ಭಾನುವಾರ, ಜುಲೈ 25, 2021
27 °C
ಪ್ರಧಾನಿ ಹೇಳಿದ್ದಾರೆ ಎಂಬ ಕಾರಣಕ್ಕೆ ಒಪ್ಪುವುದು ಅಸಾಧ್ಯ: ಡಿಕೆಶಿ

ಕೋವಿಡ್-19‌: ರಾಜ್ಯದಿಂದ ಕಲಿಯುವುದೇನಿದೆ?

ವೈ.ಗ. ಜಗದೀಶ್ Updated:

ಅಕ್ಷರ ಗಾತ್ರ : | |

‘ಕೋವಿಡ್ ನಿಯಂತ್ರಣದಲ್ಲಿ ಕರ್ನಾಟಕ ಮಾದರಿ ಹೇಗಾಗಲು ಸಾಧ್ಯ? ಪ್ರಧಾನಿ ಹೇಳಿದ್ದಾರೆ ಎಂಬ ಕಾರಣಕ್ಕೆ ಅದನ್ನು ಒಪ್ಪಲು ಸಾಧ್ಯವೇ ಇಲ್ಲ. ಇಲ್ಲಿಂದ ಬೇರೆ ರಾಜ್ಯಗಳು ಕಲಿಯುವುದು ಏನಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಶನಿವಾರ ಕುಟುಕಿದ್ದಾರೆ.

‘ಕೊರೊನಾ, ರಾಜ್ಯದಲ್ಲಿ ಒಂದಿಷ್ಟಾದರೂ ನಿಯಂತ್ರಣ ವಾಗಿದ್ದರೆ ಅದು ಇಲ್ಲಿರುವ ತಜ್ಞರು, ವೈದ್ಯರ ಕೊಡುಗೆಯೇ
ವಿನಃ ಸರ್ಕಾರದ್ದಲ್ಲ. ಸಚಿವರ ನಡುವೆ ಹೊಂದಾಣಿಕೆಯೇ ಇಲ್ಲ. ಇಲ್ಲಿನ ವಾಸ್ತವ ಬೇರೆಯೇ ಇದೆ’ ಎಂದರು.

‘ಪ್ರಜಾವಾಣಿ’ ಕಚೇರಿಗೆ ಭೇಟಿ ನೀಡಿದ್ದ ಅವರು, ದೇಶ–ರಾಜ್ಯದ ವಿದ್ಯಮಾನಗಳು, ಭವಿಷ್ಯದ ಸವಾಲುಗಳ ಕುರಿತು ‘ವಿಶೇಷ ಸಂದರ್ಶನ’ದಲ್ಲಿ ಮಾತನಾಡಿದ್ದಾರೆ. 

* ಪಕ್ಷ ಅಧಿಕಾರಕ್ಕೆ ತರಲು ನಿಮ್ಮ ಕಾರ್ಯಸೂಚಿ?

ಡಿಕೆಶಿ: ನಾವು ಹಿಂದೆ ಒಳ್ಳೆಯ ಸರ್ಕಾರ ಕೊಟ್ಟಿದ್ದೆವು. ಆಗ ಆದ ಕೆಲವು ತಪ್ಪುಗಳಿಂದ ಜನ ನಮ್ಮ ಕೈಹಿಡಿಯಲಿಲ್ಲ. ತಪ್ಪುಗಳೇನು ಎಂದು ಗುರುತಿಸಿದ್ದೇವೆ. ನಮ್ಮಿಂದ ದೂರವಾದ ಸಮುದಾಯವನ್ನು ಸಂಪೂರ್ಣವಾಗಿ ಸೆಳೆಯಲು ಆಗದಿದ್ದರೂ ಅವರಲ್ಲಿ ಹೆಚ್ಚಿನವರನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳುವ ವಿಶ್ವಾಸ ಇದೆ. ಅದ್ಭುತ ಅವಕಾಶ ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. 18ರಿಂದ 42 ವರ್ಷ ದವರು ಶೇ 65ರಷ್ಟಿದ್ದಾರೆ. ಅವರನ್ನು ಒಳಗೊಳ್ಳುವುದು ನಮ್ಮ ಮುಂದಿನ ಗುರಿ. ಮತಗಟ್ಟೆ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಸಿದ್ಧತೆ ನಡೆಸಿದ್ದೇವೆ. ಸಾಮಾನ್ಯ ಕಾರ್ಯಕರ್ತನಾಗಿ ಕೆಳಹಂತದಲ್ಲಿ ನಮ್ಮ ಪರ ಧ್ವನಿ ಎತ್ತುವ ಕಾರ್ಯಕರ್ತರ ಪಡೆ ಕಟ್ಟುವ ಕೆಲಸಕ್ಕೆ ಕೈ ಹಾಕಿದ್ದೇನೆ.

* ಯುವಕರಿಗೆ ಆದ್ಯತೆ ಎಂದು ಹೇಳುತ್ತೀರಿ; ಮೇಲ್ಮನೆಯಲ್ಲಿ ಖರ್ಗೆ, ಹರಿಪ್ರಸಾದ್, ನಜೀರ್‌ಗೆ ಮತ್ತೆ ಅವಕಾಶ ಕೊಟ್ಟಿದ್ದು ಯಾಕೆ?

ಡಿಕೆಶಿ: ಮೇಲ್ಮನೆ ಎಂದರೆ ಅದು ಹಿರಿಯರ ಮನೆ. ಖರ್ಗೆ ಅವರು 50 ವರ್ಷದ ಅನುಭವ ಹೊಂದಿದ್ದಾರೆ. ರಾಜ್ಯಸಭೆಯಲ್ಲಿ ನಮ್ಮ ಪಕ್ಷದ ಧ್ವನಿಯಾಗಲಿದ್ದಾರೆ. ಏಕೆಂದರೆ ಇದು ಶಾಂತಿಯ ಕಾಲವಲ್ಲ. ದೇಶ ಹಾಗೂ ರಾಜ್ಯದ ರಾಜಕಾರಣ, ನೀತಿ ನಿರೂಪಣೆ ವಿಷಯದಲ್ಲಿ ಇದು ಯುದ್ಧದ ಕಾಲ. ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್‌, ಬಿಜೆಪಿಯ ಮೂರು ಸಿದ್ಧಾಂತದವರು ಸೇರಿ ಅಧಿಕಾರ ನಡೆಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ನಮ್ಮ ಪಕ್ಷದ ಒಲವು–ನಿಲುವು ಪ್ರತಿಪಾದಿಸಲು ಹರಿಪ್ರಸಾದ್ ಅಂತಹ ಸಮರ್ಥರು ಬೇಕಲ್ಲವೇ? ಒಂದು ಕಾಲದಲ್ಲಿ ಈಡಿಗ/ಬಿಲ್ಲವ ಸಮುದಾಯದ ಆರು ಸಂಸದರಿದ್ದರು. ಎಂದಿಗೂ ಕಾಂಗ್ರೆಸ್ ಜತೆಗೇ ಇರುವ ಈ ಸಮುದಾಯಕ್ಕೆ ಪ್ರಾತಿನಿಧ್ಯವನ್ನೂ ಕೊಡಬೇಕಲ್ಲವೇ?

* ಎಡಗೈ ಸಮುದಾಯದವರಿಗೆ ಬಿಜೆಪಿ ಕೊಟ್ಟ ಆದ್ಯತೆ ಕಾಂಗ್ರೆಸ್‌ ಕೊಟ್ಟಿಲ್ಲ ಎಂಬ ಭಾವನೆ ಇದೆಯಲ್ಲ?

ಡಿಕೆಶಿ: ಅದು ನಿಮ್ಮ ಗ್ರಹಿಕೆ ಅಷ್ಟೇ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಪರಿಶಿಷ್ಟ ಜಾತಿ/ಪಂಗಡದವರಿಗೆ ವಿಶೇಷ ಅನುದಾನ ನೀಡಲು ಕಾಯ್ದೆಯನ್ನೇ ತಂದಿದ್ದೆವು. ಲೋಕಸಭೆ ಚುನಾವಣೆಯಲ್ಲಿ ಬಲಗೈ–ಎಡಗೈನವರಿಗೆ ತಲಾ ಎರಡು ಸ್ಥಾನ ನೀಡಲಾಗಿತ್ತು. ಎಲ್ಲ ಸಮುದಾಯದವರಿಗೆ ಪ್ರಾತಿನಿಧ್ಯ ಕೊಟ್ಟಿರುವುದು ಕಾಂಗ್ರೆಸ್‌ ಮಾತ್ರ.

* ಸಿದ್ದರಾಮಯ್ಯ ನಿಮಗೆ ಸಹೋದ್ಯೋಗಿಯೇ, ಸಹಸ್ಪರ್ಧಿಯೇ?

ಡಿಕೆಶಿ: ಸಿದ್ದರಾಮಯ್ಯನವರು ಅತ್ಯಂತ ಹಿರಿಯರು. ಅವರ ಅನುಭವ, ಜ್ಞಾನ ಅಪಾರ. ಅವರ ಸಂಪುಟದಲ್ಲಿ ಸಚಿವನಾಗಿದ್ದೆ. ಅವರು ನಮ್ಮ ನಾಯಕರು ಹಾಗೂ ಸಹೋದ್ಯೋಗಿ. ನಮ್ಮ ಪಕ್ಷದಲ್ಲಿ ಪವರ್ ಸೆಂಟರ್ ಇಲ್ಲ. ಇರೋದು ಒಂದೇ ಕಾಂಗ್ರೆಸ್ ಪವರ್‌. ವ್ಯಕ್ತಿಪೂಜೆ ಬಿಟ್ಟು ಪಕ್ಷಪೂಜೆ ಮಾಡೋಣ ಎಂಬುದು ಕಾರ್ಯಕರ್ತರಲ್ಲಿ ನನ್ನ ಮನವಿ.  ಐದು ಬೆರಳು ಒಂದಾದರೆ ಮಾತ್ರ ಈ ಹಸ್ತಕ್ಕೆ ಬಲ ಬರುವುದು. ಹೊಲಿಗೆ ಹಾಕಿ ಒಂದುಗೂಡಿಸುವುದು ಕಾಂಗ್ರೆಸ್ ಸಂಸ್ಕೃತಿಯೇ ವಿನಃ ಯಾರನ್ನೂ ಇಬ್ಭಾಗ ಮಾಡುವುದಲ್ಲ. 

* ಜೆಡಿಎಸ್‌ಗೂ ನಿಮಗೂ ಹಾವು–ಮುಂಗುಸಿ ಸಂಬಂಧ ಇತ್ತು. ಮೈತ್ರಿ ಸರ್ಕಾರದಲ್ಲಿ ಅಣ್ತಮ್ಮರಂತೆ ಇದ್ದೀರಿ. ಮುಂದೆ.?

ಡಿಕೆಶಿ: ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ತಲೆಬಾಗಿದ್ದೆವು. ಅದು ದೇಶದ ಹಿತದೃಷ್ಟಿಯಿಂದ ಆಗಿದ್ದ ಮೈತ್ರಿ. ವೈಯಕ್ತಿಕವಾಗಿ ನಮ್ಮ ಬಾಂಧವ್ಯ ಈಗಲೂ ಚೆನ್ನಾಗಿದೆ. ಎರಡೂ ಪಕ್ಷಗಳ ಸಿದ್ಧಾಂತಗಳು ಬೇರೆ. ಸೈದ್ಧಾಂತಿಕ ರಾಜಕೀಯದ ವಿಷಯದ ಬಂದಾಗ ಒಂದಾಗಿ ಕೆಲಸ ಮಾಡುತ್ತೇವೆ. ಸಂಘಟನೆ ವಿಷಯದಲ್ಲಿ ಬೇರೆಯದೇ ಲೆಕ್ಕಾಚಾರಗಳು ಇರುತ್ತವೆ.

* ಮೈತ್ರಿ ಸರ್ಕಾರ ಬೀಳಲು ಅತೃಪ್ತ ಶಾಸಕರು, ಸಿದ್ದರಾಮಯ್ಯ, ಪರಮೇಶ್ವರ, ಕುಮಾರಸ್ವಾಮಿ ಇವರಲ್ಲಿ ಯಾರು ಪ್ರಧಾನ ಕಾರಣ?

ಡಿಕೆಶಿ: ಅದರ ಬಗ್ಗೆ ಇನ್ನೊಮ್ಮೆ ಸುದೀರ್ಘವಾದ ಕತೆ ಹೇಳುತ್ತೇನೆ. ಈಗ ಬೇಡ.

* ಮೈತ್ರಿ ಸರ್ಕಾರದ‌ ಕಹಿ ಘಟನೆ?

ಡಿಕೆಶಿ: ಹೆಚ್ಚೇನೂ ಹೇಳಲಾರೆ. ನಮ್ಮ ನೆರಳನ್ನೇ ನಾವು ನಂಬಲಾರದ ಸ್ಥಿತಿ ಬಂದರೆ ಹೇಗಿರಬೇಡ. ಊಹಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು