ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಫೋನ್–ಇನ್ | ಕೃಷಿ ಉತ್ಪನ್ನ ಸಾಗಣೆಗೆ ಅಭಯ ನೀಡಿದ ಸಚಿವ

ಪೊಲೀಸರಿಗೆ ಸಹಕಾರ, ಕೃಷಿ ಮಾರುಕಟ್ಟೆ ಸಚಿವ ಎಸ್‌.ಟಿ. ಸೋಮಶೇಖರ್‌ ಕಟ್ಟಪ್ಪಣೆ
Last Updated 13 ಏಪ್ರಿಲ್ 2020, 1:25 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಸಂದರ್ಭದಲ್ಲೂ ರೈತರು ಹಣ್ಣು, ತರಕಾರಿ ಸೇರಿದಂತೆ ಯಾವುದೇ ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳ ಸಂಚಾರಕ್ಕೆ ಪೊಲೀಸರು ಅಡ್ಡಿಪಡಿಸಬಾರದು ಎಂದು ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವ ಎಸ್‌.ಟಿ.ಸೋಮಶೇಖರ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಪ್ರಜಾವಾಣಿ’ಯು ಭಾನುವಾರ ಆಯೋಜಿಸಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ರೈತರ ಅಹವಾಲು ಆಲಿಸಿದ ಸಚಿವರು, ‘ಸರ್ಕಾರ ರೈತಪರ ನಿಲುವನ್ನು ಹೊಂದಿದೆ. ರೈತರಿಗೆ ತೊಂದರೆಯಾಗುವಂತಹ ಯಾವುದೇ ಕ್ರಮವನ್ನು ಸರ್ಕಾರ ಕೈಗೊಳ್ಳುವುದಿಲ್ಲ’ ಎಂದು ಭರವಸೆ ನೀಡಿದರು.

ರಾಜ್ಯದ ವಿವಿಧ ಕಡೆಗಳಿಂದ ರೈತರು ಕರೆ ಮಾಡಿ, ‘ಬೆಳೆಗಳನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸುತ್ತಿದ್ದೇವೆ. ಕೃಷಿ ಉತ್ಪನ್ನ ಸಾಗಿಸುವ ವಾಹನಗಳ ಸಂಚಾರಕ್ಕೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

ರೈತರಿಗೆ ಅಭಯ ನೀಡಿದ ಸಚಿವರು, ‘ಜನರ ಮನೆ ಬಾಗಿಲಿಗೆ ಕೃಷಿ ಉತ್ಪನ್ನವನ್ನು ಕೊಂಡೊಯ್ದು ನೇರವಾಗಿ ಮಾರಾಟ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಇಷ್ಟಾಗಿಯೂ ಪೊಲೀಸರು ಕೃಷಿ ಉತ್ಪನ್ನ ಸಾಗಾಟಕ್ಕೆ ಅಡ್ಡಿಪಡಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.

‘ಬೆಳೆಗಳನ್ನು ಮಾರಾಟ ಮಾಡಲಾಗುತ್ತಿಲ್ಲ ಎಂದು ರೈತರು ಹತಾಶರಾಗಬೇಕಿಲ್ಲ. ಅವರ ಅನುಕೂಲಕ್ಕಾಗಿಯೇ ಎಲ್ಲ ಎಪಿಎಂಸಿಗಳಲ್ಲೂ ವಹಿವಾಟು ಮುಂದುವರಿಸಲಾಗಿದೆ. ಹಣ್ಣು ತರಕಾರಿಗಳನ್ನು ಹಾಪ್‌ಕಾಮ್ಸ್‌ ಮೂಲಕವೂ ಮಾರಾಟ ಮಾಡಲು ಅನುವು ಮಾಡಿಕೊಡಲಾಗಿದೆ. ರೈತರು ಬೆಳೆಗಳನ್ನು ನಾಶಪಡಿಸುವಂತಹ ದುಡುಕಿನ ನಿರ್ಧಾರಕ್ಕೆ ಮುಂದಾಗಬಾರದು’ ಎಂದು ಮನವಿ ಮಾಡಿದರು.

‘ರೈತರ ಉತ್ಪನ್ನಗಳನ್ನು ಸಾಗಿಸುವ ವಾಹನಗಳಿಗೆ ಕೃಷಿ ಇಲಾಖೆ ಹಾಗೂ ಹಾಪ್‌ಕಾಮ್ಸ್‌ ವತಿಯಿಂದ ಹಸಿರು ಪಾಸ್‌ಗಳನ್ನು ವಿತರಿಸಲಾಗುತ್ತಿದೆ. ಅದನ್ನು ಬಳಸಿ ಆಸುಪಾಸಿನ ತಾಲ್ಲೂಕುಗಳಲ್ಲಿ ಹಾಗೂ ಹೊರ ಜಿಲ್ಲೆಗಳಿಗೂ ಕೃಷಿ ಉತ್ಪನ್ನವನ್ನು ಸಾಗಿಸಿ ಮಾರಾಟ ಮಾಡಬಹುದು. ಪಾಸ್‌ ಇಲ್ಲ ಎಂಬ ಕಾರಣಕ್ಕೆ ಹಣ್ಣು– ತರಕಾರಿ ಸಾಗಿಸುವ ವಾಹನಗಳ ಸಂಚಾರ ನಿರ್ಬಂಧಿಸಬಾರದು ಎಂದೂ ಸೂಚನೆ ನೀಡಲಾಗಿದೆ’ ಎಂದು ಸಚಿವರು ಸ್ಪಷ್ಟಪಡಿಸಿದರು.

‘ಸಾಲದ ಕಂತು ವಸೂಲಿಗೆ ಮುಂದಾದರೆ ಕ್ರಮ’

‘ಕೊರೊನಾ ಸೋಂಕು ಹರಡದಂತೆ ತಡೆಯಲು ರಾಜ್ಯದಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಬ್ಯಾಂಕ್‌ಗಳು ಹಾಗೂ ಸಹಕಾರಿ ಬ್ಯಾಂಕ್‌ಗಳ ಸಾಲ ಮರುಪಾವತಿ ಅವಧಿಯನ್ನು ಮೂರು ತಿಂಗಳು ಮುಂದೂಡಲಾಗಿದೆ. ಈ ಅವಧಿಯಲ್ಲಿ ಸಾಲದ ಕಂತು ವಸೂಲಿ ಮಾಡಲು ಹಾಗೂ ಸಾಲ ಮರುಪಾವತಿಗೆ ಒತ್ತಾಯಿಸಿ ನೋಟಿಸ್‌ ನೀಡುವಂತಿಲ್ಲ. ಇಷ್ಟಾಗಿಯೂ ಸಾಲದ ಅಸಲು, ಬಡ್ಡಿ ಅಥವಾ ಕಂತು ಮರುಪಾವತಿಗೆ ಬಲವಂತಪಡಿಸಿದರೆ ಇಲಾಖೆಯ ಗಮನಕ್ಕೆ ತರಬಹುದು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಸೋಮಶೇಖರ್‌ ಸ್ಪಷ್ಟಪಡಿಸಿದರು.

ಅಧಿಕ ಬಡ್ಡಿ– ಆತಂಕ ಬೇಡ

‘ಸಾಲ ಮರುಪಾವತಿ ಮುಂದೂಡಿರುವ ಅವಧಿಗೆ ಹೆಚ್ಚಿನ ಬಡ್ಡಿ ವಿಧಿಸಲಾಗುತ್ತದೆ ಎಂಬ ಆತಂಕ ಬೇಡ. ಇಂತಹ ವದಂತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಅಲ್ಪಾವಧಿ ಕೃಷಿ ಸಾಲ ಪಡೆದ ರೈತರೊಬ್ಬರ ಪ್ರಶ್ನೆಗೆ ಉತ್ತರಿಸಿದರು.

‘ಹೊಲಕ್ಕೆ ಹೋಗಲು ಪಾಸ್ ಬೇಕಿಲ್ಲ’

‘ಲಾಕ್‌ಡೌನ್‌ನಿಂದ ಕೃಷಿ ಕಾರ್ಯಕ್ಕೆ ಯಾವುದೇ ಅಡ್ಡಿ ಇಲ್ಲ. ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ರೈತರು ಹೊಲಗಳಲ್ಲಿ, ತೋಟಗಳಲ್ಲಿ ಕಾಯಕವನ್ನು ಮುಂದುವರಿಸಬಹುದು. ಹೊಲಗಳಿಗೆ ಅಥವಾ ತೋಟಗಳಿಗೆ ಹೋಗುವುದಕ್ಕೆ ಯಾವುದೇ ಪಾಸ್‌ನ ಅಗತ್ಯವೂ ಇಲ್ಲ. ಈ ಬಗ್ಗೆ ಆತಂಕಗಳಿದ್ದರೆ ಕೃಷಿ ಇಲಾಖೆ ಅಥವಾ ಹಾಪ್‌ಕಾಮ್ಸ್‌ ವತಿಯಿಂದ ನೀಡುವ ಹಸಿರು ಪಾಸ್‌ ಪಡೆದು ಕೆಲಸದಲ್ಲಿ ತೊಡಗಿಕೊಳ್ಳಬಹುದು’ ಎಂದು ಸಚಿವರು ತಿಳಿಸಿದರು.

‘ರಸಗೊಬ್ಬರ ಕೊರತೆ ಇಲ್ಲ’

‘ಲಾಕ್‌ಡೌನ್‌ ವೇಳೆಯೂ ರಸಗೊಬ್ಬರದ ಕೊರತೆ ಆಗದಂತೆ ಎಚ್ಚರವಹಿಸಲಾಗಿದೆ. ರಾಜ್ಯದಲ್ಲಿ ಸದ್ಯ 1.58 ಲಕ್ಷ ಟನ್‌ ರಸಗೊಬ್ಬರ ದಾಸ್ತಾನಿದೆ. ಇನ್ನೂ 1.10 ಲಕ್ಷ ಟನ್‌ ಗೊಬ್ಬರ ಖರೀದಿ ಮಾಡಲಾಗುತ್ತಿದೆ’ ಎಂದು ಸೋಮಶೇಖರ್ ತಿಳಿಸಿದರು.

‘ಅಂಗಡಿಯವರು ನಿಗದಿತ ಬೆಲೆಗಿಂತ ಹೆಚ್ಚು ದರಕ್ಕೆ ರಸಗೊಬ್ಬರ ಮಾರಾಟ ಮಾಡಿದರೆ ದೂರು ಕೊಡಿ. ಅಂತಹ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT