ಭಾನುವಾರ, ಸೆಪ್ಟೆಂಬರ್ 26, 2021
21 °C

ರಾಜ್ಯದ ರಾಜಕಾರಣಿಗಳಿಗೂ ಕೊರೊನಾ ಸೋಂಕು...

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ರಾಜಕಾರಣಿಗಳಿಗೆ ಕೋವಿಡ್‌ ಸೋಂಕು–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಶ್ರೀಮಂತ, ಬಡವ, ಸ್ಟಾರ್‌ ನಟ–ನಟಿ, ವಿಜ್ಞಾನಿ, ಯೋಧ, ಶಿಕ್ಷಕ, ರಾಜಕಾರಣಿ, ಅಧಿಕಾರಿ, ವೈದ್ಯ,...ಯಾರಾದರೇನು ಕೊರೊನಾ ಸೋಂಕಿಗೆ? ಅಂತಸ್ತು, ಜಾತಿ–ಧರ್ಮ–ದೇಶ ಯಾವುದರ ತಡೆಗೋಡೆಯೂ ಇಲ್ಲದೆ ಸರ್ವವ್ಯಾಪಿಯಾಗಿರುವ ಕೊರೊನಾ ಸೋಂಕಿನ ಪ್ರಭಾವಕ್ಕೆ ಒಳಗಾಗುತ್ತಿರುವ ಪೈಕಿ ರಾಜಕೀಯ ಮುಖಂಡರ ಸಂಖ್ಯೆಯೂ ಹೆಚ್ಚುತ್ತಿದೆ. ಇಲ್ಲೂ ಕಾರ್ಯಕರ್ತ, ಕಾರ್ಪೊರೇಟರ್‌, ಶಾಸಕ, ಸಂಸದರೆಂಬ ಭೇದ–ಭಾವಗಳಿಲ್ಲಿ. ಕುಲ ಕುಲವೆಂದು ಹೊಡೆದಾಡದ ಕೊರೊನಾಗೆ ಸಿಕ್ಕವರೆಲ್ಲ ತವರು ಮನೆಯವರೇ.

ಕಾರ್ಯಕ್ರಮಗಳು, ಜನರ ಮನವಿಗಳನ್ನು ಕೇಳುವುದು, ಕ್ಷೇತ್ರದಲ್ಲಿ ಸಂಚಾರ ರಾಜಕಾರಣಿಗಳಿಗೆ ಇದ್ದದ್ದೇ. ಜನಪ್ರತಿನಿಧಿ ಆಗಿರುವುದರಿಂದ ರಾಜಕಾರಣಿ ಮನೆ ಬಾಗಿಲು ಹಾಕಿ, ಯಾರನ್ನೂ ಬಿಟ್ಟುಕೊಳ್ಳದಂತೆ, ಎಲ್ಲಿಯೂ ಹೋಗದಂತೆ ಇರುವುದು ಅಸಾಧ್ಯ. ರಾಜಕೀಯ ಮುಖಂಡರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೂ ಕಾರಣವಾಗಿದೆ. ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿರುವ ಮುಖಂಡರಿಗೆ ಕೋವಿಡ್‌ ದೃಢಪಡುತ್ತಿದ್ದಂತೆ ಅವರ ಸಹಾಯಕರು, ಜೊತೆಯಲ್ಲಿದ್ದವರು ಹಾಗೂ ಭೇಟಿಯಾದ ಜನರು ಸಹ ಇಕ್ಕಟ್ಟಿಗೆ ಸಿಕ್ಕಿದ ಸ್ಥಿತಿ ನಿರ್ಮಾಣವಾಗುತ್ತಿದೆ.

ಸಂಸದೆ ಸುಮಲತಾ: ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್‌ ಅವರಿಗೆ ಇತ್ತೀಚೆಗಷ್ಟೇ ಕೋವಿಡ್‌–19 ದೃಢಪಟ್ಟಿದೆ. ಅವರು ಮನೆಯಲ್ಲಿಯೇ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೆ ಒಳಗಾಗಿರುವುದು ತಿಳಿಯುವುದಕ್ಕೂ ವಾರದ ಮುಂಚೆ (ಜೂನ್‌ 30) ಸುಮಲತಾ ಅವರು ನಾಗಮಂಗಲ ತಾಲ್ಲೂಕು ಬ್ರಹ್ಮದೇವರಹಳ್ಳಿ ಭೇಟಿ ನೀಡಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ್ದರು. ಅವರೊಂದಿಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಪಾಲ್ಗೊಂಡಿದ್ದರು. ಜೊತೆಗೆ ಮಂಡ್ಯ ರೈತ ಸಭಾಂಗಣದಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ಅಭಿನಂದಿಸಿದ್ದರು. ಅವರಿಗೆ ಬೆಂಬಲಿಗರು ಹಾಗೂ ಅಧಿಕಾರಿಗಳು ಸಾಥ್‌ ಕೊಟ್ಟಿದ್ದರು.

ಪಾಂಡವಪುರ ಸರ್ಕಾರಿ ಶಾಲೆಯ ಕಾಂಪೌಂಡ್‌ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಜುಲೈ 1ರಂದು ಬೆಸಗರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಬಸ್‌ ನಿಲ್ದಾಣ ಕಾಮಗಾರಿ ವೀಕ್ಷಣೆ ಮಾಡಿದ್ದರು. ಸಮುದಾಯ ಭವನದ ಬಳಿ ಹಸಿರು ಕರ್ನಾಟಕ ಯೋಜನೆಯಡಿ ಸಸಿ ನೆಟ್ಟಿದ್ದರು ಹಾಗೂ ಗ್ರಾಮಸ್ಥರಿಗೆ ಸಸಿ ವಿತರಣೆ ಮಾಡಿದ್ದರು.

ಕಾಂಗ್ರೆಸ್‌ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಅವರಿಗೂ ಕೊರೊನಾ ಸೋಂಕು ತಗುಲಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಸಕರಿಗೆ ಸೋಂಕು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಕೋವಿಡ್ –19 ದೃಢಪಟ್ಟಿದೆ. ರಾಜೇಗೌಡ ಅವರು ಎನ್.ಆರ್. ಪುರ, ಶೃಂಗೇರಿ, ಕೊಪ್ಪದಲ್ಲಿ ಈಚೆಗೆ ಸಭೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ರಾಜೇಗೌಡ ಅವರು ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಹೋಗಿ ಬಂದಿದ್ದರು. ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುಣಿಗಲ್ ಶಾಸಕ ಡಾ.ರಂಗನಾಥ್‌ ಅವರಿಗೂ ಕೊರೊನಾ ಸೋಂಕು ಧೃಡಪಟ್ಟಿದೆ. ಅವರು ಸಹ ಡಿ.ಕೆ.ಶಿವಕುಮಾರ್‌ ಕೆಪಿಪಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಳೆದ ವಾರ ಅಧಿಕಾರಿಗಳ ಸಭೆಯಲ್ಲಿ ತಹಶೀಲ್ದಾರ್ ವಿಶ್ವನಾಥ್, ಸಿಪಿಐ ನಿರಂಜನ್ ಕುಮಾರ್, ಟಿಎಚ್ಒ ಜಗದೀಶ್, ಇಒ ಶಿವರಾಜಯ್ಯ ಜತೆಗೆ ವೇದಿಕೆ ಹಂಚಿಕೊಂಡಿದ್ದರು. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರು ನಗರದ ಉತ್ತರ ಭಾಗದ ಶಾಸಕ ಬಿಜೆಪಿಯ ಭರತ್ ಶೆಟ್ಟಿ ಕೂಡ ಸೋಂಕಿಗೆ ಒಳಗಾಗಿದ್ದಾರೆ.

ಹೊಸಕೋಟೆಯ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರಿಗೂ ಸೋಂಕು ದೃಢಪಟ್ಟಿದ್ದು, ವೈದ್ಯರ ಸಲಹೆಯಂತೆಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ವಿಧಾನ ಪರಿಷತ್‌ ಸದಸ್ಯರು:  ಚಿಕ್ಕಮಗಳೂರು ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಅವರಿಗೆ ಜುಲೈ 6ರಂದು ಸೋಂಕು ದೃಢಪಟ್ಟಿದೆ. ಜುಲೈ 1ರಂದು ಕಂದಾಯ ಸಚಿವ ಆರ್.ಅಶೋಕ್ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದರು. ಅವರೊಟ್ಟಿಗೆ ಪ್ರಾಣೇಶ್ ಕೂಡ ಪಾಲ್ಗೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಪತ್ರಕರ್ತರು ಕೂಡ ಜತೆಯಾಗಿದ್ದರು.

ಮತ್ತೊಬ್ಬ ಎಂಎಲ್‌ಸಿ  ಜೆಡಿಎಸ್‌ನ ಎಸ್‌.ಎಲ್‌.ಬೋಜೇಗೌಡ ಸಹ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ನಗರಸಭೆ ಮಾಜಿ ಸದಸ್ಯರೊಬ್ಬರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೂ ಕೋವಿಡ್‌ ದೃಢಪಟ್ಟಿದೆ. ರಾಮನಗರ ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಣ್ಣಗೆ ಕಳೆದ ವಾರ ಕೋವಿಡ್-19 ಸೋಂಕು ದೃಢಪಟ್ಟಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ಕಾರ್ಪೊರೇಟರ್‌: ಮೇನಲ್ಲೇ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಸೋಂಕು ದೃಢಪಟ್ಟಿತ್ತು. ಅವರು ಆಸ್ಪತ್ರೆಗೆ ಹೋಗುವ ವೇಳೆ ಹೆಚ್ಚು ಜನರನ್ನು ಸೇರಿಸಿದ್ದರು. ಈ ಸಂಬಂಧ ಅವರು ಹಾಗೂ ಬೆಂಬಲಿಗರ ವಿರುದ್ಧ ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು