ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಅಂತ್ಯಸಂಸ್ಕಾರದಿಂದ ಕೋವಿಡ್‌ ಹರಡದು

ತಪ್ಪು ತಿಳಿವಳಿಕೆಯಿಂದ ಪ್ರಮಾದ: ಭಯ ಬಿಡಿ–ವೈದ್ಯರ ಸಲಹೆ
Last Updated 10 ಜುಲೈ 2020, 2:53 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟವರ ಶವದ ಸಂಸ್ಕಾರದ ನಂತರವೂ ಸೋಂಕು ಹರಡುತ್ತದೆ ಎಂಬ ತಪ್ಪುಗ್ರಹಿಕೆಯಿಂದಾಗಿ ಅಂತ್ಯಕ್ರಿಯೆಗೆ ಅವಕಾಶ ನೀಡದ, ರಸ್ತೆಯಲ್ಲೇ ಶವ ಬಿಟ್ಟಿರುವ ಪ್ರಕರಣಗಳು ವರದಿಯಾಗುತ್ತಿವೆ.

ತಪ್ಪುಕಲ್ಪನೆಯಿಂದಾಗಿ ಶವ ಪಡೆಯಲು ಕುಟುಂಬ ಸದಸ್ಯರೂ ಹಿಂದೇಟು ಹಾಕುತ್ತಿದ್ದಾರೆ. ಇನ್ನೊಂದೆಡೆಆರೋಗ್ಯ ಸಿಬ್ಬಂದಿ ಅನಾಥ ಶವಗಳ ನಿರ್ವಹಣೆಗೆ ಮುಂದಾದರೆ ಅಲ್ಲಲ್ಲಿ ಸ್ಥಳೀಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.

ಕೋವಿಡ್‌ ಪೀಡಿತ ವ್ಯಕ್ತಿ ಮೃತಪಟ್ಟ ಬಳಿಕವೂ ದೇಹದಲ್ಲಿ ಸೋಂಕು ಕ್ರಿಯಾಶೀಲವಾಗಿರುತ್ತದೆ. ಶವಗಳನಿರ್ವಹಣೆ ಹಾಗೂ ಸಂಸ್ಕಾರಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತುಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಪ್ರಕಟಿಸಿದೆ. ಆ ಪ್ರಕಾರ ಅಂತ್ಯಸಂಸ್ಕಾರ ನಡೆಸಬೇಕು. ಆದರೆ, ರಾಜ್ಯದ ಕೆಲವೆಡೆ ಅಂತ್ಯಕ್ರಿಯೆಗೆ ಸ್ಥಳೀಯರಿಂದ ಅಡ್ಡಿ ವ್ಯಕ್ತವಾಗುತ್ತಿದೆ. ನಿಯಮಗಳನ್ನು ಗಾಳಿಗೆ ತೂರಿ, ರಸ್ತೆ ಬದಿಯಲ್ಲಿಯೇ ಶವ ಸುಡುವ ಹಾಗೂ ಹೂಳುವ ಘಟನೆಗಳು ಹೆಚ್ಚುತ್ತಿವೆ.

ಅನಗತ್ಯ ಭಯ: ವೈಜ್ಞಾನಿಕವಾಗಿ ಅಂತ್ಯಕ್ರಿಯೆ ನಡೆಸಿದಲ್ಲಿ ಸೋಂಕು ಹರಡುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಈಗಾಗಲೇ ಸ್ಪಷ್ಟಪಡಿಸಿದೆ. ಮೃತನ ದೇಹದಿಂದ ದ್ರವ ಹೊರಬರಬಾರದು ಎಂದು ಮೂಗು ಸೇರಿದಂತೆ ವಿವಿಧ ರಂಧ್ರಗಳನ್ನು ಮುಚ್ಚಲಾಗುತ್ತದೆ. ದೇಹಕ್ಕೆ ಶೇ 1ರಷ್ಟು ಸೋಡಿಯಂ ಹೈಪೋಕ್ಲೋರೈಟ್ ಸಿಂಪಡಿಸಿ, ಬ್ಯಾಗ್ ಮಾದರಿ ಚೀಲದಲ್ಲಿರಿಸಿ ಅದರ ಹೊರಗಡೆಯೂ ಸೋಂಕು ನಿವಾರಕ ಸಿಂಪಡಿಸಲಾಗುತ್ತದೆ.

‌‘ಆರೋಗ್ಯ ಸಿಬ್ಬಂದಿಗೆ ಜನರು ಅಗತ್ಯ ಸಹಕಾರ ನೀಡಬೇಕು. ಶವ ಹೂಳಿದರೆ ಅಥವಾ ದಹಿಸಿದರೆ ಸೋಂಕು ಹರಡುವುದಿಲ್ಲ’ ಎಂದು ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯ ಅಧೀಕ್ಷಕಡಾ. ಅನ್ಸರ್ ಅಹಮದ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲ ಪ್ರಕರಣಗಳು

*ತಾಯಿ ಶವ ಸಂಸ್ಕಾರಕ್ಕೆ ವ್ಯಕ್ತವಾದ ವಿರೋಧದಿಂದ ಕಾರವಾರದಲ್ಲಿ ಸೀಬರ್ಡ್‌ ನೌಕಾಪಡೆಯ ಸಿಬ್ಬಂದಿಯೊಬ್ಬರು ಪರದಾಡಿದ್ದರು.

*ಹೊನಗನಹಳ್ಳಿ 55 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆಗೆ ಸಂಬಂಧಿಕರು ಮಂಡ್ಯ–ಮೈಸೂರು ಜಿಲ್ಲೆಗಳ ನಡುವೆ ಅಲೆದಾಟ ನಡೆಸಿದರು.

*ಮೃತದೇಹ ಹೂಳಲು ಗುಂಡಿ ತಗೆಯಲು ಕರೆಸಿದ್ದ ಜೆ.ಸಿ.ಬಿಗೆ ಅಡ್ಡನಿಂತು ಪ್ರತಿಭಟಿಸಿದ ಘಟನೆ ಗಂಗಾವತಿಯಲ್ಲಿ ನಡೆದಿದೆ.

*ಚನ್ನಗಿರಿಯಲ್ಲಿ 56 ವರ್ಷದ ಮಹಿಳೆ ಶವವನ್ನು ಅಂತ್ಯಕ್ರಿಯೆ ಸ್ಥಳಕ್ಕೆ ಜೆ.ಸಿ.ಬಿಯಲ್ಲಿ ತಂದು ಹಾಕಲಾಗಿತ್ತು.

*ಬಳ್ಳಾರಿಯಲ್ಲಿ ಕೋವಿಡ್‍ ಪೀಡಿತರ ಶವವನ್ನು ಗುಂಡಿಗೆ ಎಸೆದು ಅಂತ್ಯಸಂಸ್ಕಾರ ಮಾಡಲಾಗಿತ್ತು.

***

ಮೃತ ದೇಹದಿಂದ ಸೋಂಕು ಹರಡುವುದು ಕಡಿಮೆ. ಅಂತ್ಯ ಸಂಸ್ಕಾರದ ಬಳಿಕ ಸಿಬ್ಬಂದಿ ವೈಯಕ್ತಿಕ ಸುರಕ್ಷಾ ಸಾಧನಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು

- ಡಾ.ಸಿ. ನಾಗರಾಜ್, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ

***

ಮೃತ ದೇಹವನ್ನು ಬ್ಯಾಗಿನಲ್ಲಿ ಇರಿಸಿ, ಏಳು ಅಡಿ ಆಳದಲ್ಲಿ ಹೂಳಬೇಕು. ಅಥವಾ ಸಂಪೂರ್ಣವಾಗಿ ದೇಹ ಸುಟ್ಟಿರುವುದನ್ನು ಖಚಿತಪಡಿಸಿಕೊಳ್ಳಬೇಕು

- ಡಾ. ಅನ್ಸರ್ ಅಹಮದ್, ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯ ಅಧೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT