ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19: ಮುಂದಿನ ಎರಡು ತಿಂಗಳು ನಿರ್ಣಾಯಕ ಎಂದ ತಜ್ಞರು

ಸಮುದಾಯಕ್ಕೆ ವ್ಯಾಪಿಸಿತಾ ಕೋವಿಡ್? * ರ್‍ಯಾಂಡಮ್ ಪರೀಕ್ಷೆ ನಡೆಸಲು ತಜ್ಞರ ಸಲಹೆ
Last Updated 23 ಜೂನ್ 2020, 19:46 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಿರುವುದರಿಂದ ಸೋಂಕು ಸಮುದಾಯಕ್ಕೆ ಹರಡಿದೆಯೇ ಎಂಬ ಅನುಮಾನ ಮೂಡಿದೆ.

ಮಾರುಕಟ್ಟೆ ಸೇರಿದಂತೆ ಜನದಟ್ಟಣೆ ಇರುವ ಪ್ರದೇಶಗಳೇ ಸೋಂಕು ಹರಡುವ ತಾಣಗಳಾಗಿದ್ದು, ಇನ್ನು ಎರಡು ತಿಂಗಳು ಅತ್ಯಂತ ನಿರ್ಣಾಯಕ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಎಚ್ಚರಿಸಿದ್ದಾರೆ.

ಲಾಕ್ ಡೌನ್ ನಿಯಮಗಳನ್ನು ಸಡಿಲಿಸಿದ ಬೆನ್ನಲ್ಲಿಯೇ ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಏರುಗತಿ ಪಡೆದಿದೆ. ಬಹುತೇಕ ಪ್ರಕರಣಗಳಲ್ಲಿ ಹೇಗೆ ಸೋಂಕು ತಗುಲಿತು ಎನ್ನುವುದೇ ಪತ್ತೆಯಾಗುತ್ತಿಲ್ಲ.

ಈ ಮೊದಲು ಕೋವಿಡ್ ಪ್ರಕರಣ ವರದಿಯಾದ ಬಳಿಕ ಕಂಟೈನ್‌ಮೆಂಟ್ ವಲಯವನ್ನು ಗುರುತಿಸಿ, ಪೂರ್ಣ ವಾರ್ಡ್‌ಗಳನ್ನು ಅಥವಾ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಕಂಟೈನ್‌ಮೆಂಟ್ ಆಗಿ ಘೋಷಿಸಲಾಗುತ್ತಿತ್ತು. ನಂತರ ಇದನ್ನು ಸೋಂಕಿತ ವ್ಯಕ್ತಿಯ ಮನೆಗೆ ಮಾತ್ರ ಸೀಮಿತಗೊಳಿಸಲಾಯಿತು. ರೋಗಿಯ ಮನೆಯ ಸದಸ್ಯರನ್ನು ಕೂಡ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿ, ಕೋವಿಡ್ ಪರೀಕ್ಷೆ ನಡೆಸುತ್ತಿಲ್ಲ. ಮನೆ ಕ್ವಾರಂಟೈನ್‌ಗೆ ಒಳಪಟ್ಟವರು ಹೊರಗಡೆ ಓಡಾಟ ನಡೆಸಿದರೂ ಅಂಥವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.

ರ್‍ಯಾಂಡಮ್ ಪರೀಕ್ಷೆ ಇಲ್ಲ

ಲಾಕ್‌ ಡೌನ್‌ ಅವಧಿಯಲ್ಲಿ ಪಾದರಾಯನಪುರ, ಹೊಂಗಸಂದ್ರ ಸೇರಿದಂತೆ ಕೆಲವೆಡೆ ಮಾತ್ರ ಬಿಬಿಎಂಪಿ ರ್‍ಯಾಂಡಮ್ ಪರಿಕ್ಷೆ ನಡೆಸಿತ್ತು. ಲಾಕ್‌ ಡೌನ್‌ ಸಡಿಲಿಸಿದ ಬಳಿಕ ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೂ ರ್‍ಯಾಂಡಮ್‌ ಪರೀಕ್ಷೆ ನಡೆಸುತ್ತಿಲ್ಲ. ಆರೋಗ್ಯ ಇಲಾಖೆ ಮಾರುಕಟ್ಟೆ ಸೇರಿದಂತೆ ವಿವಿಧ ಸ್ಥಳಗಳು ಹಾಗೂ ಸೂಪರ್ ಮಾರುಕಟ್ಟೆ, ಮಾಲ್‌ಗಳು ಸೇರಿದಂತೆ ವಿವಿಧ ವಾಣಿಜ್ಯ ಚಟುವಟಿಕೆ ತಾಣಗಳಲ್ಲಿನ ಸಿಬ್ಬಂದಿಗೆ ರ್‍ಯಾಂಡಮ್ ಪರೀಕ್ಷೆ ನಡೆಸುವಂತೆ ಸೂಚಿಸಿತ್ತು. ಆದರೆ, ಈವರೆಗೂ ರ್‍ಯಾಂಡಮ್ ಪರೀಕ್ಷೆ ಪ್ರಾರಂಭಿಸಿಲ್ಲ.

‘ಪ್ರಕರಣಗಳ ಸಂಖ್ಯೆ ಹೆಚ್ಚಳವಾದ್ದರಿಂದ ರೋಗಿಗಳ ಸಂಪರ್ಕಿತರನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ಫೀವರ್‌ ಕ್ಲಿನಿಕ್‌ಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜನರು ತಮ್ಮ ಜವಾಬ್ದಾರಿ ಅರಿತುಕೊಂಡು ಅಗತ್ಯ ಕ್ರಮತೆಗೆದುಕೊಳ್ಳಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಜನರ ಬೇಜವಾಬ್ದಾರಿ ಕಾರಣ

‘ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಲು ಜನರ ಬೇಜವಾಬ್ದಾರಿಯೇ ಪ್ರಮುಖ ಕಾರಣ. ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಂಡು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಬೆಂಗಳೂರು ನಗರ ಜಿಲ್ಲಾ ಶಸ್ತ್ರಚಿಕಿತ್ಸಕಡಾ. ಅನ್ಸರ್ ಅಹಮದ್ ತಿಳಿಸಿದರು.

‘ಇನ್ನು ಎರಡು ತಿಂಗಳು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಬಳಿಕ ಈ ಸೋಂಕು ದುರ್ಬಲವಾಗುತ್ತದೆ. ಹಾಗಾಗಿ ಕೆಲ ದಿನಗಳು ನಿರ್ಣಾಯಕ.ಮೂರು ತಿಂಗಳ ಬಳಿಕ ಪರಿಸ್ಥಿತಿ ಸುಧಾರಿಸಲಿದ್ದು, ಬಳಿಕ ಕೋವಿಡ್ ಸಾಮಾನ್ಯ ಜ್ವರದಂತೆ ಬಂದು ಹೋಗಲಿದೆ’ ಎಂದರು.

‌ರ್‍ಯಾಂಡಮ್‍ಪರೀಕ್ಷೆ ಅಗತ್ಯ

‘ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ರ್‍ಯಾಂಡಮ್ ಪರೀಕ್ಷೆಗಳನ್ನು ನಡೆಸಬೇಕು. ಆಗ ಸೋಂಕು ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ನಗರದಲ್ಲಿ ವರದಿಯಾಗುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸುತ್ತಿಲ್ಲ. ಹಾಗಂತ ಅವರಿಂದ ಇನ್ನೊಬ್ಬರಿಗೆ ಸೋಂಕು ಹರಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

‘ವ್ಯಾಪಾರಿಗಳು, ಪೊಲೀಸ್, ಬಿಎಂಟಿಸಿ ಹಾಗೂ ರೈಲ್ವೆ ಸಿಬ್ಬಂದಿ, ಅಗತ್ಯ ವಸ್ತುಗಳ ವಿತರಕರು, ಆಟೊ ಚಾಲಕರು ಸೇರಿದಂತೆ ವಿವಿಧ ವರ್ಗದವರನ್ನು ಪರೀಕ್ಷೆ ಮಾಡಬೇಕು. ಪ್ರಾರಂಭಿಕ ಹಂತದಲ್ಲಿಯೇ ಸೋಂಕಿತರನ್ನು ಗುರುತಿಸಿ, ಚಿಕಿತ್ಸೆ ನೀಡಿದಲ್ಲಿ ಇನ್ನೊಬ್ಬರಿಗೆ ಹರಡುವುದನ್ನು ತಪ್ಪಿಸಲು ಸಾಧ್ಯ’ ಎಂದರು.

ಅಧ್ಯಯನಗಳಿಂದ ದೃಢಪಟ್ಟಿಲ್ಲ

‘ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ ಎಂದು ಊಹಿಸಲಾಗುತ್ತಿದೆಯೇ ಹೊರತು ಅಧ್ಯಯನಗಳಿಂದ ದೃಢಪಟ್ಟಿಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೂಡ ಇದನ್ನು ಹೇಳಿಲ್ಲ. ಹಾಗಾಗಿ ಸೋಂಕು ಮೂರನೇ ಹಂತ ತಲುಪಿದೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.

‘ಈ ಮೊದಲು ಜ್ವರ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗೆ ಜನರು ಔಷಧಿ ಮಳಿಗೆಗಳಲ್ಲಿ ಮಾತ್ರೆ ಪಡೆದುಕೊಳ್ಳುತ್ತಿದ್ದರು. ಅಂತವರು ಸೋಂಕಿತರಾಗಿದ್ದರೂ ರೋಗನಿರೋಧಕ ಶಕ್ತಿ ಅಧಿಕವಾಗಿದ್ದಲ್ಲಿ ಗುಣಮುಖರಾಗುತ್ತಿದ್ದರು. ಆದರೆ, ಈಗ ಔಷಧಿ ಮಳಿಗೆಗಳಲ್ಲಿ ಮಾತ್ರೆ ಪಡೆದರೂ ಅವರ ಮಾಹಿತಿ ಸಂಗ್ರಹಿಸಿ, ಪತ್ತೆ ಮಾಡಲಾಗುತ್ತಿದೆ. ಇದರಿಂದಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT