಸಿ ವರ್ಗದವರು ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಟ್ಟರೂ ಅವರ ಗಂಟಲ ದ್ರವದ ಪರೀಕ್ಷೆಯನ್ನೂ ಮೂರು ಬಾರಿ ಮಾಡಲಾಗುತ್ತದೆ.

ಆ್ಯಂಬುಲೆನ್ಸ್ ಸೇವೆ

ಎ ವರ್ಗದ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳು ಹಾಗೂ ಬಂದರುಗಳಿಂದ ಆ್ಯಂಬುಲೆನ್ಸ್ ಮೂಲಕವೇ ನಿಗದಿತ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿಕೊಳ್ಳಲಾಗುತ್ತದೆ. ಬಿ ವರ್ಗದ ಪ್ರಯಾಣಿಕರಿಗೆ ಕ್ವಾರಂಟೈನ್‌ ಕೇಂದ್ರಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಸಿ ವರ್ಗದ ಪ್ರಯಾಣಿಕರು ತಮ್ಮ ಸ್ವಂತ ಅಥವಾ ಬಾಡಿಗೆ ವಾಹನಗಳ ಮೂಲಕ ಮನೆಗೆ ತೆರಳಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT