ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಗಳ ವ್ಯತ್ಯಾಸ ಬದಿಗಿಟ್ಟು ಮನುಕುಲದ ಸೇವೆಗೆ ಒಗ್ಗಟ್ಟಾಗಿ ನಿಲ್ಲಬೇಕು: ಡಿಕೆಶಿ

Last Updated 6 ಏಪ್ರಿಲ್ 2020, 11:21 IST
ಅಕ್ಷರ ಗಾತ್ರ

ಬೆಂಗಳೂರು: 'ಕೊರೋನಾ ಇಡೀ ಮಾನವ ಸಂಕುಲಕ್ಕೆ ಅಪಾಯ ತಂದೊಡ್ಡಿರುವ ಹಿನ್ನೆಲೆಯಲ್ಲಿ ನಾವೆಲ್ಲರೂ ಪಕ್ಷ, ಧರ್ಮಗಳ ವ್ಯತ್ಯಾಸ ಬದಿಗಿಟ್ಟು ಒಟ್ಟಾಗಿ ಹೋರಾಟ ನಡೆಸಬೇಕಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಪಕ್ಷದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಅವರು, ‘ಕರ್ನಾಟಕದಲ್ಲಿ ಮೊದಲ ಬಾರಿಗೆ ಮಾಜಿ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಜವಾಬ್ದಾರಿ ನಿಭಾಯಿಸಿದ ಎಲ್ಲ ಮಾಜಿ ಸಚಿವರು, ವೈದ್ಯಕೀಯ ಮಾಡಿರುವ ಶಾಸಕರುಗಳು ಹಾಗೂ ಪಕ್ಷದ ಕಾರ್ಯಕರ್ತರನ್ನು ಒಳಗೊಂಡು ಸಮಿತಿ ರಚಿಸಿದ್ದೇವೆ. ಅವರು ವಿವಿಧ ವಿಭಾಗಗಳನ್ನು ಮಾಡಿಕೊಂಡು ಈ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬೇಕು ಎಂದು ಕೂತು ಚರ್ಚೆ ನಡೆಸಿ ಸಲಹೆ ನೀಡುತ್ತಿದ್ದಾರೆ' ಎಂದರು.

'ಅವರ ಸಲಹೆ ಮೇರೆಗೆ ಶಾಸಕರಾದ ಕೃಷ್ಣಭೈರೇಗೌಡರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ವಾರ್ ರೂಮ್ ಅನ್ನು ಆರಂಭಿಸಿದ್ದೇವೆ. ಅವರು ಪ್ರತಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಾರ್ ರೂಮ್ ರಚನೆ ಮಾಡಿಸಿ ಜನರಿಂದ ಸಮಸ್ಯೆ ಹಾಗೂ ಅವರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ನಂತರ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಅಗತ್ಯವಿರುವ ಜನರಿಗೆ ಸಹಾಯ, ಆಹಾರ ವಿತರಣೆ ಸೇರಿದಂತೆ ಆರೋಗ್ಯ ರಕ್ಷಣೆಗೆ ಬೇಕಾಗಿರುವ ಸಾಮಾಗ್ರಿ ಹಂಚುತ್ತಿದ್ದಾರೆ. ಈ ಮೂಲಕ ನಮ್ಮ ವಾರ್ ರೂಮ್ ಮತ್ತು ಕಾರ್ಯಪಡೆ ಜನರಿಗೆ ಸಹಾಯ ಹಸ್ತವಾಗಿ ಕಾರ್ಯನಿರ್ವಹಿಸುತ್ತಿದೆ' ಎಂದು ಡಿಕೆಶಿ ತಿಳಿಸಿದ್ದಾರೆ.

ಈ ಮಧ್ಯೆ ಸಾಕಷ್ಟು ಸರ್ಕಾರೇತ್ತರ ಸಂಸ್ಥೆಗಳು, ಸಂಘಟನೆಗಳು ಏನನ್ನೂ ಅಪೇಕ್ಷಿಸದೇ ಮಾನವೀಯ ಸೇವೆ ನೀಡುತ್ತಿವೆ. ಈ ಸಂಘ ಸಂಸ್ಥೆಗಳ ಜತೆಗೆ ಆರೋಗ್ಯ, ಪೊಲೀಸ್, ಪೌರ ಕಾರ್ಮಿಕರು ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕೊರೊನಾ ಸೋಂಕಿನ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹ ಮಾಡಿದ್ದೆ ಎಂದಿರುವ ಡಿಕೆಶಿ, 'ತಕ್ಷಣ ಮುಖ್ಯಮಂತ್ರಿಗಳು ಸ್ಪಂದಿಸಿ ಎಲ್ಲ ಪಕ್ಷಗಳ ನಾಯಕರ ಸಭೆ ಕರೆದು ನಮ್ಮ ಅಹವಾಲು ಹಾಗೂ ಸಲಹೆಗಳನ್ನು ಸ್ವೀಕರಿಸಿದ್ದಾರೆ. ನಾವು ನಮ್ಮ ವಿಚಾರಗಳನ್ನು ಸರ್ಕಾರಕ್ಕೆ ತಿಳಿಸಿದ್ದೆವು. ನಿಮ್ಮಲ್ಲಿರುವ ಗೊಂದಲ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಬೇಕು. ನಮ್ಮಂತ ವಿರೋಧ ಪಕ್ಷಗಳೇ ಸಹಕರಿಸುತ್ತಿರುವಾಗ ಸರ್ಕಾರದಲ್ಲಿ ಭಿನ್ನಭಿಪ್ರಾಯ ಇರಬಾರದು ಎಂದು ಹೇಳಿದ್ದೆವು. ಅದಕ್ಕೂ ಅವರು ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರಕ್ಕೂ ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಒತ್ತಾಯ ಮಾಡಿದ್ದೆ. ಅಲ್ಲೂ ಕೂಡ ಪ್ರಧಾನಿಗಳು ಈಗಾಗಲೇ ನಮ್ಮ ನಾಯಕರ ಬಳಿ ಮಾತನಾಡುತ್ತಿದ್ದಾರೆ. ಸರ್ವಪಕ್ಷ ಸಭೆಯನ್ನೂ ಕರೆದಿದ್ದಾರೆ. ವಿರೋಧ ಪಕ್ಷಗಳ ಮಾತನ್ನು ಅವರು ಪರಿಗಣಿಸುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.

ಈ ವಿಚಾರದಲ್ಲಿ ನಾವು ರಾಜಕಾರಣ ಮಾಡುವುದರಲ್ಲಿ ಅರ್ಥವಿಲ್ಲ. ವಿಎಚ್‌ಪಿ, ಆರೆಸ್ಸೆಸ್ ಸೇರಿದಂತೆ ಇತರೆ ಸಂಘಟನೆಗಳು ರಾಜಕೀಯ ಹೇಳಿಕೆ ನೀಡುತ್ತಿರಬಹುದು. ಮತ್ತೆ ಕೆಲವರು ತಪ್ಪು ಮಾಹಿತಿ ಹರಿಬಿಟ್ಟು ಅಭಿಯಾನ ಮಾಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ದಯವಿಟ್ಟು ಇದನ್ನು ನಿಯಂತ್ರಣ ಮಾಡಿ. ಪಕ್ಷ, ಧರ್ಮ ಎಲ್ಲ ವ್ಯತ್ಯಾಸ ಬಿಟ್ಟು ಮಾನವ ಸೇವೆಗೆ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ಡಿ.ಕೆ.ಶಿವಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT