ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆಯ ನೆನಪು; ನೆರವಿನ ಹರಿವು

ಸಂಕಷ್ಟ ಕಾಲದಲ್ಲಿ ಕೈಹಿಡಿಯುವ ಪ್ರಯತ್ನ, ಗ್ರಾಮೀಣ ಪ್ರದೇಶದಲ್ಲಿ ಪರಸ್ಪರ ಸಹಕಾರ
Last Updated 2 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸತತ ಎರಡು ವರ್ಷ ಮಹಾಮಳೆ ಸುರಿದು ಕಾರ್ಮಿಕರು, ರೈತರು, ಪ್ರವಾಸೋದ್ಯಮ ಅವಲಂಬಿತರು ಹಾಗೂ ಜನಸಾಮಾನ್ಯರನ್ನು ಬೀದಿಗೆ ತಂದು ನಿಲ್ಲಿಸಿತ್ತು. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಕೊಡಗು ಜಿಲ್ಲೆಯಲ್ಲಿ, ಈಗ ಕೋವಿಡ್–19 ಕರಿನೆರಳು ಚಾಚಿದೆ.

ಇಡೀ ಜಿಲ್ಲೆಯ ವ್ಯವಸ್ಥೆಯೇ ಮತ್ತೊಮ್ಮೆ ಬುಡಮೇಲಾಗಿದೆ. ಕಾಫಿ ತೋಟಗಳಲ್ಲಿ ಕೆಲಸ ಸ್ಥಗಿತವಾಗಿದೆ. ಮಾಲೀಕರೂ ತೋಟದತ್ತ ಮುಖ ಮಾಡುತ್ತಿಲ್ಲ. ಲೈನ್‌ಮನೆಯಲ್ಲಿ ವಾಸವಿದ್ದ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ಕಾರ್ಮಿಕರು ಸ್ವಗ್ರಾಮಕ್ಕೆ ಸೇರಿದ್ದಾರೆ. ಮತ್ತೆ ಕೆಲವರು ಊರಿಗೆ ಮರಳುವ ಹಾದಿಯಲ್ಲಿ ಪೊಲೀಸರಿಗೆ ಸಿಕ್ಕಿ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ಆಗಿದ್ದಾರೆ. ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳು ಬಾಗಿಲು ಮುಚ್ಚಿ 15 ದಿನವಾಗಿದೆ.

ಉತ್ತರ ಕೊಡಗು ಭಾಗದಲ್ಲಿ ತರಕಾರಿ ಬೆಳೆಗಾರರು, ಮಾರುಕಟ್ಟೆಗೆ ಟೊಮೆಟೊ, ಹಸಿರು ಮೆಣಸಿನಕಾಯಿ ಸಾಗಣೆ ಮಾಡಲು ಸಾಧ್ಯವಾಗದೆ ರಸ್ತೆಯಲ್ಲೇ ಚೆಲ್ಲಿ ಕಣ್ಣೀರ ಜತೆಗೆ ಮನೆಗೆ ಮರಳುತ್ತಿದ್ದಾರೆ.

ಅಂದು ಕಲಿಸಿದ್ದ ಪಾಠ: ಮಹಾಮಳೆ, ಭೂಕುಸಿತ, ಪ್ರವಾಹ ಜಿಲ್ಲೆಯಲ್ಲಿ ಅಂದು ಮಾನವೀಯತೆ ಪಾಠ ಕಲಿಸಿತ್ತು. ಕಷ್ಟದ ಕಾಲದಲ್ಲಿ ಹೇಗೆ ಬದುಕಬೇಕು, ಪರಸ್ಪರ ಹೇಗೆಲ್ಲಾ ಸಹಾಯ ಮಾಡುವ ಮೂಲಕ ಸೌಹಾರ್ದ ಮೆರೆಯಬೇಕು ಎಂಬುದು ಗೊತ್ತಾಗಿತ್ತು. ಈಗ ಅಂತಹದ್ದೇ ಪರಿಸ್ಥಿತಿ ಜಿಲ್ಲೆಯಲ್ಲಿ ಮತ್ತೆ ಮರಳಿದೆ. ಜಿಲ್ಲೆಯ ಎಲ್ಲೆಡೆ ಮಾನವೀಯತೆ ನೆನಪಿಸುತ್ತಿದೆ.

ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಅಲ್ಲಲ್ಲಿ ಪರಸ್ಪರ ಸಹಾಯ, ಸಹಕಾರದ ಸನ್ನಿವೇಶಗಳು ಕಾಣುತ್ತಿವೆ. ಇದ್ದವರು ‘ಇಲ್ಲ’ದವರ ಕೈಹಿಡಿಯುತ್ತಿದ್ದಾರೆ. ಜಿಲ್ಲಾಡಳಿತ ಸ್ಥಾಪಿಸಿರುವ ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆಗೂ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.

ಪ್ರಾಕೃತಿಕ ವಿಕೋಪದ ವೇಳೆ ಹೊರ ಜಿಲ್ಲೆಗಳಿಂದ ನೆರವು ಹರಿದುಬಂದಿತ್ತು. ಆದರೆ, ಈಗ ಜಿಲ್ಲೆಯ ಒಳಗೇ ಪರಸ್ಪರ ನೆರವು ನೀಡಿ ಮಾನವೀಯ ಮೆರೆಯುತ್ತಿದ್ದಾರೆ ಕಾಫಿ ನಾಡಿನ ಜನರು.

ತೊಟ್ಟಿಲು ತುಂಬುತ್ತಿದೆ: ಜಿಲ್ಲೆಯ ಐದು ಸ್ಥಳಗಳಲ್ಲಿ ದಾಣಿಗಳಿಂದ ಆಹಾರ ಪದಾರ್ಥ ಸಂಗ್ರಹಿಸಲು ‘ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ’ ಸ್ಥಾಪಿಸಲಾಗಿತ್ತು. ನಾಲ್ಕು ದಿನಗಳಲ್ಲಿ ಸಾಕಷ್ಟು ವಸ್ತುಗಳನ್ನು ಹಾಕಿದ್ದು ಅದರ ವಿತರಣಾ ಕಾರ್ಯವೂ ಆರಂಭವಾಗಿದೆ. ಇದುವರೆಗೂ 1,933 ಕೆ.ಜಿ ಅಕ್ಕಿ, 752 ಕೆ.ಜಿ ಬೇಳೆ, 301 ಲೀಟರ್ ಅಡುಗೆ ಎಣ್ಣೆ, 500 ಕೆ.ಜಿ ಸಕ್ಕರೆ, 1,325 ಕೆ.ಜಿ ಅಡುಗೆ ಉಪ್ಪು, 250 ಕೆ.ಜಿ ಈರುಳ್ಳಿಯನ್ನು ದಾನಿಗಳು ನೀಡಿದ್ದಾರೆ.

ಮಡಿಕೇರಿಯಲ್ಲಿ ಸ್ಥಾಪಿಸಿರುವ ಪೆಟ್ಟಿಗೆಗೆ ವಾಹಿನಿ –24 ಕರ್ನಾಟಕದ ನಿರ್ದೇಶಕರೂ ಆಗಿರುವ ಉದ್ಯಮಿಗಳಾದ ಶರೀನ್ ಹಾಗೂ ಜಗದೀಶ್ ರೈ ಅವರು ದೊಡ್ಡ ನೆರವು ನೀಡಿದ್ದಾರೆ.

1,500 ಕೆ.ಜಿ. ಅಕ್ಕಿ, 250 ಕೆ.ಜಿ. ಈರುಳ್ಳಿ, 250 ಕೆ.ಜಿ ಬೇಳೆ, 300 ಲೀಟರ್‌ ಅಡುಗೆ ಎಣ್ಣೆ, 10 ಬ್ಯಾಗ್ ಉಪ್ಪನ್ನು ಪೆಟ್ಟಿಗೆ ಹಾಕಿ ಕಾರ್ಮಿಕರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ್ದಾರೆ. ಅವರ ನೆರವು ಕಾರ್ಮಿಕರ ಹೊಟ್ಟೆ ತುಂಬಿಸುತ್ತಿದೆ. ಇದೇ ರೀತಿ ಇನ್ನೂ ಹಲವರು ಸಣ್ಣಪುಟ್ಟ ನೆರವು ನೀಡಲು ಮುಂದೆ ಬಂದಿದ್ದಾರೆ. ಇದೇ ಉದ್ಯಮಿಗಳು ಗುರುವಾರ 40 ಪತ್ರಕರ್ತರಿಗೆ ಅಗತ್ಯ ಸಾಮಗ್ರಿಗಳ ಕಿಟ್‌ ವಿತರಣೆ ಮಾಡಿದರು.

ಗುಡ್ಡೆಹೊಸೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಅಬ್ದುಲ್‌ ಲತೀಫ್ ಅವರೂ ತಮ್ಮ ಕ್ಷೇತ್ರವೂ ಸೇರಿದಂತೆ ಅಗತ್ಯವಿರುವ ಕಡೆ ಆಹಾರ ಕಿಟ್‌ ವಿತರಣೆ ಮಾಡುತ್ತಿದ್ದಾರೆ.

ಪೊಲೀಸರಿಗೆ ತಿಂಡಿ:
ಕೊರೊನಾ ವಾರಿಯರ್ಸ್‌ ಆಗಿ ಕೆಲಸ ಮಾಡುತ್ತಿರುವ ಪೊಲೀಸರೂ ಒಂದು ವಾರದಿಂದ ಬೀದಿಯಲ್ಲೇ ಕಷ್ಟ ಪಡುತ್ತಿದ್ದಾರೆ. ಅವರ ಸಂಕಷ್ಟಕ್ಕೂ ಕೆಲವು ಸಂಘ–ಸಂಸ್ಥೆಗಳು ಮಿಡಿಯುತ್ತಿವೆ. ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಸದಸ್ಯ ಸುರೇಶ್ ಅವರು, ಬುಧವಾರ ಬೆಳಿಗ್ಗೆ ಮಡಿಕೇರಿಯಲ್ಲಿ ಕರ್ತವ್ಯ ನಿತರ ಪೊಲೀಸ್‌ ಸಿಬ್ಬಂದಿಗೆ ಉಪಾಹಾರದ ವ್ಯವಸ್ಥೆ ಮಾಡಿದ್ದರು. ಇನ್ನು ಜೀವನ್‌ ಅವರು ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಮಾಸ್ಕ್‌ ದಾನ ಮಾಡಿದ್ದಾರೆ.

ಬೀದಿ ನಾಯಿಗಳಿಗೆ ಊಟದ ವ್ಯವಸ್ಥೆ
ಇನ್ನು ಕಾರ್ಮಿಕರ ಗುಡಿಸಲು ಹಾಗೂ ಅಂಗಡಿಗಳ ಎದುರು ಸಿಕ್ಕ ಆಹಾರ ತಿಂದು ಬದುಕುತ್ತಿದ್ದ ಬೀದಿ ನಾಯಿಗಳೂ ಲಾಕ್‌ಡೌನ್‌ ಬಳಿಕ ಆಹಾರ ಇಲ್ಲದೆ ಕಂಗಾಲಾಗಿವೆ. ಆ ನಾಯಿಗಳಿಗೆ ಸಿದ್ದಾಪುರದಲ್ಲಿ ಸಿಟಿ ಬಾಯ್ಸ್‌ ತಂಡದ ಸದಸ್ಯರು ಪ್ರತಿನಿತ್ಯ ಆಹಾರ ತಯಾರಿಸಿ ಹಾಕುವ ಮೂಲಕ ಬೀದಿ ನಾಯಿಗಳ ಹಸಿವು ನೀಗಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT